ಜಿ.ಬಿ. ಹರೀಶರ ಪತ್ರಿಕಾ ಪ್ರತಿಭೆ

ಡಾ. ಸಿಬಂತಿ ಪದ್ಮನಾಭ ಕೆ. ವಿ., ಸಹಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ

ಚಿಂತನ-ಮಂಥನ ಕೂಟಗಳಿಂದ, ತಮ್ಮ ಪುಸ್ತಕಗಳಿಂದ ಪರಿಚಿತರಾದ ಜಿ.ಬಿ. ಹರೀಶರು ಆಪ್ತರೆನಿಸುತ್ತಾ ಹೋದದ್ದು ನಾವಿಬ್ಬರೂ ಒಂದೇ ಸಮಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಗಳಾದ ಮೇಲೆ. ಸಾಮಾನ್ಯವಾಗಿ ‘ಟೀ ಕುಡಿಯೋಣ, ಕಾಫಿ ಕುಡಿಯೋಣ’ ಎಂದು ಸಹೋದ್ಯೋಗಿಗಳೊಂದಿಗೆ ಓಡಾಡುವ ಅಭ್ಯಾಸ ಇಲ್ಲದ ನಾವು, ಇಬ್ಬರೇ ಒಟ್ಟಾದರೆ ಒಂದು ಗುಟುಕು ಕಾಫಿ ಜೊತೆ ಗಂಟೆಗಟ್ಟಲೆ ಕಳೆದದ್ದುಂಟು. ಸಾಹಿತ್ಯ, ಹೊಸ ಪುಸ್ತಕ, ಪ್ರಚಲಿತ ವಿದ್ಯಮಾನ… ಹೀಗೆ ನಮ್ಮ ಮಾತುಗಳಿಗೆ ವಸ್ತುವಿನ ಕೊರತೆ ಎಂದೂ ಇರಲಿಲ್ಲ. ಮಾತಾಡುವುದಕ್ಕೆಂದೇ ಕೆಲವೊಮ್ಮೆ ಅವರು ನಮ್ಮ ಮನೆಯಲ್ಲಿ ಉಳಿದುಕೊಂಡದ್ದಿತ್ತು. ಆಗೆಲ್ಲ ತಡರಾತ್ರಿಯವರೆಗೆ, ಮುಂಜಾನೆಯವರೆಗೆ ಎಚ್ಚರವಿದ್ದು ಪ್ರಪಂಚ ಸುತ್ತಿ ಬರುವ ವಿಚಾರವಿನಿಮಯ ನಡೆಯುತ್ತಿದ್ದುದಿತ್ತು.

ಭೇಟಿಯಾದಾಗಲೆಲ್ಲ ತಾವು ಬರೆಯುತ್ತಿರುವ ಹೊಸ ಪುಸ್ತಕದ ಬಗ್ಗೆ ಹರೀಶ್ ಹೇಳುತ್ತಿದ್ದರು. ಕೆಲವೊಮ್ಮೆ ಎರಡು-ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಬರೆಯುತ್ತಿರುವುದಾಗಿ ಹೇಳುತ್ತಿದ್ದುದೂ ಉಂಟು. ಒಂದು ಪುಸ್ತಕ ಸರಿ, ಎರಡು-ಮೂರನ್ನು ಸಮಾನಾಂತರವಾಗಿ ಹೇಗೆ ಬರೆಯುವಿರಿ ಎಂದು ನಾನು ಬೆರಗಾಗಿ ಕೇಳುತ್ತಿದ್ದೆ. ಬೆಳಗ್ಗೆ ಬರೆಯುವ ಪುಸ್ತಕ ಬೇರೆ, ಮಧ್ಯಾಹ್ನ ಬೇರೆ, ರಾತ್ರಿ ಬೇರೆ… ಎಲ್ಲದಕ್ಕೂ ಪ್ರತ್ಯೇಕ ಟಿಪ್ಪಣಿ ಚೀಟಿಗಳು…ಪ್ರತ್ಯೇಕ ಫೈಲ್‌ಗಳು. ಒಂದು ಚೀಟಿ ಮುಗಿದ ಕೂಡಲೇ ಅದರ ಫೈಲ್‌ಗೆ ಸೇರಿಸುವುದು, ಮುಂದೆ ಬೇರೆ ಪುಸ್ತಕಕ್ಕೆ ಸಂಬಂಧಿಸಿದ್ದು ಬರೆದರೆ ಇನ್ನೊಂದು ಫೈಲಿಗೆ… ಹೀಗೆಲ್ಲ ಅವರು ವಿವರಿಸುತ್ತಿದ್ದರೆ ‘ಅದು ಹೇಗೆ ಸಾಧ್ಯ’ ಎಂದು ನಾನು ಇನ್ನೂ ಗೊಂದಲಕ್ಕೆ ಒಳಗಾಗುತ್ತಿದ್ದೆ. ಆದರೆ ಹರೀಶರಲ್ಲಿ ಗೊಂದಲವಿರುತ್ತಿರಲಿಲ್ಲ. ಅವರಲ್ಲಿ ಅಂಥದ್ದೊಂದು ಅವಧಾನ ಕಲೆ ಇದೆ. ನಾಲ್ಕಾರು ದಿಕ್ಕುಗಳಲ್ಲಿ ಒಟ್ಟೊಟ್ಟಿಗೆ ಯೋಚಿಸಬಲ್ಲ ಸಾಮರ್ಥ್ಯ ಅದು.

ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಅವರು ಸೇರಿದ ಆರಂಭದಲ್ಲೇ ಕನ್ನಡ ಭಾಷಾಭಿವೃದ್ಧಿ ಯೋಜನೆಯ ಸುಮಾರು 40 ಪುಸ್ತಕಗಳನ್ನು ಸಂಪಾದಿಸುವ ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಆ ಯೋಜನೆ ಅವರು ಬರುವುದಕ್ಕಿಂತ ಮೊದಲೇ ಆರಂಭವಾಗಿದ್ದರೂ ಅನ್ಯಾನ್ಯ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು. ಆ ಯೋಜನೆಯ ನಿರ್ದೇಶಕರ ಜವಾಬ್ದಾರಿಯನ್ನು ವಹಿಸಿಕೊಂಡವರೇ ಹರೀಶರು ಮಿಂಚಿನಂತೆ ಕೆಲಸ ಮಾಡಿದರು. ಲೇಖಕರನ್ನು ಹುಡುಕಿ ಕೆಲಸಗಳನ್ನು ಒಪ್ಪಿಸಿ ಅವರ ಬೆನ್ನುಬಿದ್ದು ಬರೆಯಿಸಿದರು. ಆರೆಂಟು ತಿಂಗಳಲ್ಲಿ 40 ವಿದ್ವತ್‌ಕೃತಿಗಳನ್ನು ಸಂಪಾದಿಸಿ, ಸರ್ಕಾರಕ್ಕೆ ವಾಪಸಾಗಬೇಕಿದ್ದ ಹಣ ಸದ್ಬಳಕೆ ಆಗುವಂತೆ ನೋಡಿಕೊಂಡರು. ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ವಿ.ಎಸ್. ಆಚಾರ್ಯರು ಅಷ್ಟೂ ಪುಸ್ತಕಗಳನ್ನು ಒಟ್ಟಿಗೆ ಬಿಡುಗಡೆ ಮಾಡಿದರು.

ಹರೀಶರಂಥ ವಿದ್ವಾಂಸರು ನಮ್ಮಲ್ಲಿ (ತುಮಕೂರು ವಿಶ್ವವಿದ್ಯಾನಿಲಯ) ಇರಬೇಕಿತ್ತು ಅಂತ ನಾನು ಎಷ್ಟೋ ಸಲ ಅಂದುಕೊಂಡದ್ದಿದೆ, ಅವರಲ್ಲೂ ಹೇಳಿಕೊಂಡದ್ದಿದೆ. ಆದರೆ ಅವರು ವಿಶ್ವವಿದ್ಯಾನಿಲಯದ ಕೆಲಸ ತೊರೆದರೂ ಅವರು ಸಂಪಾದಿಸಿದ ಪುಸ್ತಕದ ರಾಶಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಇಷ್ಟಾದ ಮೇಲೂ, ಹರೀಶರು ತುಮಕೂರಲ್ಲಿ ಅಂತಲ್ಲ, ದೇಶದ ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಇರಬೇಕಿತ್ತು ಅಂತ ನನಗೆ ಪದೇಪದೆ ಅನಿಸುವುದುಂಟು. ಆ ಹುದ್ದೆಯಲ್ಲಿ ಇಲ್ಲದಿದ್ದರೂ ಅವರು ಅವರಿಗಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತಿರುವುದು ಮಾತ್ರ ಸಂತೋಷದ ವಿಷಯವೇ.

***

ಹರೀಶರ ಪತ್ರಿಕಾ ವ್ಯವಸಾಯದ ಬಗ್ಗೆ ಪುಟ್ಟದೊಂದು ಟಿಪ್ಪಣಿ ಮಾಡುವುದು ಈ ಲೇಖನದ ಪ್ರಧಾನ ಉದ್ದೇಶ. ಹರೀಶರು ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕರಾಗಿ, ‘ವಿಜಯವಾಣಿ’ಯ ಸಂಪಾದಕೀಯ ಸಲಹೆಗಾರರಾಗಿ ಎರಡು ವರ್ಷ (2014-16) ಕೆಲಸ ಮಾಡಿದ್ದಿದೆ. ಅದು ಅವರ ಅಧಿಕೃತ ಪತ್ರಿಕೋದ್ಯೋಗವಾದರೆ, ಪತ್ರಿಕೆಗಳೇ ಮೊದಲಾದ ಮಾಧ್ಯಮಗಳೊಂದಿಗಿನ ಅವರ ಸಂಪರ್ಕ, ಸಂಬಂಧ ಸಾಕಷ್ಟು ಹಳೆಯದು. ವಿದ್ಯಾಭ್ಯಾಸದ ದಿನಗಳಿಂದಲೇ ಪತ್ರಿಕಾ ಬರೆವಣಿಗೆ, ಪತ್ರಕರ್ತರೊಂದಿಗಿನ ಒಡನಾಟ ಅವರಿಗೆ ಸಾಮಾನ್ಯವಾಗಿತ್ತು. ಹೈಸ್ಕೂಲು, ಕಾಲೇಜು ದಿನಗಳಲ್ಲಿ ಅವರ ಬರೆವಣಿಗೆಗೆ ವೇದಿಕೆಯೊದಗಿಸಿದ್ದು ಹಾಸನದ ‘ಜನಮಿತ್ರ’ ಪತ್ರಿಕೆ. 1994ರಲ್ಲಿ ಕಪಿಲ್‌ದೇವ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ, “ಅಯ್ಯೋ ಮುಂದೇನು” ಎಂಬ ಆತಂಕದಿಂದ ಹರೀಶ್ ಜನಮಿತ್ರಕ್ಕೆ ಲೇಖನ ಬರೆದದ್ದುಂಟು. ವಿದ್ವಾಂಸರಾದ ಕೆ. ಕೃಷ್ಣಮೂರ್ತಿಯವರು ನಿಧನರಾದಾಗ, ಡಾ. ಎಸ್.ಎಲ್. ಭೈರಪ್ಪನವರ ‘ಸಾರ್ಥ’ ಪ್ರಕಟವಾದಾಗ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದರು. ಎಬಿವಿಪಿಯ ಕಾರ್ಯಕರ್ತರಾಗಿ ಕ್ರಿಯಾಶೀಲರಾಗಿದ್ದಾಗ ಸಂಗಡಿಗರೊಂದಿಗೆ ಗೋಡೆಪತ್ರಿಕೆಗಳನ್ನೂ ನಿರಂತರವಾಗಿ ಹೊರತರುತ್ತಿದ್ದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಎನ್. ರಘು ಅವರೊಂದಿಗೆ ‘ಅಧ್ಯಯನ’ ಎಂಬ ನಾಲ್ಕುಪುಟಗಳ ಕಿರುಪತ್ರಿಕೆಯನ್ನೂ ಆ ಕಾಲದಲ್ಲಿ ಪ್ರಕಟಿಸುತ್ತಿದ್ದುದನ್ನು ಹರೀಶ್ ನೆನಪಿಸಿಕೊಳ್ಳುತ್ತಾರೆ. ತಾರುಣ್ಯದಲ್ಲಿ ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರ್ ಒಡನಾಟವೂ ಚೆನ್ನಾಗಿಯೇ ಇತ್ತು. ಮುಂದೆ ಅವರು ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಕನ್ನಡದ ಎಲ್ಲ ಮುಖ್ಯವಾಹಿನಿಯ ಪತ್ರಿಕೆಗಳಿಗೂ ನಿರಂತರವಾಗಿ ಬರೆದರು. ಅವರ ಹೆಚ್ಚಿನ ಬರೆಹಗಳೂ ಸಾಹಿತ್ಯ, ಸಂಸ್ಕೃತಿ, ಸಾಹಿತಿಗಳ ಸಂದರ್ಶನ, ಪುಸ್ತಕ ವಿಮರ್ಶೆ ಇತ್ಯಾದಿಗಳ ಸುತ್ತ ಹರಡಿಕೊಂಡಿವೆ. ವಿಜಯ ಕರ್ನಾಟಕ ಮತ್ತು ವಿಜಯವಾಣಿ ಪತ್ರಿಕೆಗಳಿಗಾಗಿ ಸಾಲುಸಾಲು ಪುಸ್ತಕ ವಿಮರ್ಶೆಗಳನ್ನೂ ಅವರು ಬರೆದದ್ದುಂಟು. ಹರೀಶ್ ಅವರು ಪತ್ರಿಕೆಗಳಿಗಾಗಿ ಬರೆಯುತ್ತಿದ್ದ ಅಂಕಣಗಳು – ‘ಮಾನಸ ಸರೋವರ’ (ಉದಯವಾಣಿ), ‘ಹರಿಗೋಲು’ (ವಿಜಯ ಕರ್ನಾಟಕ), ‘ಪ್ರತಿಬಿಂಬ’ (ವಿಜಯವಾಣಿ), ‘ಶ್ರುತಪೀಠ’ (ಕನ್ನಡ ಟೈಮ್ಸ್ ಆಫ್ ಇಂಡಿಯಾ) – ಅವರ ಅಧ್ಯಯನದ ವ್ಯಾಪ್ತಿ ಹಾಗೂ ಆಸಕ್ತಿಯ ಹರವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. ಉದಯವಾಣಿಯ ಅಂಕಣಕ್ಕಾಗಿ ಅವರು ಬರೆದ ಬೌದ್ಧಚಿಂತನೆಗಳ ಕುರಿತಾದ ಲೇಖನವೊಂದು ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯವೂ ಆಗಿತ್ತು.

ಡಾ. ಭೈರಪ್ಪನವರ ‘ಉತ್ತರಕಾಂಡ’ ಕಾದಂಬರಿಯ ಮೊತ್ತಮೊದಲ ವಿಮರ್ಶೆಯನ್ನು ಬರೆದದ್ದೂ ಹರೀಶ್ ಅವರೇ. “ಪುಸ್ತಕ ಮಾರುಕಟ್ಟೆಗೆ ಬಂದ ದಿನವೇ ಆ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಯಿತು. ‘ಕಾದಂಬರಿ ಬಗ್ಗೆ ನಿಮಗೆ ಒಂದಿಷ್ಟು ತಕರಾರು ಇದೆಯಲ್ಲ?’ ಅಂತ ಲೇಖನ ಓದಿದ ಭೈರಪ್ಪನವರು ಕೇಳಿದರು, ಆದರೂ ಅವರಿಗದು ಇಷ್ಟವಾಗಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಹರೀಶ್.

ಡಾ. ಭೈರಪ್ಪನವರ ಸುದೀರ್ಘ ಸಂದರ್ಶನವೊಂದನ್ನೂ ಹರೀಶರು ವಿಶೇಷ ಸಂದರ್ಭವೊಂದರಲ್ಲಿ ಸಂಯುಕ್ತ ಕರ್ನಾಟಕಕ್ಕಾಗಿ ಮಾಡಿದ್ದರು. “ಬಹಳ ದೀರ್ಘ ಸಂದರ್ಶನವದು. ಗರುಡನಗಿರಿ ನಾಗರಾಜ, ಬಾಬು ಕೃಷ್ಣಮೂರ್ತಿ, ಹುಣಸವಾಡಿ ರಾಜನ್, ಪ್ರಧಾನ ಗುರುದತ್ ಮೊದಲಾದ ಅನೇಕ ಹಿರಿಯರು ಆ ಸಂದರ್ಶನಕ್ಕೆ ಸಾಕ್ಷಿಯಾಗಿದ್ದರು. ಭೈರಪ್ಪನವರೂ ಈ ಸಂದರ್ಶನವನ್ನು ತಮಗೆ ಬಹುವಾಗಿ ಇಷ್ಟವಾದ ಸಂದರ್ಶನಗಳಲ್ಲೊAದು ಎಂದು ಗುರುತಿಸಿದ್ದರು” ಎನ್ನುತ್ತಾರೆ ಹರೀಶ್.

ಕರ್ನಾಟಕದ ಬೌದ್ಧಿಕ ವಲಯದಲ್ಲೂ ಗೌರವಕ್ಕೆ ಪಾತ್ರರಾಗಿರುವ ಹರೀಶ್ ಅವರ ಪ್ರತಿಕ್ರಿಯೆಗಳನ್ನು ಬೇರೆಬೇರೆ ಸಂದರ್ಭಗಳಲ್ಲಿ ಪತ್ರಿಕೆಗಳು ಪ್ರಕಟಿಸಿವೆ. ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ವಿದ್ಯಮಾನಗಳಿಗೆ ಅವರು ತಮ್ಮ ಪ್ರಬುದ್ಧ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. ಕನ್ನಡದ ಬಹುತೇಕ ಎಲ್ಲ ಟಿವಿ ವಾಹಿನಿಗಳ ಸಾಮಯಿಕ ಚರ್ಚೆಗಳಲ್ಲಿ ಅವರು ವಿಷಯತಜ್ಞರಾಗಿ ಭಾಗವಹಿಸಿದ್ದಾರೆ. ‘ಸಂವಾದ’ವೇ ಮೊದಲಾದ ಯೂಟ್ಯೂಬ್ ವೇದಿಕೆಗಳಲ್ಲಿ ಅವರ ನೂರಾರು ಉಪನ್ಯಾಸಗಳು, ಪ್ರತಿಕ್ರಿಯೆಗಳು ದಾಖಲಾಗಿವೆ. ಮುದ್ರಣ ಮಾಧ್ಯಮದಷ್ಟೇ ಹೊಸ ಕಾಲದ ಡಿಜಿಟಲ್ ಮಾಧ್ಯಮದಲ್ಲೂ ಹರೀಶ್ ಅವರ ವಿಶಿಷ್ಟ ಗುರುತುಗಳಿವೆ.

ಯಾವ ಕ್ಷೇತ್ರವಾದರೂ ಸರಿ, ತಾವು ಕಾಲಿಟ್ಟ ಮೇಲೆ ಅಲ್ಪಸಮಯದಲ್ಲೇ ಅದರ ಪ್ರಧಾನ ಗುಣಗಳನ್ನು ಆವಾಹಿಸಿಕೊಂಡು, ಹರೀಶರು ಅದರೊಂದಿಗೆ ಸೇರಿಕೊಳ್ಳಬಲ್ಲರು ಎಂಬುದಕ್ಕೆ ಅವರ ಪತ್ರಕಾರಿಕೆಯ ದಿನಗಳು ಸಾಕ್ಷಿ. ಸಾಹಿತ್ಯ, ವಿಮರ್ಶೆ ಮುಂತಾದ ಗಂಭೀರ ಅಧ್ಯಯನದ ಕ್ಷೇತ್ರಗಳಿಗೆ ಹೋಲಿಸಿದರೆ ಪತ್ರಿಕಾಕ್ಷೇತ್ರ ಸಾಕಷ್ಟು ಭಿನ್ನ- ಅದು “ಅವಸರದ ಸಾಹಿತ್ಯ”. ಕೆಲವರು ಇದನ್ನು ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಕೆಲಸವೆಂದು ಟೀಕಿಸುವುದೂ ಉಂಟು. ಆ ವೃತ್ತಿಯೇ ಹಾಗೆ. ಅಲ್ಲಿ ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಕುಳಿತು ಬರೆಯುವುದಕ್ಕೆ ವ್ಯವಧಾನ ಇಲ್ಲ. ಅಂದಂದಿನ ಕೆಲಸ ಅಂದಂದಿಗೆ ಮುಕ್ತಾಯ, ಮರುದಿನ ಹೊಸ ಅಧ್ಯಾಯ. ಡಿಜಿಟಲ್ ಮಾಧ್ಯಮದ ಈ ಜಮಾನಾದಲ್ಲಂತೂ ಒಂದೊಂದು ಕ್ಷಣಕ್ಕೂ ಹೊಸಹೊಸ ಅಧ್ಯಾಯ. ಹಿಂದಿನ ಕ್ಷಣ ಇತಿಹಾಸ.

ಸಾಹಿತ್ಯದ ಗಂಭೀರ ಅಭ್ಯಾಸಿಯಾದ ಹರೀಶರು ವೃತ್ತಿಪರ ಪತ್ರಕರ್ತರಾದ ಮೇಲೆ ಪತ್ರಿಕಾಲೋಕ ಬಯಸುವ ಹಲವು ಬರೆವಣಿಗೆಗಳನ್ನೂ ಆಸ್ಥೆಯಿಂದ ಮಾಡಿದರು. ಸರಳ, ನೇರ, ಸಂಕ್ಷಿಪ್ತ ಅಭಿವ್ಯಕ್ತಿ ಪತ್ರಿಕಾ ಬರೆವಣಿಗೆಗಳ ಪ್ರಮುಖ ಲಕ್ಷಣ ಮತ್ತು ಅಪೇಕ್ಷೆ. ಪ್ರಜಾವಾಣಿ ಹಾಗೂ ವಿಜಯವಾಣಿಯಲ್ಲಿ ಹರೀಶ್ ಅವರು ಉದ್ಯೋಗಿಯಾಗಿದ್ದಾಗ ಪ್ರಕಟಿಸಿದ ಬರೆಹಗಳು ಈ ಅಪೇಕ್ಷೆಯನ್ನು ಅವರು ಅರ್ಥೈಸಿಕೊಂಡದ್ದನ್ನು ತೋರಿಸುತ್ತವೆ. ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಅವರು ಬರೆದ ಲೇಖನಗಳು, ಚುನಾವಣಾ ಸಂದರ್ಭದ ವ್ಯಕ್ತಿಚಿತ್ರಗಳು, ಸಂಪಾದಕೀಯಗಳು, ಅಲ್ಲಿ ಅವರು ಬಳಸಿರುವ ನೇರ, ಸರಳ ಅಭಿವ್ಯಕ್ತಿ, ಚುಟುಕಾದ ವಾಕ್ಯಗಳು, ಚುರುಕು ಶೀರ್ಷಿಕೆಗಳು ‘ಇದು ಪತ್ರಿಕಾ ಶೈಲಿ’ ಎಂದು ಸ್ಪಷ್ಟವಾಗಿ ಗುರುತಿಸುವಂತಿವೆ. ಮಾಧ್ಯಮವೃತ್ತಿ ಕೈಗೊಂಡವರಿಗೆ ಇರಬೇಕಾದ ತಟಸ್ಥ ನಿಲುವೂ ಅವರ ಬರೆವಣಿಗೆಗಳಲ್ಲಿ ಕಾಣಿಸುತ್ತದೆ. ವಾಜಪೇಯಿ, ಮೋದಿ, ಅರುಣ್ ಶೌರಿ, ಆಚಾರ್ಯ ಕೃಪಲಾನಿ, ಜಗನ್ನಾಥರಾವ್ ಜೋಶಿ ಕುರಿತು ವ್ಯಕ್ತಿಚಿತ್ರಗಳನ್ನು ಬರೆದಂತೆಯೇ ಸುಚೇತಾ ಮಜುಮ್ದಾರ್, ಭೂಪೇಶ್ ಗುಪ್ತಾ, ಫಿರೋಜ್ ಗಾಂಧಿ, ಇಂದ್ರಜಿತ್ ಗುಪ್ತಾ, ವೆಂಕಟಗಿರಿಗೌಡ, ಪಾರ್ವತಿ ಕೃಷ್ಣನ್ ಬಗೆಗೂ ಅವರು ವ್ಯಕ್ತಿಚಿತ್ರಗಳನ್ನು ಬರೆದರು. ಅವರ ಪತ್ರಿಕಾ ಲೇಖನಗಳೆಲ್ಲ ಅವರೇ ಎದುರು ನಿಂತು ಮಾತಾಡಿದಷ್ಟು ಸುಲಲಿತವೂ ಆತ್ಮೀಯವೂ ಆಗಿವೆ.

ಪತ್ರಕರ್ತನಿಗಿರಬೇಕಾದ ನಿಷ್ಠುರತೆ ಹಾಗೂ ನಿರ್ಭಿಢತೆಗಳನ್ನೂ ಅವರು ಬಿಟ್ಟಕೊಡಲಿಲ್ಲವೆಂಬುದನ್ನು ಅವರ ಅನೇಕ ಲೇಖನಗಳು ದೃಢಪಡಿಸುತ್ತವೆ. 2014ರಲ್ಲಿ ಆಗಿನ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಭಗವದ್ಗೀತೆಯನ್ನು ಭಾರತದ ರಾಷ್ಟ್ರೀಯ ಪವಿತ್ರ ಗ್ರಂಥವೆಂದು ಘೋಷಿಸಬೇಕು” ಎಂದು ಹೇಳಿದಾಗ, ಹರೀಶರು ಲೇಖನವೊಂದರ ಮೂಲಕ ಸಕಾರಣವಾಗಿಯೇ ಅದನ್ನು ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಅವರು ಬರೆದ ‘ತಾಯಿಯ ಬಳಿ ಹೋಗಲು ಕಾನೂನು ಬೇಕಿಲ್ಲ’ ಎಂಬ ಲೇಖನ ಬಹಳ ಸೊಗಸಾಗಿದೆ.

“ಕನ್ನಡ ನಿಜ, ಕರ್ನಾಟಕ ಭ್ರಮೆ. ಸಂಗೀತ ನಿಜ, ಉತ್ತರಾದಿ ದಕ್ಷಿಣಾದಿ ಭ್ರಮೆ. ತತ್ವಶಾಸ್ತ್ರದ ಗೀತೆ ನಿಜ, ರಾಷ್ಟ್ರಗ್ರಂಥ ಹಾಗೂ ಪವಿತ್ರಪುಸ್ತಕವಾದ ಭಗವದ್ಗೀತೆ ಒಂದು ಭ್ರಮೆ” ಎಂದು ಬರೆಯುವ ಹರೀಶ್ ಮುಂದಿನ ಭಾಗದಲ್ಲಿ “ಅದೊಂದು ಮುಕ್ತ ಪಠ್ಯ. ಸಂವಿಧಾನಕ್ಕಿಂತ ಹಳೆಯದು, ಆದರೆ ಸಂವಿಧಾನಕ್ಕೆ ಪರ್ಯಾಯವಲ್ಲ ಎಂಬುದನ್ನು ಗೀತೆಯ ತತ್ವಶಾಸ್ತ್ರ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿ ನಮ್ರವಾಗಿ ತಿಳಿಸಲು ಬಯಸುತ್ತೇನೆ” ಎಂದು ಬರೆಯುತ್ತಾರೆ. ಅಲ್ಲಿ ಹರೀಶರ ಸ್ವಂತಿಕೆ ಹಾಗೂ ಪತ್ರಕರ್ತನ ದಿಟ್ಟತನ ಎರಡೂ ಹದವಾಗಿ ಬೆರೆತಿವೆ.

ಯೋಗಗುರು ಬಿ. ಕೆ. ಎಸ್. ಅಯ್ಯಂಗಾರರ ಬಗ್ಗೆ ಬರೆಯುತ್ತಾ “ಯೋಗವೆಂದರೆ ಕೇವಲ ಆಸನಗಳ ತರಗತಿ, ಅಭ್ಯಾಸಗಳಲ್ಲ. ಅದೊಂದು ಜೀವನ ವಿಧಾನ ಎಂಬುದನ್ನು ವಿಶ್ವಕ್ಕೆ ತೋರಿಸಿದ ಮಹಾನ್ ಯೋಗ ಗುರು ಬಿ.ಕೆ.ಎಸ್…ಅವರ ಪಾಲಿಗೆ ದೇಹವೇ ದೇವಾಲಯವಾಯಿತು. ಯೋಗವೇ ಅವರ ನಿತ್ಯ ಪ್ರಾರ್ಥನೆಯಾಯಿತು…” ಎಂದು ಉಲ್ಲೇಖಿಸುತ್ತಾರೆ.

‘ಸ್ವಾತಂತ್ರ್ಯಗೀತೆಯ ಹಕ್ಕಿ ಮಾಯಾ ಏಂಜೆಲೊ’ ಎಂಬ ಲೇಖನದಲ್ಲಿ “ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್‌ರಂತೆ, ಶಿವರಾಮ ಕಾರಂತರಂತೆ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡ ಹಿರಿಯ ಚೇತನ ಮಾಯಾ ಏಂಜೆಲೊ. ಆಕೆ ಬದುಕು ರೆಕ್ಕೆ ಸುಟ್ಟಾಗಲೆಲ್ಲ ಮತ್ತೆಮತ್ತೆ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದರು” ಎಂದು ಬರೆದಿದ್ದಾರೆ. ‘ಸುದ್ದಿಗೆ ಆಹಾರವಾದ ಸಂಜಯ ಬಾರು’ ಎಂಬ ಇನ್ನೊಂದು ಲೇಖನದಲ್ಲಿ “ಅಧಿಕಾರ ಕೇಂದ್ರಕ್ಕೆ ಅನೇಕ ಬಾಗಿಲುಗಳು, ಹಲವು ಕಿಟಕಿಗಳು. ಪ್ರತಿಯೊಂದು ಗೋಡೆಗೂ ಕಿವಿಗಳು ಇರುತ್ತವೆ. ಕೆಲವು ಕಿವಿಗಳು ಮಾತಾಡುತ್ತವೆ” ಎಂದು ಎಚ್ಚರಿಸಿದ್ದಾರೆ. ಮಾಣಿಕ್ ಷಾ ಬಗ್ಗೆ ಬರೆಯುತ್ತಾ “ಬೇಸರದ ಸಂಗತಿ ಎಂದರೆ ಸ್ವಾತಂತ್ರ್ಯಾನಂತರದ ಎಲ್ಲ ಪ್ರಮುಖ ಸಮರಗಳ ಮುಂಚೂಣಿಯಲ್ಲಿದ್ದು 94 ವರ್ಷ ಬದುಕಿ ಮೃತರಾದ ಮಾಣಿಕ್ ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟçಪತಿ, ಪ್ರಧಾನಿ, ಗೃಹಮಂತ್ರಿ ಯಾರೂ ಭಾಗವಹಿಸಲಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಭ್ರಷ್ಟರೆಂಬ ಆಪಾದನೆಗೆ ಒಳಗಾದ ರಾಜಕಾರಣಿಗಳು ನಿಧನರಾದಾಗ ಕೂಡ ಕೆಳಕ್ಕಿಳಿಯುವ ರಾಷ್ಟçಧ್ವಜ ಅಂದು ಮಾತ್ರ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ. ಮೇರಾ ಭಾರತ್ ಮಹಾನ್!” ಎಂದು ಕುಟುಕುತ್ತಾರೆ. ಪತ್ರಿಕಾ ಬರಹಗಳೆಂಬ ಅವಸರದ ಸಾಹಿತ್ಯಲೋಕದಲ್ಲೂ ತಮ್ಮ ನಿಷ್ಠುರ ನಿಲುವು ಹಾಗೂ ಅಧ್ಯಯನಶೀಲತೆಯನ್ನು ಕಡೆಗಣಿಸಿದವರಲ್ಲ ಹರೀಶ್. ತಾವು ಸ್ಪರ್ಶಿಸಿದ ಕ್ಷೇತ್ರಗಳಲ್ಲೆಲ್ಲ ತಮ್ಮದೇ ಛಾಪು ಮೂಡಿಸಿರುವ ವೈಶಿಷ್ಟ್ಯ ಹರೀಶರದ್ದು. ಪತ್ರಿಕಾರಂಗದಲ್ಲೂ ಅವರದ್ದೇ ಆದ ಹೆಜ್ಜೆಗುರುತುಗಳಿರುವುದು ಅಭಿನಂದನೀಯ.

(2025ರಲ್ಲಿ ಡಾ. ಜಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನ)