ಭಾರತೀಯ ಜ್ಞಾನಧಾರೆಗಳ ಪರವಾದ ನಿರ್ಭೀತ ಧ್ವನಿ

ಬಿ.ಎಸ್. ಜಯಪ್ರಕಾಶ ನಾರಾಯಣ, ಪತ್ರಕರ್ತರು, ಲೇಖಕರು, ಅನುವಾದಕರು

ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಮತ್ತು ಸಂವಾದಗಳ ವಲಯವನ್ನು ಪರಿಗಣನೆಗೆ ತೆಗೆದುಕೊಂಡರೆ, ಅದು ಎಷ್ಟೊಂದು ಪ್ರತಿಗಾಮಿಯಾಗಿದೆ ಎನ್ನುವುದು ಕಣ್ಣಿಗೆ ರಾಚುವಂತಿದೆ. ಈ ಹಿಮ್ಮುಖ ಚಲನೆಗೇ `ಪ್ರಗತಿಪರ’ ಎನ್ನುವ ಹೆಸರಿರುವುದು ವಿರೋಧಾಭಾಸ! ಸಾಹಿತ್ಯ, ಸಂಸ್ಕೃತಿ, ಸಮಾಜ, ಭಾಷೆ, ಧರ್ಮ, ತತ್ತ್ವಜ್ಞಾನ, ರಾಷ್ಟ್ರೀಯತೆ, ರಾಜಕಾರಣ, ಶಿಕ್ಷಣ ಇತ್ಯಾದಿಗಳನ್ನು ಕುರಿತು ನಿಜವಾಗಿಯೂ ಒಂದು ದೊಡ್ಡ ಪರಿಪ್ರೇಕ್ಷ್ಯದಲ್ಲಿ ಪುರೋಗಾಮಿಗಳಾಗಿ ಕೆಲಸ ಮಾಡುತ್ತಿರುವವರನ್ನು `ನೆಗೆಟಿವ್’ ಆಗಿ ನೋಡಲಾಗುತ್ತಿದ್ದು, ಇವರಿಗೆಲ್ಲ ಸಲ್ಲದ ಹಣೆಪಟ್ಟಿಗಳನ್ನು ಹಚ್ಚಿ, ಖಳರಂತೆ ಬಿಂಬಿಸಲಾಗುತ್ತಿದೆ. ಇದೊಂದು ವಿಪರ್ಯಾಸ. ಇದು ಇದ್ದಕ್ಕಿದ್ದಂತೆ ಆವಿರ್ಭವಿಸಿದ್ದೇನಲ್ಲ. ಬದಲಿಗೆ, ಹಲವು ದಶಕಗಳಿಂದಲೂ ಅವ್ಯಕ್ತವಾಗಿದ್ದ ಅಥವಾ ಅದುಮಲ್ಪಟ್ಟಿದ್ದ ಪುರೋಗಾಮಿ ಧ್ವನಿಗಳು, ಚಿಂತನೆಗಳು, ಸಾಹಿತ್ಯಸೃಷ್ಟಿ ಇವೆಲ್ಲಕ್ಕೂ ಒಂದು ಅವಕಾಶ ಸ್ವಲ್ಪ ಮಟ್ಟಿಗಾದರೂ ಸಿಕ್ಕಲು ಶುರುವಾದ ಮೇಲೆ ಇಲ್ಲಿರುವ ಈ ಒಮ್ಮುಖ ಚಿಂತನೆ ಢಾಳಾಗಿ ಕಾಣುತ್ತಿದೆಯಷ್ಟೆ. ಒಟ್ಟಿನಲ್ಲಿ, ನಾಲ್ಕು ದಶಕಗಳಿಂದೀಚೆಗೆ ಅಖಿಲ ಭಾರತ ಮಟ್ಟದಲ್ಲಿ ರಾಜಕೀಯದ ದಿಕ್ಕುದೆಸೆ ಬದಲಾಗಿ, ಕಾಂಗ್ರೆಸ್ಸಿಗೆ ಪರ್ಯಾಯವಾದ ರಾಜಕೀಯ ಸಂಸ್ಕೃತಿ ಪ್ರಬಲವಾಗಿ ಬೆಳೆದಿದ್ದರ ಪರಿಣಾಮಗಳಲ್ಲಿ ಇದೂ ಒಂದು.

ಕನ್ನಡದ ಆಧುನಿಕ ಸಾಹಿತ್ಯದ ಆರಂಭಿಕ ಕಾಲಘಟ್ಟವನ್ನು –ನವೋದಯ ಸಾಹಿತ್ಯ– ನೋಡಿದರೆ, ಅವರೆಲ್ಲರೂ ರಾಷ್ಟ್ರೀಯವಾದಿಗಳೇ ಆಗಿದ್ದರು. ದೇಶ, ಭಾಷೆ, ಸಮಾಜಗಳ ಬಗ್ಗೆ ಅಭಿಮಾನಧನರಾಗಿದ್ದರು. ಸಾಮಾನ್ಯವಾಗಿ ನಮ್ಮ ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ, ಬಳಿಕ ನಡೆದ ಕರ್ನಾಟಕ ಏಕೀಕರಣ ಹೋರಾಟ ಇವೇ ಆಗಿನ ಸಾಹಿತಿಗಳ ಮೂಲಧಾತುಗಳಾಗಿದ್ದವು. ಹೀಗಿದ್ದುಕೊಂಡೇ ಅವರೆಲ್ಲರೂ ವ್ಯವಸ್ಥೆಯ ಸುಧಾರಣೆಗೆ `ಕ್ರಿಟಿಕಲ್ ಇನ್-ಸೈಡರ್ಸ್’ಗಳಾಗಿ ತಮ್ಮ ತುಡಿತ-ಮಿಡಿತಗಳನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಪ್ರಗತಿಶೀಲರ ಕಾಲಕ್ಕೆ ನಮ್ಮ ಸಾಹಿತಿಗಳು ಸಾಮ್ಯವಾದದ ಕಡೆಗೆ ಹೋಗಿಬಿಟ್ಟರು. ಈ ಪಂಥದಲ್ಲಿದ್ದೂ ಅಪವಾದವಾಗಿದ್ದವರೆಂದರೆ, ಅ.ನ.ಕೃಷ್ಣರಾಯರು. ಬಳಿಕ ಬಂದ ನವ್ಯರ ಕಾಲದಲ್ಲಿ ಅದರ ಅಧ್ವರ್ಯುಗಳಾದ ವಿನಾಯಕ ಕೃಷ್ಣ ಗೋಕಾಕರು ಮತ್ತು ಗೋಪಾಲಕೃಷ್ಣ ಅಡಿಗರನ್ನು ಹೊರತುಪಡಿಸಿದರೆ, ಮಿಕ್ಕವರೆಲ್ಲರೂ ಬಹುಮಟ್ಟಿಗೆ ಈ ದೇಶಕ್ಕೂ ತಮಗೂ ಯಾವ ಸಂಬಂಧವೂ ಇಲ್ಲವೆನ್ನುವಂತಹ ಧೋರಣೆಯನ್ನು ಮೈಗೂಡಿಸಿಕೊಂಡು, ತಮ್ಮದೇ ಆದ `ಕಂಫರ್ಟ್ ಝೋನ್’ಗಳಲ್ಲಿ ಮುಳುಗಿ ಹೋದರು. ನಂತರದಲ್ಲಿ ಕಾಣಿಸಿಕೊಂಡ ಬಂಡಾಯ ಮತ್ತು ದಲಿತ ಸಾಹಿತ್ಯಗಳಂತೂ ಸಾಮಾಜಿಕ ಸಂಘರ್ಷದ ಮೂಲಕವೇ ತಮ್ಮ ಸಮುದಾಯಗಳ ಉನ್ನತಿ ಸಾಧ್ಯವೆಂದು ನಂಬಿಕೊಂಡು, ಅಲ್ಲೇ ನಿಂತುಬಿಟ್ಟವು. ಇಷ್ಟು ವರ್ಷಗಳ ನಂತರವೂ ಈ ಸೀಮಿತ ವರ್ತುಲದಿಂದ ಹೊರಬರುವುದು ಈ ಪಂಥದವರಿಗೆ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಕನ್ನಡ ಸಾಹಿತ್ಯದಲ್ಲಿ ನವೋದಯದ ಕಾಲಘಟ್ಟವೊಂದನ್ನು ಬಿಟ್ಟರೆ ಉಳಿದ ಧಾರೆಗಳಲ್ಲಿ ಭೂಮವೂ ಭವ್ಯವೂ ಆದ ದೃಷ್ಟಿಕೋನಗಳು ಇಲ್ಲದಿರುವುದು ಎದ್ದು ಕಾಣುತ್ತದೆ.

ನಮ್ಮ ಸದ್ಯದ ಕನ್ನಡ ಸಾಹಿತ್ಯಲೋಕದಲ್ಲೊಂದು ವ್ಯಂಗ್ಯವಿದೆ. ಅದೇನೆಂದರೆ, ತಥಾಕಥಿತ `ಪ್ರಗತಿಪರರು’ ತಮ್ಮ ವಿಚಾರಗಳಿಗೆ ಬಲ ತಂದುಕೊಳ್ಳಲು ಆತುಕೊಂಡಿರುವ ಕುವೆಂಪು ಅವರು ಪ್ರಖರ ರಾಷ್ಟ್ರೀಯವಾದಿಗಳಾಗಿದ್ದರು. ಶಂಕರರ ಅದ್ವೈತ, ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ವಿಚಾರಗಳು, ರಾಮಕೃಷ್ಣ ಮಠ, ನಮ್ಮ ವೇದೋಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತಗಳು, ಇಂಗ್ಲಿಷಿನ ವಿಲಿಯಂ ವರ್ಡ್ಸ್ ವರ್ತ್ ತರಹದ ನವೋದಯ ಕವಿ, ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ, ಭಾರತೀಯ ಪರಂಪರೆಯ ಆಧ್ಯಾತ್ಮಿಕತೆ ಇವೆಲ್ಲದರಿಂದಲೂ ಅವರು ಗಾಢವಾಗಿ ಪ್ರಭಾವಿತರಾಗಿದ್ದರು. ಹೀಗೆ ರೂಪುಗೊಂಡ ಕುವೆಂಪು ದಿನನಿತ್ಯವೂ ಬಹುಹೊತ್ತು ದೇವರ ಪೂಜೆ ಮಾಡುತ್ತಿದ್ದರು, ದಿನವೂ ರಾತ್ರಿ ಹೊತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಲಿಸುತ್ತಿದ್ದರು, ತಮ್ಮ ಪುತ್ರಿಯರನ್ನು ಸಂಗೀತ ಪಾಠಕ್ಕೆ ಕಳಿಸಿಕೊಡುತ್ತಿದ್ದರು ಎನ್ನುವುದನ್ನು ಈ ಗುಂಪು ಅಪ್ಪಿತಪ್ಪಿಯೂ ಹೇಳುತ್ತಿಲ್ಲ. ಅವರ ಆತ್ಮಕತೆ `ನೆನಪಿನ ದೋಣಿ’ಯಲ್ಲಿಯೇ ಇವೆಲ್ಲವೂ ದಾಖಲಾಗಿದೆ. ಹಾಗೆಯೇ, ಅವರ ಮಗಳು ತಾರಿಣಿಯವರು ಬರೆದಿರುವ `ಮಗಳು ಕಂಡ ಕುವೆಂಪು’ ಕೃತಿಯನ್ನು ನೋಡಿದರೂ ವ್ಯವಸ್ಥಿತವಾಗಿ ನೇಪಥ್ಯಕ್ಕೆ ಸರಿಸಲ್ಪಟ್ಟಿರುವ ಇಂತಹ ಸತ್ಯಗಳು ಗೊತ್ತಾಗುತ್ತವೆ. ಹಾಗೆಯೇ ಬಿಎಂಶ್ರೀ, ಬೇಂದ್ರೆ, ಡಿವಿಜಿ ಮುಂತಾದವರ ಸಾಹಿತ್ಯದಲ್ಲೂ ನಮ್ಮ ದೇಶ, ಭಾಷೆ, ಸಂಸ್ಕೃತಿ, ಧರ್ಮಗಳ ಪರವಾಗಿರುವ ವಿಶಾಲ ಚಿಂತನೆಗಳು ಸ್ವಯಂವೇದ್ಯವಾಗಿವೆ.

ಆದರೆ, ಸದ್ಯದ ಕನ್ನಡ ಸಾಹಿತ್ಯದಲ್ಲಿ ನಮ್ಮನ್ನು ಇದುವರೆಗೆ ಪೊರೆದಿರುವ ಸಂಗತಿಗಳ ಸಾರಾಸಗಟು ನಿರಾಕರಣೆ ಅಥವಾ ಅವುಗಳ ಬಗ್ಗೆ ತಿರಸ್ಕಾರ ದೃಷ್ಟಿಯೇ ಕಣ್ಣಿಗೆ ಹೊಡೆದಂತೆ ಕಾಣುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮನ್ನು ಆಳಲು ಶುರು ಮಾಡಿದವರು ಹಲವು ತತ್ಕಾಲೀನ ಲಾಭಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತಾಳಿದ ನಿಲುವುಗಳು, ರೂಪಿಸಿದ ಶಿಕ್ಷಣ ವ್ಯವಸ್ಥೆ, ಹುಟ್ಟುಹಾಕಿದ ಸಂಸ್ಥೆಗಳು, ಅಲ್ಲಿಗೆ ತಂದು ಕೂರಿಸಿದ ಪ್ರಭೃತಿಗಳು ಇದಕ್ಕಿರುವ ಕಾರಣಗಳು. ಈಗ ನಮ್ಮಲ್ಲಿ ಸಾಹಿತ್ಯ ಚರ್ಚೆ ಹೇಗಿದೆ ಎಂದರೆ, ಅಲ್ಲಿ ಸತ್ಯವನ್ನು ಪೂರ್ಣವಾಗಿ ಅರಿತುಕೊಳ್ಳಬೇಕೆಂಬ ಆಸಕ್ತಿಯ ಬದಲು ತಮ್ಮ ಧೋರಣೆಗೆ ಅನುಕೂಲವಾಗುವಂತಹ ಬಿಂದುಗಳಲ್ಲಿ ದೊಡ್ಡದೊಡ್ಡ ಸಾಹಿತಿಗಳ ವಿಚಾರಗಳನ್ನು ನಿಲ್ಲಿಸಿಕೊಳ್ಳುವ ರೋಗ ಬಲಿತಿದೆ. ಕುವೆಂಪು ಅವರ ಸಾಹಿತ್ಯವನ್ನೇ ಹೇಳುವುದಾದರೆ, ಅವರ ಒಂದು ಪದ್ಯದಲ್ಲಿ ಬರುವ `ನೂರು ದೇವರನೆಲ್ಲ ನೂಕಾಚೆ ದೂರ…… ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಈ ತರಹದ ಕೆಲವೇ ಕೆಲವು ಸಾಲುಗಳನ್ನು ಅಥವಾ ಅವರು ಬ್ರಾಹ್ಮಣರ ವಿರುದ್ಧ ಆಡಿರುವ/ಬರೆದಿರುವ ಸಾಲುಗಳು ಮಾತ್ರ ಕಿವಿಯ ಮೇಲೆ ಬೀಳುವಂತೆ ಮಾಡಲಾಗುತ್ತಿದೆ.

ಆದರೆ ಅದೇ ಕುವೆಂಪು ಅವರು `ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’, ಎಂದು ರವೀಂದ್ರನಾಥ ಟ್ಯಾಗೋರರ ಕವಿತೆಯೊಂದನ್ನು ಅನುವಾದಿಸಿರುವುದನ್ನಾಗಲಿ, ಶಂಕರರ `ನಿರ್ವಾಣಷಟ್ಕ’ವನ್ನು ಅವರು ಕನ್ನಡಕ್ಕೆ ತಂದಿರುವುದನ್ನಾಗಲಿ,  ಗೋಕುಲಾಷ್ಟಮಿಯ ಬಗ್ಗೆ ಬರೆದಿರುವುದನ್ನಾಗಲಿ, ವೀರ ಸಾವರ್ಕರ್ ಬಗ್ಗೆ ಅವರು ರಚಿಸಿರುವ ಸಾನೆಟ್ಟುಗಳನ್ನಾಗಲಿ, ಅವರು ಸದಾಶಿವ ಬ್ರಹ್ಮೇಂದ್ರರ `ಮಾನಸ ಸಂಚರರೇ’ ತರಹದ ಸಂಗೀತ ಕೃತಿಗಳನ್ನು ಇಷ್ಟಪಟ್ಟು ಆಲಿಸುತ್ತಿದ್ದರು ಎನ್ನುವುದನ್ನಾಗಲಿ, ಗಣೇಶನ ಹಬ್ಬವನ್ನು ಶ್ರದ್ಧೆ-ಸಂಭ್ರಮಗಳಿಂದ ಆಚರಿಸುತ್ತಿದ್ದರು ಎನ್ನುವುದನ್ನಾಗಲಿ ಯಾರೂ ಹೇಳುತ್ತಿಲ್ಲ. ಬೇಂದ್ರೆಯಂಥವರ ವಿಚಾರಕ್ಕೆ ಬಂದರೂ ಅಷ್ಟೆ. ಅವರ `ಜೋಗಿ’ ತರಹದ ಪದ್ಯದ ಪ್ರಸ್ತಾಪ ಕಾಣುತ್ತದೆಯೇ ಹೊರತು, ಅವರ `ಗಾಯತ್ರೀಸೂಕ್ತ’ವಾಗಲಿ, ಕಾಳಿದಾಸನ `ಮೇಘದೂತ’ದ ಅನುವಾದದ ಉಲ್ಲೇಖವಾಗಲಿ ಕೇಳಿಸುತ್ತಿಲ್ಲ. ಇವು ಒಂದೆರಡು ಉದಾಹರಣೆಗಳಷ್ಟೆ. ನಿಜ ಹೇಳಬೇಕೆಂದರೆ, ಹೆಚ್ಚಿನ ಕಡೆಗಳಲ್ಲಿ ಅಥವಾ ವ್ಯವಸ್ಥಿತವಾಗಿ ಪ್ರಚಾರ ಸಿಕ್ಕುವಂತೆ ನಡೆಯುವ ಸಾಹಿತ್ಯದ ಹೆಸರಿನ ಕಾರ್ಯಕ್ರಮಗಳಲ್ಲಿ ಆಲೂರು ವೆಂಕಟರಾಯರು, ಬಿಎಂಶ್ರೀ, ಎಸ್.ವಿ. ರಂಗಣ್ಣ, ಅನಕೃ, ಬಿ.ಜಿ.ಎಲ್.ಸ್ವಾಮಿ, ಪರಮೇಶ್ವರ ಭಟ್ಟರು, ಶಂಕರ ಮೊಕಾಶಿ ಪುಣೇಕರ, ಸಾ.ಕೃ. ರಾಮಚಂದ್ರರಾಯರು, ಎಸ್.ಆರ್. ರಾಮಸ್ವಾಮಿಗಳು, ಚಿದಾನಂದಮೂರ್ತಿಗಳು, ಎಲ್.ಎಸ್.ಶೇಷಗಿರಿರಾಯರು, ಬಾಬು ಕೃಷ್ಣಮೂರ್ತಿಗಳು, ಲಕ್ಷ್ಮಣ ತೆಲಗಾವಿ, ದೇವರಕೊಂಡಾ ರೆಡ್ಡಿ, ಶತಾವಧಾನಿ ಗಣೇಶ್ ಮುಂತಾದವರ ಸಾಹಿತ್ಯ ಕುರಿತು ನೆನಪುಗಳಾಗಲಿ, ಚರ್ಚೆಗಳಾಗಲಿ ಇಲ್ಲವೇ ಇಲ್ಲ.

ನಮ್ಮಲ್ಲಿ ಸಾಹಿತ್ಯ-ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಲಕ್ಷಣಗಳು ಇವು- ಒಂದೆಡೆಯಲ್ಲಿ ಹಿಂದೂ ಧರ್ಮದ ತಿರಸ್ಕಾರ, ಬ್ರಾಹ್ಮಣರ ಟೀಕೆ, ಭಾರತೀಯತೆ ಅಥವಾ ರಾಷ್ಟ್ರೀಯತೆಯ ನಿರಾಕರಣೆ, ಬಲಪಂಥೀಯ ರಾಜಕಾರಣದ/ಸಂಘಟನೆಗಳ ಅವಹೇಳನ, ಜಾತಿ ವ್ಯವಸ್ಥೆಯ ಭರ್ತ್ಸನೆ, ರಾಷ್ಟ್ರೀಯವಾದಿ ಲೇಖಕರ ಅಲ್ಲಗಳೆಯುವಿಕೆ ಅಥವಾ ಅವರ ವಿರುದ್ಧ ಬೀಸುಮಾತುಗಳ ಪ್ರಯೋಗ ಇತ್ಯಾದಿ; ಇನ್ನೊಂದೆಡೆಯಲ್ಲಿ ತಮಗೆ ಅನುಕೂಲವಾಗುವಂತೆ ಬಸವಣ್ಣ, ಮಹಾತ್ಮ ಗಾಂಧೀಜಿ, ಜ್ಯೋತಿಬಾ ಫುಲೆ, ಅಂಬೇಡ್ಕರ್, ಕುವೆಂಪು, ಲಂಕೇಶ್, ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯದ/ಮಾತುಗಳ ಉಲ್ಲೇಖ. ಬಹಿರಂಗದಲ್ಲಿ ಈ ಗುಂಪಿನೊಂದಿಗೇ ಇದ್ದ ಯು.ಆರ್. ಅನಂತಮೂರ್ತಿಯವರನ್ನು ಈ ಗುಂಪು ಅವರ ನಿಧನದ ನಂತರ ಅಪ್ಪಿತಪ್ಪಿಯೂ ನೆನಪಿಸಿಕೊಳ್ಳುತ್ತಿಲ್ಲ ಎನ್ನುವುದೊಂದು ಚೋದ್ಯ! ಜಿ.ಬಿ. ಹರೀಶರ ಬಗ್ಗೆ ಬರೆಯುವುದಕ್ಕೂ ಮೊದಲು ನಮ್ಮ ಸದ್ಯದ ಸಾಹಿತ್ಯಲೋಕದ ಈ ಮೆಳ್ಳೆಗಣ್ಣತನವನ್ನು ಹೇಳುವುದು ನನಗೆ ಅನಿವಾರ್ಯವಾಯಿತು.

**

ಜಿ.ಬಿ. ಹರೀಶ ನನ್ನ ಸನ್ಮಿತ್ರರಲ್ಲೊಬ್ಬರು. ನಾನು ಅವರ ವಿದ್ವತ್ತು ಮತ್ತು ಅದರ ವಿಸ್ತಾರಗಳ ಅಭಿಮಾನಿ. ಅವರ ಕಾಣ್ಕೆ, ನೆನಪಿನ ಶಕ್ತಿ, ಹಲವು ವಿಚಾರಗಳ ನಡುವಿನ ಅಂತರ್ಗತ ಸಂಬಂಧವನ್ನು ಅವರು ಪೋಣಿಸುವ ರೀತಿ, ಇದುವರೆಗೂ ಹೇಳದೆ ಇರುವ ಸತ್ಯಗಳನ್ನು ಪುರಾವೆಗಳೊಂದಿಗೆ ನಿರ್ಭೀತವಾಗಿ ಹೇಳುವ ಅವರ ಧೈರ್ಯ, ತಾವು ಹೇಳುವ ವಿಚಾರದಲ್ಲಿ ಅವರಿಗಿರುವ ನಿಸ್ಸಂದಿಗ್ಧತೆ, ಒಂದು ವಿಚಾರವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬಗೆ, ಒಂದರ ಹಿಂದೊಂದರಂತೆ ಅವರು ಸಾಹಿತ್ಯದ ಯೋಜನೆಗಳನ್ನು ಹಮ್ಮಿಕೊಳ್ಳುವ ಉತ್ಸಾಹ, ಯಾವ ಸಂದರ್ಭದಲ್ಲಿ ಯಾವ ಮಾತುಗಳನ್ನಾಡಬೇಕು ಎಂಬ ಬಗ್ಗೆ ಅವರಿಗಿರುವ ಔಚಿತ್ಯಪ್ರಜ್ಞೆ, ಪೂರ್ವಸೂರಿಗಳ ಸಾಹಿತ್ಯ ಕೃತಿ ಮತ್ತು ಜೀವನಗಳ ಅಧ್ಯಯನ, ತಮ್ಮ ವಿಚಾರಗಳನ್ನು `ಕನ್ವಿನ್ಸಿಂಗ್’ ಆಗಿ ಮಂಡಿಸುವ ವಾಗ್ವಿಲಾಸ, ಖಾಸಗಿಯಾಗಿ ಸಿಕ್ಕಾಗ ತೋರುವ ಲೋಕಾಭಿರಾಮ, ಗುಣಕ್ಕೆ ಮತ್ಸರ ಪಡದ ಅವರ ಮನಸ್ಸಿನ ಪರಿಪಕ್ವತೆ..… ಇವೆಲ್ಲವೂ ಅನನ್ಯ. ನಿಜ ಹೇಳಬೇಕೆಂದರೆ, ನಮ್ಮ ಓರಗೆಯ ಹೆಚ್ಚಿನವರಲ್ಲಿ ಇಂತಹ ವೈಶಿಷ್ಟ್ಯಗಳು ಅಷ್ಟಾಗಿ ಇಲ್ಲ.

ನನ್ನ ಈ ಗೆಳೆಯರು ನನಗೆ ಪರಿಚಯವಾಗಿದ್ದು, `ಸಂಚಯ’ ಸಾಹಿತ್ಯ ಪತ್ರಿಕೆಯನ್ನು ಏಕಾಂಗಿಯಾಗಿ ನಡೆಸುತ್ತಿದ್ದ ಶ್ರೀ ಡಿ.ವಿ. ಪ್ರಹ್ಲಾದ್ ಅವರ ಮೂಲಕ- ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಆಗಿನ್ನೂ ಇವರು ಕನ್ನಡ ಸಾಹಿತ್ಯದ ಸ್ಥಾಪಿತ ವರ್ತುಲದಿಂದ ಸಂಪೂರ್ಣವಾಗಿ ಬಿಡಿಸಿಕೊಂಡಿರಲಿಲ್ಲ. ಆದರೆ, ಅದರ ಇತಿಮಿತಿಗಳನ್ನು ಅಷ್ಟು ಹೊತ್ತಿಗಾಗಲೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಎನ್ನುವುದು ಅವರ ವಿಚಾರಸರಣಿಯನ್ನು ಆಲಿಸುತ್ತಿದ್ದ ನನಗೆ ಇಷ್ಟಿಷ್ಟೇ ಗೊತ್ತಾಗುತ್ತಿತ್ತು. ನಾನು ಆಗ ಕನ್ನಡ ಸಾಹಿತ್ಯದ ಬಗ್ಗೆ ಒಂದು ಬಗೆಯ ರಮ್ಯಮುಗ್ಧತೆಯಿಂದ ಇದ್ದೆನಾದ್ದರಿಂದ ಮತ್ತು ಅವರಷ್ಟು ಓದಿಕೊಂಡವನಲ್ಲವಾದ್ದರಿಂದ ಅದು ನನ್ನ ಅಳವಿಗೆ ಸಿಕ್ಕುತ್ತಿರಲಿಲ್ಲ. ತಮ್ಮ `ಬೆಳಕಿನಾಟ’ ವಿಮರ್ಶಾ ಸಂಕಲನದಲ್ಲಿ ಅವರು ಡಿ.ಆರ್.ನಾಗರಾಜರ ಸಾಹಿತ್ಯ ಚಿಂತನೆಯ ಇತಿಮಿತಿಗಳನ್ನು ಎತ್ತಿ ತೋರಿಸಿದಾಗ, ಅವರ ಮುಂದಿನ ಹಾದಿ ಏನಿರಬಹುದೆಂದು ಹೊಳೆಯಿತು. ಏಕೆಂದರೆ, ಅಷ್ಟು ಹೊತ್ತಿಗಾಗಲೇ ಡಿ.ಆರ್.ಎನ್ ಸುತ್ತ ಹಲವು ಕಾರಣಗಳಿಂದ ಒಂದು ದೊಡ್ಡ ಪ್ರಭಾವಳಿಯನ್ನು ಸೃಷ್ಟಿಸಲಾಗಿತ್ತು. ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದವರೆಲ್ಲ ಅವರ `ಅಮೃತ ಮತ್ತು ಗರುಡ,’ `ಶಕ್ತಿ ಶಾರದೆಯ ಮೇಳ,’ `ವಸಂತ ಸ್ಮೃತಿ,’ `ಫ್ಲೇಮಿಂಗ್ ಫೀಟ್,’ (ನಂತರ ಇದು `ಉರಿ ಚಮ್ಮಾಳಿಗೆ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಬಂತು), `ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಮುಂತಾದ ಕೃತಿಗಳನ್ನು ಏನಕೇನ ಪ್ರಕಾರೇಣ ಕೊಂಡಾಡುತ್ತ, ಅವರನ್ನು `ಪ್ರಶ್ನಾತೀತ’ ಎನ್ನುವಂತೆ ಮಾಡಿಬಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಹರೀಶರು, ಪ್ರವಾಹದ ವಿರುದ್ಧ ಈಜುವ ಸಾಹಸವನ್ನು ಪ್ರದರ್ಶಿಸಿದರು!

ಇದಾದ ಎರಡು-ಮೂರು ವರ್ಷಗಳಲ್ಲಿ ಇವರ ಸಾಹಿತ್ಯಚಿಂತನೆಯಲ್ಲಿ ಒಂದು ದೊಡ್ಡ ಪಲ್ಲಟ ಕಾಣಿಸಿಕೊಂಡಿತು. ಇದು ಸಂಭವಿಸಿದ್ದು, ಹರೀಶರು ಆಗಿನ ಹೆಸರಾಂತ ಪತ್ರಕರ್ತ ಪ್ರತಾಪಸಿಂಹ ಅವರ ಜತೆಗೂಡಿ, ದೇಶ ವಿಭಜನೆಗೆ ಕಾರಣಕರ್ತನಾದ ಮಹಮದ್ ಅಲಿ ಜಿನ್ನಾ ಕುರಿತು ಪುಸ್ತಕ ಬರೆದಾಗ. ಅಲ್ಲಿಂದ ಈಚೆಗೆ ಹರೀಶರ ಸಾಹಿತ್ಯಚಿಂತನೆಯ ಕ್ಯಾನ್ವಾಸ್ ಬೃಹತ್ತಾಗುತ್ತಲೇ ಬಂದಿದೆ. ಇದಾದಮೇಲಂತೂ ಅವರು ಹಿಂದಿರುಗಿ ನೋಡುವ ಪ್ರಮೇಯವೇ ಬಂದಿಲ್ಲ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳಬಲ್ಲೆ. ಏಕೆಂದರೆ, ನಂತರದ ವರ್ಷಗಳಲ್ಲಿ ಹರೀಶರು ವೀರ್ ಸಾವರ್ಕರ್, ಅಂಬೇಡ್ಕರ್, ಸುಭಾಷಚಂದ್ರ ಬೋಸ್ ಇಂಥವರನ್ನು ಆವಾಹಿಸಿಕೊಂಡು, ಚಾರಿತ್ರಿಕವೆಂದು ಕರೆಯಬಹುದಾದ ಬೆಳಕು ಚೆಲ್ಲುತ್ತಿದ್ದಾರೆ. ಇದನ್ನು ಕನ್ನಡ ಸಾಹಿತ್ಯದ ಮಟ್ಟಿಗೆ `ಅರಿವಿನ ಆಸ್ಫೋಟ’ವೆಂದು ಧಾರಾಳವಾಗಿ ಹೇಳಬಹುದು. ಸಾವರ್ಕರ್ ಅವರ `ಹಿಂದುತ್ವ’ ಎನ್ನುವ ಪುಟ್ಟ ಪುಸ್ತಕದ ಹರೀಶರ ಅನುವಾದವಂತೂ ಮೇಲಿಂದ ಮೇಲೆ ಮರುಮುದ್ರಣಗಳನ್ನು ಕಾಣುತ್ತಿದ್ದು, ಸಂಚಲನವನ್ನೇ ಹುಟ್ಟಿಸಿದೆ. ಹಾಗೆಯೇ, ಧನಂಜಯ್ ಕೀರ್ ಅವರು ಬರೆದಿರುವ ಸಾವರ್ಕರರ ಬೃಹತ್ ಜೀವನಚರಿತ್ರೆಯನ್ನು ಕೂಡ ಇವರು ಕನ್ನಡಕ್ಕೆ ತಂದಿದ್ದಾರೆ. ಆದರೆ, ನಮ್ಮ ಒಕ್ಕಣ್ಣಿನ ಸಾಹಿತ್ಯಲೋಕವು ಅದರ ಬಗ್ಗೆ ಯಾವುದೇ ಚರ್ಚೆಯಾಗದಂತೆ ನೋಡಿಕೊಂಡಿದೆ! ಇತ್ತೀಚೆಗೆ ಹರೀಶರು ಬೋಸ್ ಅವರನ್ನು ಕುರಿತು ಮೂರು ಭಾಗಗಳಲ್ಲಿ `ಮಹಾಕಾಲ’ ಕಾದಂಬರಿಯ ರಚನೆಯನ್ನು ಒಂದು ಯಜ್ಞದಂತೆ ಕೈಗೆತ್ತಿಕೊಂಡಿದ್ದು, ಈಗಾಗಲೇ ಎರಡು ಸಂಪುಟಗಳು ಹೊರಬಂದಿವೆ.

ಹರೀಶರ ಸಾಹಿತ್ಯದ ವ್ಯಾಪ್ತಿ ದೊಡ್ಡದು. ಅವರು ಸ್ವತಂತ್ರ ರಚನೆ, ಅನುವಾದ, ಸಂಪಾದನೆ, ವಿಮರ್ಶೆ, ಸಂವಾದ, ಭಾಷಣ, ಯೂಟ್ಯೂಬ್ ಮಾತು, ಸಂದರ್ಶನ, ಫೇಸ್ಬುಕ್ ಟಿಪ್ಪಣಿಗಳು, ಬೋಧನೆ…… ಹೀಗೆ ಹತ್ತಾರು ಕವಲುಗಳನ್ನು ಬೆಳೆಸಿಕೊಂಡಿದ್ದಾರೆ. ನಮ್ಮ ದೇಶ-ಧರ್ಮಗಳ ಹಿತವನ್ನು ಎತ್ತಿ ಹಿಡಿಯಲು ಬೇಕಾಗುವ ರಾಜಕೀಯ ಚಿಂತನೆಯನ್ನು ಮೈಗೂಡಿಸಿಕೊಂಡಿರುವುದು ಇವರ ಇನ್ನೊಂದು ಶಕ್ತಿ. ಜೈನ ಸಾಹಿತ್ಯದ ಪರಂಪರೆಯಲ್ಲಿ ಬರುವ ದೇವಚಂದ್ರನ ರಾಜಾವಳಿ ಕಥೆಗಳ ಬಗ್ಗೆ ಪಿಎಚ್.ಡಿ ಮಾಡಿರುವ ಹರೀಶರ ಸಾಹಿತ್ಯದ ಜಾಡು ಕಳೆದ ಕಾಲು ಶತಮಾನದಲ್ಲಿ ಸಾಕಷ್ಟು ದೂರ ಸಾಗಿಬಂದಿದೆ. ಅಂದಮಾತ್ರಕ್ಕೆ ಇವರು `ಪೊಲಿಟಿಕಲಿ ಕರೆಕ್ಟ್’ ಆಗುವ ಜಾಯಮಾನದವರಲ್ಲ. ಹರೀಶರು ಬಲಪಂಥೀಯರ ದೋಷಗಳನ್ನು ಕೂಡ ಅವರ ಎದುರಲ್ಲೇ ನಿಷ್ಠುರವಾಗಿ ಹೇಳಬಲ್ಲ ಛಾತಿವಂತರು. ಇಂತಹ ಬೌದ್ಧಿಕ ಕ್ಷಾತ್ರದ ಅಭಿವ್ಯಕ್ತಿ ನಮ್ಮ ಕಾಲದಲ್ಲಿ ಎಲ್ಲೋ ಬೆರಳೆಣಿಕೆಯಷ್ಟು ಮಂದಿಗೆ ಸಾಧ್ಯವಷ್ಟೆ. ಏಕೆಂದರೆ ಅರವಿಂದರು, ರಮಣರು, ಶಂಕರ ಮೊಕಾಶಿ ಪುಣೇಕರ, ಬೇಂದ್ರೆ ವಾಙ್ಮಯ, ಆನಂದವರ್ಧನ, ಆನಂದಕುಮಾರ ಸ್ವಾಮಿ, ಕುವೆಂಪು, ಡಿವಿಜಿ, ತಂತ್ರವಿದ್ಯೆ, ಭಾರತದ ಬೌದ್ಧಿಕ ಕ್ಷತ್ರಿಯರು, ಬುದ್ಧನ ಚಿಂತನೆಗಳು, ಮಹಾಕಾವ್ಯಗಳ ಅಧ್ಯಯನ, ಶ್ರೀಮಾತೆ, ಹಳೆಗನ್ನಡ ಕಾವ್ಯ, ಆಧುನಿಕ ಸಾಹಿತ್ಯ ಹೀಗೆ ಎಲ್ಲವೂ ಇವರ  ಸತತಾಭ್ಯಾಸದಲ್ಲಿ ಆಳವಾಗಿ ಸೇರಿಕೊಂಡಿವೆ. ಇಂತಹ ವಿಶಾಲ ಪರಿಪ್ರೇಕ್ಷ್ಯದ ಸ್ವಾಧ್ಯಾಯವೇ ಇವರ ಶಕ್ತಿ. ಬರೀ ಬ್ರಾಹ್ಮಣ-ಶೂದ್ರ, ಮೆಜಾರಿಟಿ-ಮೈನಾರಿಟಿ, ಎಡ-ಬಲ ಇಂತಹ ಕ್ಷುದ್ರ ಗ್ರಹಿಕೆಗಳಲ್ಲಿ ಸಿಲುಕಿಕೊಂಡಿರುವ ಕನ್ನಡದ ಸದ್ಯದ ಸಾಹಿತ್ಯಕ್ಕೆ ಹರೀಶರ ಚಿಂತನೆಗಳ ಸ್ವೋಪಜ್ಞತೆ ಅರ್ಥವಾಗಲು ಇನ್ನೂ ಒಂದಿಷ್ಟು ಕಾಲ ಬೇಕಾಗುತ್ತದೆ. ಇಲ್ಲೊಂದು ಸಂಗತಿಯನ್ನು ಹೇಳುವುದಾದರೆ, ನಮ್ಮಲ್ಲಿ `ಸೋಕಾಲ್ಡ್’ ಪ್ರಗತಿಪರರು ಯಾವಾಗಲೂ ಬುದ್ಧ ಮತ್ತು ಶಂಕರಾಚಾರ್ಯರನ್ನು ಎದುರುಬದುರು ಇಡುತ್ತಾರೆ. ಆದರೆ ಹರೀಶರು ಒಮ್ಮೆ ನನ್ನೊಂದಿಗೆ ಮಾತನಾಡುತ್ತ, ಶಂಕರರು ಬುದ್ಧನನ್ನು `ಯೋಗಿನಾಂ ಚಕ್ರವರ್ತಿಃ’ ಎಂದು ಕರೆದಿದ್ದಾರೆಂದು ಆಧಾರಸಮೇತ ಹೇಳಿದ್ದು ನನಗಿನ್ನೂ ಅಚ್ಚಹಸಿರಾಗಿದೆ.

ಹರೀಶರು ಈ ಮಧ್ಯೆ ಕೇಂದ್ರ ಸರಕಾರದ ನಿಯೋಜನೆಯ ಮೇರೆಗೆ ವಿಯಟ್ನಾಂನಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಸಕ್ರಿಯರಾಗಿದ್ದರು. ಆಗ ಅವರಿಗೆ ವಿಯಟ್ನಾಂ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳ ಮೇಲೆ ಭಾರತೀಯ ಧರ್ಮ, ಸಂಸ್ಕೃತಿಗಳು ಬೀರಿರುವ ಪ್ರಭಾವದ ಅಗಾಧತೆ ಅನುಭವಕ್ಕೆ ಬಂತಷ್ಟೆ. ಇದರಿಂದ ಅವರ ಸಾಹಿತ್ಯ ಚಿಂತನೆ ಮತ್ತಷ್ಟು ರಾಷ್ಟ್ರೀಯವಾದಿಯಾಗಿದೆ. ಹೀಗಾಗಿ, ಇತ್ತೀಚೆಗೆ ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಬಂದಾಗ ಅವರು ಅದನ್ನು ಯಾವುದೇ ಮುಲಾಜಿಲ್ಲದೆ ಧೈರ್ಯವಾಗಿ ಪ್ರಶ್ನಿಸುವುದು ಸಾಧ್ಯವಾಯಿತು. ಹಾಗೆಯೇ, ಕುವೆಂಪು ಅವರ ಸಾಹಿತ್ಯ-ಚಿಂತನೆ ಕುರಿತು ಎಡಪಂಥೀಯ ವಲಯ ಸೃಷ್ಟಿಸಿರುವ ಅಪಕಲ್ಪನೆಗಳನ್ನು ಭಗ್ನಗೊಳಿಸುವುದು ಅವರಿಗೆ ಸಾಧ್ಯವಾಗಿದೆ; ಅವರ ಸಾಹಿತ್ಯದ ಮೂಲಧಾತುಗಳು ಎಲ್ಲಿವೆ ಎನ್ನುವುದನ್ನು ಇವರು ಸೋದಾಹರಣವಾಗಿ ಹೇಳಬಲ್ಲರು; ಬೇಂದ್ರೆಯವರ `ನರಸಿಂಹಸ್ತುತಿ’ಯಂಥ ಅಪರೂಪದ ಕವಿತೆಯ ಬಗ್ಗೆ ಹೃದ್ಯವಾಗಿ ಬರೆಯಬಲ್ಲರು; `ನಾಕುತಂತಿ’ ಕವನ ಸಂಕಲನ ಬಂದು ಅರವತ್ತು ವರ್ಷ ತುಂಬಿದ ನೆಪದಲ್ಲಿ ಅವರ ವಾಙ್ಮಯದಲ್ಲಿ ವಿಹರಿಸಬಲ್ಲರು; ಎಸ್.ಎಲ್. ಭೈರಪ್ಪನವರ `ವಂಶವೃಕ್ಷ’ ಕಾದಂಬರಿ ಬಂದು ಅರ್ಧ ಶತಮಾನವಾದ ನಿಮಿತ್ತದ ಹಿನ್ನೆಲೆಯಲ್ಲಿ ಅವರ ಸಾಹಿತ್ಯವನ್ನು ಅನುಸಂಧಾನ ಮಾಡಬಲ್ಲರು; ಹಲವು ಅಜ್ಞಾತ ಸಂಗತಿಗಳನ್ನು ಎತ್ತಿಕೊಂಡು ಅಂಕಣ ಬರೆಯಬಲ್ಲರು. ಈ ಸಂದರ್ಭದಲ್ಲಿ ನನಗೆ, ನಾನು `ವಿಜಯ ಕರ್ನಾಟಕ’ ಪತ್ರಿಕೆಯಲ್ಲಿದ್ದಾಗ ಹರೀಶರು ಕೆಲಕಾಲ `ಹರಿಗೋಲು’ ಎನ್ನುವ ಬಹಳ ಒಳ್ಳೆಯ ಅಂಕಣವನ್ನು ಬರೆದಿದ್ದು ನೆನಪಿನಲ್ಲಿದೆ. ಆ ಅಂಕಣ ಬರಹಗಳನ್ನು ಒಂದು ಪುಸ್ತಕವಾಗಿ ಹೊರತಂದರೆ ಅದು ನಮ್ಮ ಸಾಹಿತ್ಯದಲ್ಲಿ ಒಂದು ಒಳ್ಳೆಯ ಕೃತಿಯಾಗಿ ಮೂರ್ಕಾಲ ಉಳಿಯುವುದರಲ್ಲಿ ಸಂಶಯವಿಲ್ಲ.

ನನ್ನ ಈ ಗೆಳೆಯರ ಹಲವು ಪುಸ್ತಕಗಳು ಗಾತ್ರದ ದೃಷ್ಟಿಯಿಂದ ಚಿಕ್ಕದಾಗಿವೆ. ಆದರೆ ನಾವು ಸಾಹಿತ್ಯರಚನೆಯನ್ನು ಪುಟಗಳ ಸಂಖ್ಯೆಯಿಂದ ಅಳೆಯದೆ ಪರಿಣಾಮದ ದೃಷ್ಟಿಯಿಂದ ನೋಡಬೇಕಾದ್ದು ಮುಖ್ಯ. ಧನಂಜಯ್ ಕೀರ್, ಅಂಬೇಡ್ಕರ್, ಬೋಸ್ ಇಂಥವರನ್ನು ಆವಾಹಿಸಿಕೊಂಡ ಮೇಲೆ ಹರೀಶರ ಸಾಹಿತ್ಯದಲ್ಲಿ ಒಂದು ಮಹೋನ್ನತಿಯ ದೃಷ್ಟಿ ಎದ್ದು ಕಾಣಿಸುವಂತಿದೆ. ಕನ್ನಡ ಸಾಹಿತ್ಯದ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಒಳ್ಳೆಯ ಬೆಳವಣಿಗೆ ಎನ್ನುವುದು ನನ್ನ ಭಾವನೆಯಾಗಿದೆ.

ಕನ್ನಡ ಸಾಹಿತ್ಯದಲ್ಲಿ ವಾಮಪಂಥದವರ ಉಬ್ಬರವಿರುವುದನ್ನು ನಾನು ಶುರುವಿನಲ್ಲೇ ಹೇಳಿದೆನಷ್ಟೆ. ಅದು ನಿಜ. ಹಾಗೆಂದ ಮಾತ್ರಕ್ಕೆ, ರಾಷ್ಟ್ರೀಯವಾದಿಗಳ ಕಡೆ ಸಾಹಿತ್ಯ-ಸಂಸ್ಕೃತಿಗಳ ಅನುಸಂಧಾನಕ್ಕೆ ಬೇಕಾದ ಉಜ್ಜ್ವಲ ಕಾರ್ಯಪರಿಸರವಿದೆ ಎಂದರ್ಥವಲ್ಲ. ಈ ಪಾಳಯದಲ್ಲಿ ಅದರ ಅನುಪಸ್ಥಿತಿ ಇದೆ. ಏಕೆಂದರೆ, ಇಲ್ಲಿರುವವರಿಗೆ `ಇಂಟೆಲಿಜೆನ್ಸಿಯಾ’ದ ಶಕ್ತಿಯ ಪರಿಚಯ ಅಷ್ಟಾಗಿಲ್ಲ. ಹೀಗಾಗಿ, ರಾಷ್ಟ್ರೀಯವಾದಿ ಸಾಹಿತ್ಯರಚನೆಯ ಪ್ರಕಟಣೆ, ವಿಚಾರ ಸಂಕಿರಣ, ಮನ್ನಣೆ ಇವುಗಳಿಗೆ ಬೇಕಾದ ಸಾಂಸ್ಥಿಕ ವ್ಯವಸ್ಥೆಯ ಅನುಕೂಲ ಇಲ್ಲಿ ತೃಪ್ತಿಕರವಾದ ಪ್ರಮಾಣದಲ್ಲಂತೂ ಇಲ್ಲ. ಇಲ್ಲಿ ನಡೆಯುತ್ತಿರುವ ಬೌದ್ಧಿಕ ಕೆಲಸಗಳು ಹೆಚ್ಚಾಗಿ ವ್ಯಕ್ತಿಗತ ಮಟ್ಟದ ಆಸಕ್ತಿ-ಅಧ್ಯಯನಗಳಿಂದ ಸಾಗುತ್ತಿವೆಯಷ್ಟೆ. ಹಾಗೆ ನೋಡಿದರೆ, ಸಾಹಿತ್ಯಿಕವಾದ ಪ್ರಖರ ವಿಚಾರಗಳಿಗೆ ಎದೆಯೊಡ್ಡುವಲ್ಲಿ ಎಡ-ಬಲಗಳೆರಡರ ಅಂಜುಬುರುಕುತನ ಮೊದಲಿನಿಂದಲೂ ಇದ್ದೇಇದೆ. ಅಥವಾ ಹಲವು ಸತ್ಯಗಳನ್ನು ನಿರ್ಭಿಡೆಯಿಂದ ಹೇಳುವ ಹರೀಶರು, ಅವರು ಇದ್ದಾರೆಂದು ಹಣೆಪಟ್ಟಿ ಹಚ್ಚಿರುವ `ಬಲ’ದ ಕಡೆಯಿಂದಲೂ ಟೀಕೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಪರಿಸ್ಥಿತಿ ಹೀಗೆ ಇಕ್ಕೆಲಗಳಿಂದಲೂ ಪ್ರತಿಕೂಲವಾಗಿದ್ದರೂ ಇವರು ಅಂತಹ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವ ಮರ್ಜಿಗೆ ಒಳಗಾಗಿಲ್ಲ ಎನ್ನುವುದು ಹೆಚ್ಚುಗಾರಿಕೆಯ ವಿಚಾರವಾಗಿದೆ.

ಕದಡಿದ ಬಗ್ಗಡವಾಗಿರುವ ಕನ್ನಡ ಸಾಹಿತ್ಯಲೋಕದಲ್ಲಿ ಈಗ ಸತ್ಯವನ್ನು ಹೇಳುವುದು ಸುಲಭದ ವಿಚಾರವಲ್ಲ. ಇದು `ಅತ್ತ ದರಿ, ಇತ್ತ ಪುಲಿ’ ಎನ್ನುವಂತಿದ್ದು, ಭ್ರಮನಿರಸನವಾಗುವ ಸಂಭವವೇ ಹೆಚ್ಚು. ಏಕೆಂದರೆ, ಈಗ ಸಾಹಿತ್ಯಲೋಕದಲ್ಲಿ  ಪೊಲಿಟಿಕಲ್ ಐಡಿಯಾಲಜಿಗಳ ಮೇಲಾಟ ಮತ್ತು ಸಾಮಾಜಿಕ ಪ್ರಮೇಯಗಳ ಉಬ್ಬರದ ಹಾವಳಿ ತಾಂಡವವಾಡುತ್ತಿದೆ. ಹೀಗಿರುವಾಗ ಸತ್ಯಸಂಗತಿಗಳಿಗೆ ಮುಖಾಮುಖಿಯಾಗುತ್ತ, ರಸಾನುಭವವನ್ನು ತಾಳುವುದಕ್ಕೆ ಎಂಟೆದೆ ಬೇಕು. ಹರೀಶರಿಗೆ ಇದಕ್ಕೆ ಬೇಕಾದ ಅಧ್ಯಯನದ ಕೆಚ್ಚು ಮತ್ತು ನೈತಿಕ ಸ್ಥೈರ್ಯ ಎರಡೂ ಇರುವುದು ಸಂತಸದ ಸಂಗತಿಯಾಗಿದೆ.

**

ಹರೀಶರು ಮತ್ತು ನಾನು ಇಬ್ಬರೂ ಒಂದೇ ಸೀಮೆಯವರು- ಅಂದರೆ, ಹಾಸನ ಜಿಲ್ಲೆಯವರು. ನನ್ನ ಸಾಹಿತ್ಯಾಸಕ್ತಿ ಏನಿದ್ದರೂ ಕನ್ನಡಕ್ಕೆ ಅಸಾಂಪ್ರದಾಯಿಕ ಮತ್ತು ರಾಷ್ಟ್ರವಾದಿ ಅನುವಾದಗಳಿಗೆ ಸೀಮಿತವಷ್ಟೆ. ಇದನ್ನು ಬಿಟ್ಟರೆ ಲೋಕಾಭಿರಾಮದಲ್ಲಿ ಸ್ವಂತವಾಗಿ ಒಂದಿಷ್ಟನ್ನು ಬರೆಯುತ್ತಿರುತ್ತೇನೆ. ಆದರೂ ಹರೀಶರು ನನ್ನ ನಾಲ್ಕೈದು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಬಂದು, ಉದಾರವಾಗಿ ಮಾತನಾಡಿದ್ದಾರೆ; ಮುನ್ನುಡಿ ಬರೆದಿದ್ದಾರೆ; ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಇಸ್ಲಾಮಿಕ್ ಭಯೋತ್ಪಾದನೆ ಕುರಿತು ನಾನು ಮಾಡಿರುವ ಅನುವಾದವೇ ಇರಲಿ, ವಿದೇಶಾಂಗ ಮತ್ತು ರಾಜನೀತಿಯನ್ನು ಕುರಿತಿರುವ ನನ್ನ ಭಾಷಾಂತರವೇ ಇರಲಿ, ನನ್ನ ಜ್ಞಾಪಕ ಚಿತ್ರಶಾಲೆಯ ಸಂಪುಟಗಳೇ ಇರಲಿ- ಅವುಗಳ ಬಗ್ಗೆ ಹರೀಶರು ಆಡಿರುವ ಮಾತುಗಳಿಂದ, ಬರೆದಿರುವ ವಿಚಾರಗಳಿಂದ, ಹಂಚಿಕೊಂಡಿರುವ ಪ್ರಾಮಾಣಿಕವಾದ ಹಿಗ್ಗಿನಿಂದ ಅವುಗಳಿಗೊಂದು ಕಿಮ್ಮತ್ತು ಬಂದಿದೆ. ಇವೆಲ್ಲವುಗಳ ಹಿಂದೆ ಅವರ ಮೈತ್ರೀಭಾವದ ಸುಖವನ್ನು ಅನುಭವಿಸುವ ನಸೀಬು ನನ್ನದಾಗಿದೆ. ನನ್ನ ಇಂತಹ ವಿದ್ವನ್ಮಿತ್ರರಿಗೆ ಈಗ  ಐವತ್ತು ವಸಂತಗಳ ಸಂಭ್ರಮ. ಇದುವರೆಗೆ ಅವರು ಮಾಡಿರುವ ಸಾಧನೆ ಬೆಲೆಯುಳ್ಳದ್ದು. ಮುಂದೆ ಅವರು ಮಾಡಬಹುದಾದ್ದು ಇನ್ನೂ ಭೂಮವಾದದ್ದು; ಭವ್ಯವಾದದ್ದು. ನನ್ನ ಈ ಸ್ನೇಹಿತರಿಂದ ಕನ್ನಡ ಸಾರಸ್ವತ ಲೋಕವು ನಿಜವಾದ ಅರ್ಥದಲ್ಲಿ ಉತ್ತರೋತ್ತರವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಹರೀಶರ ಬೌದ್ಧಿಕ ಲೀಲೆಯನ್ನು ಕಂಡಾಗಲೆಲ್ಲ ಕುವೆಂಪು ಅವರು ತಮ್ಮ ಕವಿತೆಯೊಂದರಲ್ಲಿ ಹೇಳಿರುವ `ಪ್ರತಿಭೆಯ ಹೋಮಾಗ್ನಿಯ ಮೇಲೆ, ಕವಿಮನ ತಾನುರಿದುರಿದೇಳೆ, ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ’ ಎನ್ನುವ ಉಜ್ಜ್ವಲ ಚಿತ್ರಣ ನೆನಪಾಗುತ್ತದೆ. ಇದು ಕನ್ನಡದ ಪುಣ್ಯ!

(2025ರಲ್ಲಿ ಡಾ. ಜಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನ)