ಉಜ್ಜಲ ಪ್ರತಿಭೆ

ಡಾ. ಬಾಬುಕೃಷ್ಣಮೂರ್ತಿ, ಹಿರಿಯ ಕಾದಂಬರಿಕಾರರು, ಸಂಪಾದಕರು, ಮಲ್ಲಾರ ಮಾಸಪತ್ರಿಕೆ

ಬೆಳೆಯುವ ಪೈರು ಮೊಳಕೆಯಲ್ಲೇ ಎಂಬ ನಾಣ್ಣುಡಿಯಂತೆ ಶ್ರಿ ಜಿ.ಬಿ. ಹರೀಶ ತನ್ನಲ್ಲಿ ಸುಪ್ತವಾಗಿದ್ದ ಗುಣ ಸ್ವಭಾವಗಳನ್ನೆಲ್ಲ ಬಾಲ್ಯದಲ್ಲೇ ವ್ಯಕ್ತಪಡಿಸುತ್ತಿದ್ದರೆಂದು ಚಿಕ್ಕಂದಿನಲ್ಲಿ ಹಾಸನದಲ್ಲಿ ಅವರನ್ನು ಕಂಡವರ ಅಂಬೋಣ. ನೇರ, ನಿಷ್ಠುರ, ನಿರ್ಭೀಕ ಪ್ರವೃತ್ತಿಯ ದಿಟ್ಟ ಹುಡುಗನೆಂದೇ ಅವರಿಗೆಲ್ಲ ಚಿರಪರಿಚಿತ.

ಜ್ಞಾನದಾಹಿ, ಸೂಕ್ಷ್ಮಗ್ರಾಹಿ, ಸತ್ಯಾನ್ವೇಷಿ. ಅಧ್ಯಯನಕ್ಕಾಗಿ ಏಕಾಂತಕ್ಕಾಗಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದ ಕಿಶೋರ ಹರೀಶ, ತನಗೂ ಸ್ಥಳವಿಲ್ಲದಷ್ಟು ಪುಸ್ತಕಗಳನ್ನು ಕೋಣೆಯ ತುಂಬ ತುಂಬಿಕೊಂಡಿದ್ದರು. ಹೆಚ್ಚಿನ ಸಮಯ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ. ಹಿಂದಿ, ಕನ್ನಡ, ಇಂಗ್ಲಿಷ್, ಸಂಸ್ಕೃತ ಪುಸ್ತಕಗಳ ಸಹವಾಸದಲ್ಲಿಯೇ ಪರಮಾನಂದವನ್ನು ಪಡೆಯುತ್ತಿದ್ದ ಅಧ್ಯಯನಶೀಲ. ಅವರಿದ್ದ ಹಾಸನದಲ್ಲಿ ನಡೆಯುತ್ತಿದ್ದ ಯಾವುದೇ ಸಭೆಯನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ: ಅದು ಅಧ್ಯಾತ್ಮವೇ ಇರಬಹುದು, ಸಾಹಿತ್ಯವೇ ಇರಬಹುದು ಅಥವಾ ರಾಜಕೀಯವೇ ಇರಬಹುದು.

ಸ್ವಂತ ಖರ್ಚಿಗಾಗಿ ಚಿಕ್ಕಂದಿನಿಂದಲೇ ಮನೆ ಪಾಠವನ್ನು ಹೇಳಿಕೊಡುತ್ತಿದ್ದ ಸ್ವತಂತ್ರ ಜೀವಿ. ಹೆಚ್ಚಿನವರ ದೃಷ್ಟಿಯಲ್ಲಿ ಪುಸ್ತಕ ಕ್ರಿಮಿ. ಆದರೆ ಗುಣಗ್ರಾಹಿಗಳ ದೃಷ್ಟಿಯಲ್ಲಿ ಅಪೂರ್ವ ಪ್ರತಿಭಾಸಂಪನ್ನ. ಹರೀಶರಿಗೆ ಅಧ್ಯಯನ, ಪುಸ್ತಕ ಸಂಗ್ರಹ, ಚಿಂತನ ಮಂಥನಗಳನ್ನು ಒಟ್ಟಾರೆ ಮಿಕ್ಕೆಲ್ಲವೂ ತೃಣ ಸಮಾನ.

ಹಾಸನದಲ್ಲಿ ಕಾಲೇಜು ಮೆಟ್ಟಿಲು ಹತ್ತುವಾಗಲೇ ಸಾಕಷ್ಟು ಜ್ಞಾನ ಸಂಪಾದಿಸಿದ್ದ ಹರೀಶ್ ಅದು ಹೇಗೋ ಜೈನ ಸಾಹಿತ್ಯದ ಬಗ್ಗೆ ಆಸಕ್ತಿ ತಳೆದು ಅದರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟೋರೇಟ್ ಪಡೆದಿದ್ದು ಆಯಿತು. ಅಧ್ಯಾಪನ, ಪತ್ರಿಕೋದ್ಯಮ ಇವರ ಕೈಗೊಂಡ ವೃತ್ತಿಗಳಲ್ಲಿ ಕೆಲವು. ಆದರೆ ಕಾರಣಾಂತರಗಳಿಂದ ಒಂದಕ್ಕೂ ಸಿಕ್ಕಿ ಬೀಳದೆ ಜೀವನ ಯಾತ್ರೆ ಸಾಗಿಸಿದ್ದು ಇವರ ವಿಶೇಷ.

ನೂರಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕಗಳನ್ನು ಬರೆದಿರುವ, ಇನ್ನೂ ನಿರಂತರ ಬರೆಯುತ್ತಿರುವ ಹರೀಶರನ್ನು ನೋಡಿದರೇ ಅವರು ಬಾಲ್ಯ, ಕಿಶೋರಾವಸ್ಥೆಗಳಲ್ಲಿ ಪುಸ್ತಕ ಕ್ರಿಮಿಯಾಗಿದ್ದಿದ್ದು ಸಾರ್ಥಕವಾಯಿತೆನ್ನಿಸುತ್ತದೆ. ಸ್ವಾತಂತ್ರ್ಯವೀರ ಸಾವರ್ಕರರನ್ನು ಕುರಿತು ಭಾರತದ ಬೇರಾವ ಭಾಷೆಯಲ್ಲೂ ಹೊರಬರದಷ್ಟು ಬೃಹತ್ ಗ್ರಂಥಗಳ ಪ್ರಕಟಣೆಯ ರೂವಾರಿ, ಅಸಾಧ್ಯ ಸಾಧಕ.

ಕರ್ನಾಟಕದಲ್ಲಿ ರಾಜಕೀಯ ವಿಚಾರ ಸಂಘರ್ಷಗಳಿಗೆ ಕೊರತೆ ಇಲ್ಲ. ಸ್ವಾತಂತ್ರ್ಯಾನಂತರ ಮುಖ್ಯವಾಗಿ ಸಾಮ್ಯವಾದ, ಲೋಹಿಯಾ ಸಮಾಜವಾದ, ರಾಷ್ಟ್ರವಾದಗಳ ಸಂಘರ್ಷ ನಡೆಯುತ್ತಲೇ ಬಂದಿದೆ. ಒಂದು ಕಾಲದಲ್ಲಿ ಮೆರೆಯುತ್ತಿದ್ದ ಸಾಮ್ಯವಾದ, ಲೋಹಿಯಾ ಸಮಾಜವಾದ ಈಗ ಪಳೆಯುಳಿಕೆಗಳಾಗಿವೆ. ಈ ಗೊಂದಲಪುರದಲಿ,್ಲ ಸುಮಾರು ಒಂದು ದಶಕದಿಂದ ವಿವಿಧ ವಾದಗಳನ್ನು ಹಿಂದಿಕ್ಕಿ ಪ್ರಖರ ರಾಷ್ಟçವಾದವನ್ನು ಮುನ್ನೆಲೆಗೆ ತಂದ ಯುವ ಚಿಂತಕರ ತಂಡ ಇಂದು ಮೇಲುಗೈ ಸಾಧಿಸಿದೆ. ಈ ನವಯುಗ ಪ್ರವರ್ತಕರ ಮುಂಚೂಣಿಯಲ್ಲಿ ಪ್ರಜ್ವಲಿಸುತ್ತಿರುವ ಚಿಂತಕ, ಲೇಖಕ, ವಾಗ್ಮಿ ಶ್ರೀ ಹರೀಶ. ಇವರಿಗೀಗ ಎಲ್ಲಿಲ್ಲದ ಬೇಡಿಕೆ. ರಾಜ್ಯದ, ರಾಷ್ಟ್ರದ ಮೂಲೆ ಮೂಲೆಗಳಿಂದ ಭಾಷಣಗಳಿಗಾಗಿ ಆಹ್ವಾನಗಳ ಸುರಿಮಳೆ. ದೇಶದಲ್ಲಿ ಪ್ರಬಲವಾದ ರಾಷ್ಟçವಾದದ ಉದ್ಘೋಷ ಮೊಳಗುತ್ತಿರುವಾಗ ಅದಕ್ಕೆ ಕರ್ನಾಟಕದಲ್ಲಿ ಧ್ವನಿವರ್ಧಕರಾಗಿರುವವರು ಶ್ರೀ ಹರೀಶ. ರಾಷ್ಟçವಾದದ ಹಿರಿಮೆಯನ್ನು, ಅಧ್ಯಾತ್ಮ ಜ್ಞಾನದ ಶ್ರೇಷ್ಠತೆಯನ್ನು ಮೆರೆಸುತ್ತಿರುವ ಹೊಸ ಪೀಳಿಗೆಯ ಅಗ್ರಪಂಕ್ತಿಯಲ್ಲಿರುವ ಹರೀಶ ಎಲ್ಲ ಚಿಂತನಶೀಲರ, ವೈಚಾರಿಕ ವಿರೋಧಿಗಳ ಸಂಪರ್ಕ ಇರಿಸಿಕೊಂಡಿರುವುದು ಶ್ಲಾಘನೀಯ.

ನಾನಂತೂ ವೈಯಕ್ತಿಕವಾಗಿ ಶ್ರೀ ಹರೀಶರ ಜ್ಞಾನಕೋಶದ ಅಪಾರ ಲಾಭ ಪಡೆದಿದ್ದೀನಿ. ಅವರೊಂದಿಗೆ ಕೆಲವು ವರ್ಷಗಳಿಂದ ನಡೆಸಿದ ಮಾತುಕತೆ, ದೀರ್ಘ ಮೊಬೈಲ್ ಸಂಭಾಷಣೆಗಳಿಂದ ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಂಡಿದ್ದೀನಿ. ಅವರ ಕೆಲವು ಪದಗಳೇ, ವಾಕ್ಯಗಳೇ ನನ್ನ ಚಿಂತನೆಗೆ ಗ್ರಾಸವನ್ನು ಒದಗಿಸಿವೆ; ನನ್ನ ಸಾಹಿತ್ಯ ಕೃಷಿಗೆ ಪ್ರೇರಕವಾಗಿವೆ. ಶ್ರೀ ಹರೀಶರಂಥವರು ಭವ್ಯ ಭವಿಷ್ಯತ್ತಿನ ರೂವಾರಿಗಳು; ಕನ್ನಡದ ಹೆಮ್ಮೆಯ ಪ್ರತಿಭೆಗಳು. ಮುಂದೊಮ್ಮೆ ರಾಷ್ಟ್ರಮಟ್ಟದ ಚಿಂತಕರ ಸಾಲಿನಲ್ಲಿ ಮುಂಚೂಣಿಯಲ್ಲಿ ಮೆರೆಯುವ ಅಂತಃಸತ್ತ್ವ ಶ್ರೀ ಹರೀಶರಲ್ಲಿ ಅಡಕಗೊಂಡಿರುವುದು ಈಗಾಗಲೇ ಗೋಚರಿಸುತ್ತಿರುವುದು ಸತ್ಯಸ್ಯಸತ್ಯ.

(2025ರಲ್ಲಿ ಡಾ. ಜಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನ)