ಪುಸ್ತಕಗಳು

ಎದ್ದೇಳು ಭಾರತೀಯ

ಮೊದಲ ಮುದ್ರಣ – 2023, ಎರಡನೇ ಮುದ್ರಣ – 2023

ಬೆಲೆ: 60 ರೂ. ಪುಟ: 56

ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್

ಭಾರತವು ನಿಜಾರ್ಥದಲ್ಲಿ ಸ್ವತಂತ್ರವಾಗಬೇಕಾದರೆ ನಮ್ಮ ಮನೋಧರ್ಮ ಯಾವ ದಿಕ್ಕಿನಲ್ಲಿ ಮುಂದುವರಿಯಬೇಕು ಎಂಬುದನ್ನು ಕೇಂದ್ರಪ್ರಶ್ನೆಯಾಗಿಟ್ಟುಕೊಂಡು ಡಾ. ಜಿ‌. ಬಿ. ಹರೀಶ ಈ ಕೃತಿಯನ್ನು ರಚಿಸಿದ್ದಾರೆ. ಇಸ್ಲಾಂ, ಕ್ರಿಶ್ಚಿಯಾನಿಟಿ, ಕಮ್ಯುನಿಸಂ ಮತ್ತು ವೋಕ್ – ಈ ಅಪಾಯಗಳಿಂದ ನಮ್ಮನ್ನು ಪಾರುಮಾಡಿಕೊಳ್ಳುವುದು ಹೇಗೆ? ನಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದು ಹೇಗೆ? ಎಂಬುದೇ ಈ ಕೃತಿಯ ಜೀವಾಳ. ಅಹಿಂಸೆ-ಕ್ರೌರ್ಯದ ನಡುವಿನ ವ್ಯತ್ಯಾಸ, ಬ್ರಾಹ್ಮ-ಕ್ಷಾತ್ರದ ಅಗತ್ಯ, ಜ್ಞಾನಾಧಿಕಾರದ ಕೇಂದ್ರಗಳನ್ನು ಕಮ್ಯುನಿಸಂ ಕಪಿಮುಷ್ಠಿಯಿಂದ ಬಿಡಿಸುವ ಅನಿವಾರ್ಯತೆ ಮುಂತಾದವನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಭಾರತೀಯ ಸಮಸ್ಯೆಗಳಿಗೆ ಭಾರತೀಯ ನೆಲೆಯ ಉತ್ತರಗಳನ್ನೇ ಪಡೆಯಬೇಕೆಂಬುದು ಕೃತಿಯ ಆಶಯ.

ಭಗವಾನ್ ಬುದ್ಧನ ಧಮ್ಮಪದ

ಪ್ರಥಮ ಮುದ್ರಣ – 2023, ಮೂರನೆ ಮುದ್ರಣ – 2024

ಪುಟ: 120, ಬೆಲೆ: 120 ರೂ.

ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್

‘ಧಮ್ಮಪದ’ ಭಗವಾನ್ ಬುದ್ಧನ ಸಂದೇಶಗಳ ಸಾರ. ಇದು ವಾದ ವಿವಾದಗಳಿಂದ, ಖಂಡನ ಮಂಡನಗಳಿಂದ ಕೂಡಿರುವ ಗ್ರಂಥವಲ್ಲ. ಬುದ್ಧನು ಜೇತವನದಲ್ಲಿ ತಂಗಿರುವಾಗ ಅಲ್ಲಿರುವ ಭಿಕ್ಕುಗಳಿಗೆ ಹಾಗೂ ಆತನನ್ನು ಸಂದರ್ಶಿಸಲು ಬಂದ ಸಂದರ್ಶಕರಿಗೆ ಹೋಲಿಕೆ, ಸಾಮತಿ, ದೃಷ್ಟಾಂತದ ಮೂಲಕ ಕೆಲವು ತತ್ವಗಳನ್ನು, ಜೀವನರಹಸ್ಯಗಳನ್ನು ತಿಳಿಸಿಕೊಟ್ಟ. ಆ ಮಾತಿನ ನಡುವೆ ಹೊಳೆಯುವ ಅರಿವಿನ ಹರಳುಗಳೇ ಗಾಹೆಗಳು. ಆ ಗಾಹೆಗಳನ್ನು ಡಾ. ಜಿ. ಬಿ. ಹರೀಶ್ ಕನ್ನಡಕ್ಕೆ ಅನುವಾದಿಸಿ ಈ ಕೃತಿಯಲ್ಲಿ ನೀಡಿದ್ದಾರೆ. ಬುದ್ಧನ ಸಂದೇಶಗಳನ್ನು ಅತ್ಯಂತ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.

ಭಾರತೀಯ ತಂತ್ರಶಾಸ್ತ್ರದ ಪರಿಚಯ

ಪರಿಷ್ಕೃತ ಪ್ರಥಮ ಮುದ್ರಣ – 2018

ಪುಟ: 120, ಬೆಲೆ: 110 ರೂ.

ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಶನ್ಸ್

ಭಾರತ ತಂತ್ರಶಾಸ್ತ್ರಕ್ಕೆ ಅಪಾರ ಕೊಡುಗೆ ಕೊಟ್ಟಂತಹ ನೆಲ. ಬೌದ್ಧ, ಜೈನ, ವೈಷ್ಣವ ಮೊದಲಾದ ಪಂಥಗಳು ತಂತ್ರಕ್ಕೆ ಕೊಡುಗೆ ನೀಡಿವೆ. ವೈದಿಕ ಸಂಪ್ರದಾಯದಲ್ಲೂ ತಂತ್ರದ ಮಾರ್ಗಗಳಿವೆ. ಅತೀಶ ದೀಪಂಕರನೆಂಬ ಬೌದ್ಧ ಯೋಗಿಯಿಂದ ಹಿಡಿದು ಶ್ರೀ ರಾಮಕೃಷ್ಣ ಪರಮಹಂಸರವರೆಗೆ ಅದೆಷ್ಟೇ ಮಹಾತ್ಮರು ಈ ಮಾರ್ಗದಲ್ಲಿ ಸಾಗಿ ಸಾಧನೆ ಮಾಡಿದ್ದಾರೆ. ತಂತ್ರ ಹುಟ್ಟಿದ್ದು ಹೇಗೆ? ಅವುಗಳ ಅರ್ಥ, ವ್ಯಾಪ್ತಿ, ವಿಚಾರಗಳೇನು? ಅವುಗಳ ಮೂಲ ಸಾರ ಹೇಳುವುದೇನು? ಇತ್ಯಾದಿಗಳನ್ನು ಡಾ. ಜಿ. ಬಿ. ಹರೀಶ ಈ ಕೃತಿಯಲ್ಲಿ ವಿವರಿಸಿದ್ದಾರೆ. ತಂತ್ರಗಳ ಒಳಲೋಕವನ್ನು ಅರಿಯಲು ಈ ಕೃತಿ ಸಹಕಾರಿ.

ವೇದ-ತಂತ್ರ-ಸಂಸ್ಕೃತಿ

ವೇದ-ತಂತ್ರ-ಸಂಸ್ಕೃತಿ

ಮುದ್ರಣ-2007

ಪುಟ: 150, ಬೆಲೆ: 90 ರೂ.

ಪ್ರಕಾಶಕರು: ಸೃಷ್ಟಿ ಪಬ್ಲಿಕೇಶನ್ಸ್

ಹೆಸರೇ ಹೇಳುವಂತೆ ವೇದ, ತಂತ್ರ ಮತ್ತು ಸಂಸ್ಕೃತಿಗಳ ಬೆಳಕನ್ನು ಓದುಗರಿಗೆ ತಲುಪಿಸುವ ಪ್ರಯತ್ನವಾಗಿ ಹೊರಬಂದ ಕೃತಿ ಇದು. ಯೋಗಿ ಅರವಿಂದರು ಭಾರತೀಯ ಸಂಸ್ಕೃತಿ ಕುರಿತು ನಡೆಸಿದ ಸಂವಾದ, ಚಿಂತನೆಗಳ ನೆಲೆಗಟ್ಟಿನ ಮೇಲೆ ಇಲ್ಲಿನ ವಿಚಾರಗಳು ರುಪುಗೊಂಡಿವೆ. ಅರವಿಂದರ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ಸಶಕ್ತವಾಗಿ ಕೃತಿಯಲ್ಲಿ ಮಂಡಿಸಲಾಗಿದೆ. ಭಾರತೀಯ ನಾಗರಿಕತೆ, ಸಂಸ್ಕೃತಿ, ಕುಲಧರ್ಮ, ಅಧ್ಯಾತ್ಮ, ಸತ್ಯ, ಆತ್ಮಶೋಧ ಮೊದಲಾದ ವಿಚಾರಗಳನ್ನು ವಿವಿಧ ಅಧ್ಯಾಯಗಳ ಮೂಲಕ ಈ ಕೃತಿಯಲ್ಲಿ ವಿವರಿಸಲಾಗಿದೆ.

ಬೌದ್ಧ ಧರ್ಮ

ಪ್ರಥಮ ಮುದ್ರಣ- 2016, ಮೂರನೇ ಮುದ್ರಣ- 2021

ಪುಟ: 204, ಬೆಲೆ: 200 ರೂ.

ಪ್ರಕಾಶಕರು: ಸಾಹಿತ್ಯ ಲೋಕ ಪ್ರಕಾಶನ

ಬೌದ್ಧ ಧರ್ಮ ಜಗತ್ತಿನ ಪ್ರಮುಖ ಧರ್ಮಗಳಲ್ಲೊಂದು. ಈ ಹಿಂದೆ ಚೀನಾ, ಟಿಬೆಟ್‌ನಲ್ಲಿ ಮುಖ್ಯ ಧರ್ಮವಾಗಿತ್ತು. ಆದರೆ, ಅಲ್ಲಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಪರಿಸ್ಥಿತಿ ಬುಡಮೇಲಾಯಿತು. ಬೌದ್ಧ ಧರ್ಮ ಅಲ್ಲಿ ಇಳಿಮುಖವಾಯಿತು. ಈಗಲೂ ಜಪಾನ್, ವಿಯೆಟ್ನಾಮ್, ಕಾಂಬೋಡಿಯಾ, ಶ್ರೀಲಂಕಾ, ಮಯನ್ಮಾರ್‌ಗಳಲ್ಲಿ ಅದಕ್ಕೆ ಹಿರಿಯ ಸ್ಥಾನವಿದೆ. ಭಾರತದಲ್ಲಿ ಬೌದ್ಧ ಧರ್ಮದ ಉಗಮ, ವಿಕಾಸ ಕುರಿತು ಹಿಂದಿನ ತಲೆಮಾರಿನ ವಿದ್ವಾಂಸರ ಪರಿಶ್ರಮದ ಸಂಗ್ರಹ ಮತ್ತು ಅತ್ಯಂತ ಸಂಕ್ಷಿಪ್ತವಾದ ಅವಲೋಕನವನ್ನು ಲೇಖಕ ಡಾ. ಜಿ. ಬಿ. ಹರೀಶ್ ಅವರು ‘ಬೌದ್ಧ ಧರ್ಮ’ ಕೃತಿಯಲ್ಲಿ ಮಾಡಿದ್ದಾರೆ.

ಬೆಳಕಿನಾಟ

ಮುದ್ರಣ- 2005, 2016

ಪುಟ: 152, ಬೆಲೆ: 150 ರೂ.

ಪ್ರಕಾಶಕರು: ಸಾಹಿತ್ಯ ಪ್ರಕಾಶನ

ವೇದ, ಉಪನಿಷತ್ತು. ಯೋಗ, ವಚನಗಳ ಭಾರತೀಯ ಸಂಸ್ಕೃತಿಯ ಹಲವು ವಿಚಾರಧಾರೆಗಳಿಂದ ಕೂಡಿರುವ ಆಧ್ಯಾತ್ಮಿಕ ಸಾಹಿತ್ಯದ ಮಹತ್ವವನ್ನು “ಬೆಳಕಿನಾಟ” ಕೃತಿ ಪ್ರತಿಪಾದಿಸುತ್ತದೆ. ಯಾವುದೇ ಸಂಸ್ಕೃತಿಯಿಂದ ಮೂಡಿರುವ ಸಾಹಿತ್ಯವನ್ನು ಅದೇ ಸಂಸ್ಕೃತಿಯಿಂದಲೇ ಬೆಲೆಗಟ್ಟಬೇಕೆಂಬುದೇ ಈ ಕೃತಿಯ ನಿಲುವಾಗಿದೆ.

ಶ್ರೀಮಾತೆ

ಪ್ರಥಮ ಮುದ್ರಣ- 2003, ಪುಟ: 120, ಬೆಲೆ: 45 ರೂ.

ಪ್ರಕಾಶಕರು: ಶ್ರೀ ಅರಬಿಂದೊ ಕಪಾಲಿಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್

ಪರಿಷ್ಕೃತ ಮುದ್ರಣ- 2008, ಪುಟ: 136, ಬೆಲೆ: 130 ರೂ.

ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಶನ್ಸ್

ಜಗತ್ತು ಕಂಡ ಶ್ರೇಷ್ಠ ಯೋಗಿ ಮಹರ್ಷಿ ಆರವಿಂದರ ಜೊತೆ ದೀರ್ಘಕಾಲ ಅನುಸಂಧಾನ ನಡೆಸಿದವರು ಶ್ರೀಮಾತೆ. ವಿದೇಶಿ ನೆಲದಲ್ಲಿ ಹುಟ್ಟಿ, ಭಾರತೀಯ ತತ್ವಜಿಜ್ಞಾಸೆಯನ್ನು ಬದುಕಾಗಿಸಿಕೊಂಡು, ಪ್ರಪಂಚಕ್ಕೆ ಅಧ್ಯಾತ್ಮದ ಬೆಳಕು ಕೊಟ್ಟವರು ದಿ ಮದರ್. ಅವರ ಬದುಕು ಮತ್ತು ಅಂತರಂಗವನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನವಾಗಿ ಹೊರಬಂದ ಪುಸ್ತಕವೇ ಶ್ರೀಮಾತೆ. ಇದರಲ್ಲಿ ಮಿರ ಮಾತೆಯಾಗಿ ಬದಲಾದ ಪರಿಯನ್ನು ಸೊಗಸಾಗಿ ಚಿತ್ರಿಸಲಾಗಿದೆ. ಶ್ರೀಮಾತೆ ಮತ್ತು ಶಿಕ್ಷಣ, ಶ್ರೀಮಾತೆ ಮತ್ತು ಭಾರತ, ಶ್ರೀಮಾತೆಯ ಸಾಧನೆ, ಮಹಾಸಮಾಧಿ ಮೊದಲಾದವನ್ನು ಲೇಖಕರು ವಿವರಿಸಿದ್ದಾರೆ. ಇದು ಒಂದು ರೀತಿಯಲ್ಲಿ ಶ್ರೀಮಾತೆಯ ಜೀವನ ಚರಿತ್ರೆಯೂ ಹೌದು, ಅವರ ಸಾಧನಾಪಥದ ದಿವ್ಯದರ್ಶನವೂ ಹೌದು.

ಟಿ.ವಿ. ಕಪಾಲಿಶಾಸ್ತ್ರಿ

ಪ್ರಥಮ ಮುದ್ರಣ-2012

ಪುಟ: 128, ಬೆಲೆ: 100 ರೂ.

ಪ್ರಕಾಶಕರು: ನಿರಂತರ ಪ್ರಕಾಶನ

“ಟಿ.ವಿ. ಕಪಾಲಿಶಾಸ್ತ್ರಿ” ಈ ಗ್ರಂಥದ ಮೂಲಕ ಕಪಾಲಿಶಾಸ್ತ್ರಿಗಳ ವ್ಯಕ್ತಿತ್ವದ ಮೇಲೆ ಹೊಸಬಗೆಯ ಬೆಳಕನ್ನು ಜಿ.ಬಿ.ಹರೀಶ್ ಅವರು ಚೆಲ್ಲಿದ್ದಾರೆ. ಅವರ ಬರಹಗಳ ಹಿಂದಿರುವ ತಾತ್ತ್ವಿಕ ರಹಸ್ಯವನ್ನು ಬಯಲುಗೊಳಿಸಿದ್ದಾರೆ. ಅವರ ಇಂಗ್ಲಿಷ್ ಮತ್ತು ಸಂಸ್ಕೃತ ಗ್ರಂಥಗಳ ಪರಿಚಯವನ್ನೂ ಮಾಡಿದ್ದಾರೆ.  ರಮಣ ಮಹರ್ಷಿಗಳ ಮೌನಕ್ಕೆ ಮಾತಿನ ರೂಪವನ್ನು ತೊಡಿಸಿ ವಿವರಿಸಿದ ಸಂಗತಿಗಳು ಗ್ರಂಥದ ಕೆಲವು ಅಧ್ಯಾಯಗಳಲ್ಲಿ ಚೆಲ್ಲಿಹೋಗಿವೆ. ಶ್ರೀ ಟಿ.ವಿ. ಕಪಾಲಿಶಾಸ್ತ್ರಿಗಳು ಗ್ರಂಥಸ್ಥ ಬರಹಗಳನ್ನು ಸ್ವಾನುಭವದ ವೈಚಾರಿಕ ಚಿಂತನೆಯ ಮೇಲೆ ಒರೆಹಚ್ಚಿ ಪರಿಶೀಲನೆಯನ್ನು ಜಿ.ಬಿ. ಹರೀಶ್ ಅವರು ಬೇರೆ ಬೇರೆ ಅಧ್ಯಾಯಗಳಲ್ಲಿ ಮಾಡಿದ್ದಾರೆ.  ಈ ಗ್ರಂಥವು ಪರಿಪೂರ್ಣ ವಿದ್ವಾಂಸನೊಬ್ಬನ ಜೀವನಗಾಥೆ ಮತ್ತು ಸಾಹಿತ್ಯದ ಅನನ್ಯ ಮುಖಗಳನ್ನು ವಿವರಿಸುತ್ತದೆ.

ಪ್ರೊ|| ಸಾ.ಕೃ.ರಾಮಚಂದ್ರರಾಯರು: ಬೆಳಕಿನ  ಹೊಳೆ

ಪುಟ: 108, ಬೆಲೆ: 120 ರೂ.

ಪ್ರಕಾಶಕರು: ಸಮೃದ್ಧ ಸಾಹಿತ್ಯ

ಪ್ರೊ. ಎಸ್.ಕೆ. ರಾಮಚಂದ್ರರಾಯರು

ಪ್ರಕಾಶಕರು: ಉದಯಭಾನು ಉನ್ನತ ಅಧ್ಯಯನ ಕೇಂದ್ರ

ಪ್ರೊ.ಸಾ.ಕೃ. ರಾಮಚಂದ್ರ ರಾಯರ ಜೀವನದ ಬಗ್ಗೆ ಕನ್ನಡಿಗರಿಗೆ ಅಷ್ಟೊಂದು ಮಾಹಿತಿ ಇರಲಾರದು. ಅವರ ಸಾರ್ಥಕ ಜೀವನ, ಕೈಂಕರ್ಯಗಳ ಬಗ್ಗೆ ‘ಬೆಳಕಿನ ಹೊಳೆ’ ಪುಸ್ತಕದಲ್ಲಿ ಜಿ.ಬಿ ಹರೀಶ್ ಅವರು ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ. ರಾಯರು ನಿಜವಾಗಿಯೂ He was a Phenomena ಎನ್ನುವುದು ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಪ್ರಸ್ತುತ ಪುಸ್ತಕದಲ್ಲಿ 8 ವಿಭಾಗಗಳಿದ್ದು,  ರಾಮಚಂದ್ರರಾಯರ ಪರಿಚಯ, ವೃತ್ತಿ ಜೀವನ, ಅವರೊಂದಿಗಿನ ಪ್ರಸಂಗಗಳು, ಅವರು ಬರೆದ ಪುಸ್ತಕಗಳು, ಶಿಲ್ಪಕಲೆ ಸೇರಿದಂತೆ ಕೊನೆಯಲ್ಲಿ ಅನುಬಂಧವೂ ಇದೆ. ಪುಸ್ತಕದ ನಡುನಡುವೆ ಸುನೀಲ್ ಮಿಶ್ರಾ ಅವರು ಬರೆದ ಸುಂದರ ರೇಖಾಚಿತ್ರಗಳಿವೆ. ರಾಮಚಂದ್ರರಾಯರು ಬರೆದ ಟಿಬೆಟ್ಟಿನ ಯೋಗಿ ಮಿಲರೇಪ (1958- ಮೊದಲ ಜೀವನ ಚರಿತ್ರೆ), ವಾಲ್ಮೀಕಿಯ ಪ್ರತಿಭೆ (1966-2008-ಮಹಾಕಾವ್ಯ), ವರ್ಧಮಾನ ಮಹಾವೀರ (1966), ತ್ಯಾಗರಾಜರು, ಪುರಂದರದಾಸರು ಇತ್ಯಾದಿ ಪ್ರಮುಖ ಪುಸ್ತಕಗಳ ಕುರಿತು ವಿವರಣೆ ನೀಡಿದ್ದಾರೆ. ಇನ್ನೂ “ಪ್ರೊ. ಎಸ್.ಕೆ. ರಾಮಚಂದ್ರರಾಯರು” ಎಂಬ ಕೃತಿಯನ್ನು ಉದಯಭಾನು ಉನ್ನತ ಅಧ್ಯಯನ ಕೇಂದ್ರದಿಂದ ಪ್ರಕಟಿಸಿದ್ದು, ಇದರಲ್ಲಿ ಅವರ ಜೀವನ ಚಿತ್ರಣವನ್ನು ಕಾಣಬಹುದಾಗಿದೆ.

ಸ್ವಾಮಿ ವಿವೇಕಾನಂದ

ಪ್ರಥಮ ಮುದ್ರಣ- 2013, ಪುಟ: 152, ಬೆಲೆ: 120 ರೂ.

ಪ್ರಕಾಶಕರು: ಅಂಕಿತ ಪುಸ್ತಕ

ಪರಿಷ್ಕೃತ ಮುದ್ರಣ- 2024, ಪುಟ: 152, ಬೆಲೆ: 180  ರೂ.

ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಷನ್ಸ್ ಪ್ರೈ.ಲಿ

ಸ್ವಾಮಿ ವಿವೇಕಾನಂದರ ಬಾಳಿನ ಪುಟಪುಟಗಳನ್ನೂ ಅಧ್ಯಯನ ಮಾಡಿ, ಅವರು ಪ್ರತಿಪಾದಿಸಿದ ತತ್ವಾದರ್ಶಗಳನ್ನು, ತದನುರೂಪವಾಗಿ ಬೆಳಗಿದ ಅವರ ವಾಕ್ಪಟುತ್ವ, ವರ್ಚಸ್ವೀ ನಿಲುವು, ಪ್ರತ್ಯುತ್ಪನ್ನಮತಿ. ಧೀಮಂತಿಕೆ, ಆತ್ಮಸ್ಥೆರ್ಯ ಇವುಗಳನ್ನು ತಾದಾತ್ಮ್ಯದಿಂದ ವರ್ಣಿಸಲು ಹಲವಾರು ವಿದ್ವಾಂಸರು ಸಫಲರಾಗಿದ್ದಾರೆ. ಆ ಮಹಾನ್ ಚೇತನದ ಬಗ್ಗೆ ‘ಹಿಂದೂ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ’ ಕೃತಿಯಲ್ಲಿ ಸ್ವಾಮೀಜಿ ತಮ್ಮ ಬದುಕಿನಲ್ಲಿ ಆಚರಿಸಿ ತೋರಿದ ಸಕಲ ಚಿಂತನೆಗಳ ಸಾರವೂ ಹಿಂದುತ್ವದ ಹೂರಣದೊಂದಿಗೇ ಅಡಕವಾಗಿತ್ತು. ಆದರೆ, ಅದನ್ನು ಬಿಡಿಬಿಡಿಯಾಗಿ ಅರ್ಥೈಸಿಕೊಂಡು ವಿವಿಧ ಧೋರಣೆಗಳನ್ನು ಮುಂದೊಡ್ಡಿದ ಧುರೀಣರಿಗೂ ಸುಲಭವಾಗಿ ನಿರ್ವಚನವಾಗುವಂತೆ ಜಿ.ಬಿ.ಹರೀಶರು  ಬರೆದಿದ್ದಾರೆ. ‘ಸ್ವಾಮಿ ವಿವೇಕಾನಂದ ಜೀವನ-ಸಾಧನೆ’ ಎಂಬ ಹೆಸರಿನಲ್ಲಿ 2013ರಲ್ಲಿ ಪ್ರಕಟವಾಗಿದ್ದು, ಪರಿಷ್ಕೃತ ಕೃತಿಯನ್ನು ‘ಹಿಂದೂ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ’ ಹೆಸರಲ್ಲಿ ಮುದ್ರಿಸಲಾಗಿದೆ.

ಆನಂದ ಕುಮಾರಸ್ವಾಮಿ

ಪ್ರಥಮ ಮುದ್ರಣ- 2014

ಪುಟ: 200, ಬೆಲೆ: 150 ರೂ.

ಪ್ರಕಾಶಕರು: ಅಂಕಿತ ಪುಸ್ತಕ

ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಆನಂದ ಕುಮಾರಸ್ವಾಮಿ. ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದ್ದ ಅವರು ಋಷಿಸದೃಶ ಕಲಾ ತಪಸ್ವಿಯಾಗಿ ಬದುಕಿದರು. ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ಓದಿ ಮುಗಿಸಲಾಗದಷ್ಟು ಕೃತಿಗಳನ್ನು, ಲೇಖನಗಳನ್ನು ಬರೆದರು. ಸರಸ್ವತಿ ಪ್ರಪಂಚದ ಆಳ ಅಗಲಗಳನ್ನು ಓದುಗರ ಮುಂದೆ ತಮ್ಮದೇ ಪರಿಭಾಷೆಯಲ್ಲಿ ತೆರೆದಿಟ್ಟರು. ಅವರ ಚಿಂತನೆಗಳ ಕುರಿತು ಡಾ. ಜಿ. ಬಿ. ಹರೀಶ್ ಈ ಮಹತ್ವದ ಕೃತಿಯನ್ನು ರಚಿಸಿದ್ದಾರೆ.  ಈ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದ್ದಾರೆ.

ಕಲಾಯೋಗಿ ಆನಂದ ಕುಮಾರಸ್ವಾಮಿ

ಬೆಲೆ: 250 ರೂ.

ಪ್ರಕಾಶಕರು: ವಂದೇ ಮಾತರಂ ಪ್ರಕಾಶನ

ಕಲಾಯೋಗಿ ಆನಂದ ಕುಮಾರಸ್ವಾಮಿ” ಈ ಪುಸ್ತಕದಲ್ಲಿ ಕುಮಾರಸ್ವಾಮಿಯವರ ಮುಖ್ಯ ಚಿಂತನೆಗಳ ತಾತ್ಪರ್ಯವನ್ನು ಕೊಟ್ಟಿದ್ದಾರೆ. ಕುಮಾರಸ್ವಾಮಿಯವರಿಗೆ ಸಂಬಂಧಿಸಿದ ಮುಖ್ಯವಾದ ಗ್ರಂಥಗಳಲ್ಲದೆ ಇಪ್ಪತ್ತನೆಯ ಶತಮಾನದ ಪೂರ್ವ ಪಶ್ಚಿಮಗಳ ಪ್ರಮುಖ ಚಿಂತಕರು ಕುಮಾರಸ್ವಾಮಿಯವರನ್ನು ಶ್ಲಾಘಿಸಿದ ಹೇಳಿಕೆಗಳನ್ನು ಹರೀಶ ಅವರು ಉಲ್ಲೇಖಿಸಿದ್ದಾರೆ. ಈ ವಿಷಯದಲ್ಲಿ ಇಷ್ಟು ಸಮಗ್ರವಾದ ಪರಿಚಯಾತ್ಮಕ ಪುಸ್ತಕವು ಕನ್ನಡದಲ್ಲಿ ಬೇರೊಂದು ಇಲ್ಲ. ಕುಮಾರಸ್ವಾಮಿ ಯವರ ಜೀವನ ಮತ್ತು ಚಿಂತನೆಗಳನ್ನು ಕುರಿತು ಚರ್ಚಾಕೂಟಗಳನ್ನು ನಡೆಸಲು ಈ ಕೃತಿ ಪೂರಕವಾಗಿದ್ದು, ಇದನ್ನು ಇಂಗ್ಲಿಷ್ ಭಾಷೆಗೂ ಅನುವಾದ ಮಾಡಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ  2022ರಲ್ಲಿ ಪ್ರಕಟಿಸಲಾಗಿದೆ.

ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ

ಮುದ್ರಣ- 2018

ಪುಟ: 136, ಬೆಲೆ: 136 ರೂ.

ಪ್ರಕಾಶಕರು: ಸಾಹಿತ್ಯ ಪ್ರಕಾಶನ

ಕನ್ನಡ ಸಾಹಿತ್ಯ ಲೋಕದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಕಾದಂಬರಿಕಾರ, ವ್ಯಂಗ್ಯಚಿತ್ರಕಾರರಾದ ಬಾಬು ಕೃಷ್ಣಮೂರ್ತಿ ಅವರಿಗೆ ವಿಶೇಷ ಸ್ಥಾನಮಾನವಿದೆ. ಭಾರತದ ಕ್ರಾಂತಿಕಾರಿಗಳ ಜೀವನಗಳನ್ನು ಆಧರಿಸಿದ ಕೃತಿಗಳನ್ನು ರಚಿಸುವ ಮೂಲಕ ಎಲ್ಲೆಡೆ ಕನ್ನಡದ ಕಂಪನ್ನು ಹರಡಿದ್ದಾರೆ. ಇವರ ಜೀವನ ಮತ್ತು ಸಾಹಿತ್ಯ ಕುರಿತು ಡಾ.ಜಿ.ಬಿ. ಹರೀಶ ಅವರು “ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ” ಎಂಬ ಕೃತಿಯನ್ನು ಬರೆದಿದ್ದಾರೆ. ಇದರಲ್ಲಿ ಬಾಬು ಕೃಷ್ಣಮೂರ್ತಿಯವರ ಕಾದಂಬರಿಗಳಾದ ಅಜೇಯ, ಅದಮ್ಯ, ರುಧಿರಾಭಿಷೇಕ, ಕ್ರಾಂತಿಪರ್ವ ಮತ್ತು ಮಹಾಸಾಧಕ ಇವುಗಳ ವಿಮರ್ಶೆ ಇದೆ.  ಕೃಷ್ಣಮೂರ್ತಿ ಅವರು ಅನುವಾದಿಸಿರುವ ಯುಗದ್ರಷ್ಟ ಭಗತ್‌ ಸಿಂಗ್, ಯಾವುದು ಚರಿತ್ರೆ, ಹೋರಾಟದ ಹೀರೋಗಳು ಎರಡು ಸಂಪುಟಗಳ ವಿಶ್ಲೇಷಣೆಯನ್ನು ಓದಬಹುದಾಗಿದೆ.

ಬೌದ್ಧಿಕ ಕ್ಷತ್ರಿಯರು

ಪ್ರಥಮ ಮುದ್ರಣ- 2022

ಪುಟ: 102, ಬೆಲೆ: 120 ರೂ.

ಪ್ರಕಾಶಕರು: ಸಮೃದ್ಧ ಸಾಹಿತ್ಯ

ಭಾರತ ಕ್ಷಾತ್ರ ಪರಂಪರೆಯ ಬಿಡು ಎಂಬ ಮಾತಿದೆ. ಇದರ ಜೊತೆಗೆ ವೈಚಾರಿಕಗಳ ಭೂಮಿಯು ಸಹ. ಇಲ್ಲಿ ವಾದ-ಪ್ರತಿವಾದಗಳಿಗೆ ಅವಕಾಶವಿದೆ. ಇನ್ನೂ ಅನೇಕ ಪಂಗಡ ಪರಂಪರೆಗಳು ವಾದಗಳಿಂದ ಆರಂಭವಾಗಿದೆ. ಹಾಗಾಗಿ ಈ ದೇಶ ಬೌದ್ಧಿಕ ಕ್ಷತ್ರಿಯರ ಭೂಮಿ ಎನ್ನಬಹುದು. ಈ ನಿಟ್ಟಿನಲ್ಲಿ ಆಧುನಿಕ ಬೌದ್ಧಿಕ ಕ್ಷತ್ರಿಯರನ್ನು ನಾವು ಮರೆತಿದ್ದೇವೆ ಅಥವಾ ಆ ಮಹನೀಯರನ್ನು ಮುಚ್ಚಿಡಲಾಗಿತ್ತು. ಇಂತಹ ಮಹಾನುಭಾವರ ಪರಿಚಯ ಮಾಡುವ ಕೃತಿಯೇ “ಬೌದ್ಧಿಕ ಕ್ಷತ್ರಿಯರು”. ಇದರಲ್ಲಿ ಮಹರ್ಷಿ ದಯಾನಂದ, ಡಾ.ಕೇಶವ ಬಲಿರಾಂ ಹೆಡಗೇವಾ‌ರ್, ಆನಂದಕುಮಾರಸ್ವಾಮಿ, ಧರಂಪಾಲ್, ಸೀತಾರಾಂ ಗೋಯಲ್, ವೀರ ಸಾವರ್ಕರ್, ರಾಮಸ್ವರೂಪ್ ಕುರಿತು ಹರೀಶ್ ಅವರು ಚಿಂತನ-ಮಂಥನ ಮಾಡಿದ್ದಾರೆ.

ವಕ್ರರೇಖೆ

ಮುದ್ರಣ- 2009

ಪುಟ: 464, ಬೆಲೆ: 300 ರೂ.

ಪ್ರಕಾಶಕರು: ದೇಸಿ ಪ್ರಕಾಶನ

ದೇವಚಂದ್ರನ ರಾಜಾವಳಿ ಕಥಾಸಾರದ ಸಾಹಿತ್ಯ– ಸಾಂಸ್ಕೃತಿಕ – ಐತಿಹಾಸಿಕ ಅಧ್ಯಯನ’ದ ಸಂಶೋಧನೆಯ ಗ್ರಂಥವೇ ’ ವಕ್ರರೇಖೆ’.  ರಾಜಾವಳಿ ಕಥಾಸಾರವೆಂದರೆ, ಅದು ಸನಾತನ ಧರ್ಮದ ಉಗಮಸ್ಥಾನ, ಮೊದಲ ಜೈನಸಾಹಿತ್ಯ ಚರಿತ್ರೆಯನ್ನು ತಿಳಿಸುವಂತದ್ದು. ಜೀವಂತ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವ ದೇವಚಂದ್ರನ ನಿಲುವು, ಪ್ರಭುತ್ವಗಳನ್ನು ಪ್ರಸ್ತಾಪಿಸುವಂತದ್ದು. ದೇವಚಂದ್ರ ಕವಿ ಎಂಥವನು?,  ದೇವಚಂದ್ರನ ಬರಹಗಳ ಕಾಲ-ದೇಶ, ದೇವಚಂದ್ರನ ಸ್ಫೂರ್ತಿ ಮತ್ತು ರಾಜಾವಳಿ ಕಥಾಸಾರದ ಸ್ವರೂಪ, ರಾಜಾವಳಿಯ ಬೌದ್ಧಿಕ ವಾತಾವರಣ, ರಾಜಾವಳಿಯ ಕಥಾಸಾರದಲ್ಲಿ ಜೈನ ಇತಿಹಾಸ, ರಾಜಾವಳಿಯ ಕಥಾಸಾರದಲ್ಲಿ ಸಂಸ್ಕೃತಿ, ಸಮಾಜ, ಸಮುದಾಯಗಳು, ರಾಜಾವಳಿ ಕಥಾಸಾರದ ಹಿನ್ನೆಲೆ ಮತ್ತು ಮುನ್ನೋಟ ಇಂತಹ ಮಾಹಿತಿಗಳ ದೀರ್ಘ ಇತಿಹಾಸ, ವಸ್ತು ವಿವರಣೆಗಳನ್ನು ವಿಮರ್ಶಕ, ಲೇಖಕರಾದ ಡಾ. ಜಿ. ಬಿ. ಹರೀಶ್ ಅವರು ಉಲ್ಲೇಖಿಸಿದ್ದಾರೆ.

ವೀರ ಸಾವರ್ಕರ್, ಸರ್ದಾರ್ ಭಗತ್ ಸಿಂಗ್ ಭೇದವು ಏಕೆ?

ಪ್ರಥಮ ಮುದ್ರಣ – 2025

ಪುಟಗಳು: 108, ಬೆಲೆ: 120 ರೂ.

ಪ್ರಕಾಶಕರು: ಸಾವರ್ಕರ್ ಸಾಹಿತ್ಯ ಸಂಘ (ರಿ)

ಸರ್ದಾರ್ ಭಗತ್ ಸಿಂಗ್ ಮತ್ತು ವೀರ ಸಾವರ್ಕರ್ ಅವರನ್ನು ಹೋಲಿಕೆ ಮಾಡಿ, ಸಾವರ್ಕರ್ ಅವರನ್ನು ನಿಂದಿಸುವ ಬಹುದೊಡ್ಡ ಸಂಚು ಕೆಲ ವರ್ಷಗಳಿಂದ ಆರಂಭವಾಗಿದೆ. ಸಾವರ್ಕರ್ ಅವರು ಅಂಡಮಾನಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುವಾಗ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ಹುಚ್ಚು ಹುಚ್ಚಾಗಿ ವಾದಿಸುವವರು ಇದ್ದಾರೆ. ಭಗತ್ ಸಿಂಗ್ ಧೈರ್ಯವಾಗಿ ನೇಣಿಗೆ ಕೊರಳೊಡ್ಡಿದ ನಾಯಕ, ಆದರೆ ಸಾವರ್ಕರ್ ಹೇಡಿ ಎಂಬ ವಿಚಾರಸರಣಿಯನ್ನು ಮುಂದಿಡಲಾಗುತ್ತಿದೆ. ಈ ಹಿನ್ನೆಯಲ್ಲಿ ಇಬ್ಬರೂ ದೇಶಭಕ್ತ ಕ್ರಾಂತಿಕಾರಿಗಳ ಜೀವನ, ವಿಚಾರ, ಹೋರಾಟ ಇತ್ಯಾದಿಗಳನ್ನು ವಸ್ತುನಿಷ್ಠವಾಗಿ ಓದುಗರ ಮುಂದಿಡುವ ಪ್ರಯತ್ನವೇ ಈ ಕೃತಿ. ಇಬ್ಬರೂ ಮಹಾನ್ ದೇಶಭಕ್ತರ ಜೀವನದ ಜೊತೆಗೆ, ಅವರ ನಡುವೆ ಭೇದ ಕಲ್ಪಿಸುವ ಷಡ್ಯಂತ್ರಕ್ಕೆ ಇದು ತಕ್ಕ ಪ್ರತ್ಯುತ್ತರ ಕೊಟ್ಟಿದೆ.

ಎಲ್ಲರಿಗೂ ಬೇಕಾದ ಅಂಬೇಡ್ಕರ್

ಮುದ್ರಣ 2016

ಪುಟ: 114, ಬೆಲೆ: 150

ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಡಾ.ಬಿ.ಆರ್‌.ಅಂಬೇಡ್ಕರ್ ಅವರು ಇತಿಹಾಸ ತಜ್ಞ, ಸಮಾಜಶಾಸ್ತ್ರ, ಅರ್ಥಶಾಸ್ತ್ರದ ವಿದ್ವಾಂಸ. ಭಾರತದ ಹಿಂದು ಸಮಾಜದ ಅವಿಭಾಜ್ಯ ಅಂಗವಾದ ದಲಿತರ ಬಹುಮುಖೀ ಅಧ್ಯಯನ ಮತ್ತು ಆ ಮೂಲಕ ಅಸ್ಪೃಶ್ಯತೆಯ ವಿರುದ್ಧ ವಿವಿಧ ನೆಲೆಗಳ ಹೋರಾಟ ಮಾಡಿದವರು. ಹೀಗಾಗಿ ಆರ್ಥಿಕತೆ, ರಾಷ್ಟ್ರೀಯತೆ, ಬೌದ್ಧ ಚಿಂತನೆ ಎಲ್ಲವೂ ಅವರಲ್ಲಿ ಅಡಗಿತ್ತು.  ಈಗ ಅನೇಕರು ನೋಡುತ್ತಿರುವಂತೆ ಅಂಬೇಡ್ಕರ್ ಅವರ ಚಿಂತನೆಯನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಡಾ.ಅಂಬೇಡ್ಕರ್ ಅವರು ಹಿಂದು ವೈದಿಕ ಧರ್ಮದಿಂದ ಹೊರಗೆ ಹೋಗಿ ಬೌದ್ಧರಾಗಿದ್ದರೂ ಅವರ ಭಾರತೀಯತ್ವಕ್ಕೆ ಅದೇನು ಹೊರಗಿನ ಸಂಗತಿ ಆಗಿರಲಿಲ್ಲ. ಜಾತಿ, ವರ್ಣಾಶ್ರಮ ಪದ್ಧತಿ ವಿರುದ್ಧ ಮಾತ್ರ ಅವರು ಮಾತನಾಡಿದ್ದಾರೆ; ಬೇರೆ ಏನೂ ಮಾತನಾಡಿಲ್ಲ, ಎಂಬ ಅಪಕ್ವ ಚಿತ್ರಣ ನಮ್ಮ ಮಧ್ಯೆ ಪ್ರಚಲಿತವಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ರಾಷ್ಟ್ರೀಯ ದೃಷ್ಟಿಕೋನವನ್ನು ತರುಣ ಪೀಳಿಗೆಯ ಮುಂದೆ ಇರಿಸುವುದು ಡಾ.ಜಿ.ಬಿ.ಹರೀಶ್‌ ಅವರು ಬರೆದಿರುವ “ಎಲ್ಲರಿಗೂ ಬೇಕಾದ ಅಂಬೇಡ್ಕರ್” ಈ ಪುಸ್ತಕದ ಉದ್ದೇಶವಾಗಿದೆ. ಈ ಕೃತಿ ಮರಾಠಿ ಮತ್ತು ತಮಿಳು ಭಾಷೆಗೆ ಅನುವಾದವಾಗಿ ವಂದೇ ಮಾತರಂ ಪ್ರಕಾಶನದಿಂದ ಬೆಳಕು ಕಂಡಿದೆ.

ಮಹಮ್ಮದ್ ಅಲಿ ಜಿನ್ನಾ

ಲೇಖಕರು: ಪ್ರತಾಪ್ ಸಿಂಹ, ಡಾ. ಜಿ. ಬಿ. ಹರೀಶ

ಪ್ರಥಮ ಮುದ್ರಣ: 2009

ಪುಟ: 200

ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಹಾಗೂ ಲೇಖಕ ಡಾ. ಜಿ. ಬಿ‌. ಹರೀಶ ಜಂಟಿಯಾಗಿ ಬರೆದ  “ಮಹಮ್ಮದ್ ಅಲಿ ಜಿನ್ನಾ” ಪುಸ್ತಕವು ಪಾಕಿಸ್ತಾನದ ಸ್ಥಾಪಕ ಮತ್ತು ಪ್ರಥಮ ಗವರ್ನರ್-ಜನರಲ್ ಮಹಮ್ಮದ್ ಅಲಿ ಜಿನ್ನಾರ ಜೀವನದ ಒಂದು ಸಮಗ್ರ ಚಿತ್ರಣವನ್ನು ಒದಗಿಸುತ್ತದೆ. ಈ ಕೃತಿ ಜಿನ್ನಾರ ರಾಜಕೀಯ ಯಾತ್ರೆಯನ್ನು ಅನಾವರಣಗೊಳಿಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಆರಂಭಿಕ ದಿನಗಳಲ್ಲಿ ಹಿಂದೂ-ಮುಸ್ಲಿಂ ಏಕತೆಯ ಪರವಾಗಿ ಕೆಲಸ ಮಾಡಿದ ಸಮಯದಿಂದ ಹಿಡಿದು ಆಲ್-ಇಂಡಿಯಾ ಮುಸ್ಲಿಂ ಲೀಗ್‌ನ ನಾಯಕನಾಗಿ ಪಾಕಿಸ್ತಾನ ಸ್ಥಾಪನೆಯವರೆಗೆ ಜಿನ್ನಾ ವ್ಯಕ್ತಿತ್ವದಲ್ಲಾದ ಬದಲಾವಣೆಗಳನ್ನು ವಿವರಿಸುತ್ತದೆ.  ಭಾರತ-ಪಾಕಿಸ್ತಾನ ವಿಭಜನೆಯ ಐತಿಹಾಸಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಸಹಾಯ ಮಾಡುತ್ತದೆ. ಅಮೆಜಾನ್‌ನಲ್ಲಿ ಇದು ಲಭ್ಯವಿದೆ.

ಎನ್ನಂತರಂಗದ ಆತುಮ

ಮುದ್ರಣ: 2008

ಪುಟಗಳು: 116, ಬೆಲೆ: 80 ರೂ.

ಪ್ರಕಾಶಕರು: ಕನ್ನಡ ಸಂಘ, ಕ್ರೈಸ್ಟ್ ಯೂನಿವರ್ಸಿಟಿ

ಎನ್ನಂತರಂಗದ ಆತುಮ‘ ಡಾ. ಜಿ. ಬಿ‌. ಹರೀಶ ಅವರ ವಿಮರ್ಶಾ ಕೃತಿ. ಇದರಲ್ಲಿ 16 ಅಧ್ಯಾಯಗಳ ಮೂಲಕ ಬೇರೆ ಬೇರೆ ವಿಚಾರಗಳ ವಿಮರ್ಶೆ ಮಾಡಿದ್ದಾರೆ. ಡಾ. ಜಿ. ಪಿ. ರಾಜರತ್ನಂ, ಪುತಿನ, ಗೋಪಾಲಕೃಷ್ಣ ಅಡಿಗ, ಹಾಸನ ರಾಜಾರಾವ್, ಅಲ್ಲಮಪ್ರಭು ಮೊದಲಾದವರ ಸಾಹಿತ್ಯ ವಿಚಾರವನ್ನು ಇಲ್ಲಿ ಚರ್ಚಿಸಿದ್ದಾರೆ. ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿಗಳು, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯ ಸಂವಾದ, ಕೆ.ಎಸ್. ನರಸಿಂಹಸ್ವಾಮಿಯವರ ರಚನೆ, ಸುಮತೀಂದ್ರ ನಾಡಿಗರ ಸಾಹಿತ್ಯ ಮೊದಲಾದವುಗಳ ಕುರಿತು ಅಪೂರ್ವ ಒಳನೋಟಗಳುಳ್ಳ ಲೇಖನಗಳನ್ನು ಇಲ್ಲಿ ಕಾಣಬಹುದು.

ಮಹಾಕಾಲ

1. ಮಹಾಕಾಲ (ಸೃಷ್ಟಿ- 1945-50)

ಮೊದಲ ಮುದ್ರಣ-2024, ನಾಲ್ಕನೇ ಮುದ್ರಣ- 2025

ಬೆಲೆ: 399 ರೂ., ಪುಟ: 312

2. ಮಹಾಕಾಲ (ಸ್ಥಿತಿ- 1897-1945)

ಮೊದಲ ಮುದ್ರಣ-2025, ಎರಡನೇ ಮುದ್ರಣ- 2025

ಬೆಲೆ: 399 ರೂ., ಪುಟ: 356+4

ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್

‘ಮಹಾಕಾಲ’ ಇದು ಡಾ. ಜಿ. ಬಿ. ಹರೀಶ್ ಅವರ ಮೊದಲನೇ ಕಾದಂಬರಿ. ಮಹಾಕಾಲ ಸ್ಥಿತಿ ಮತ್ತು ಸ್ಥಿತಿ ಎಂಬ ಎರಡು ಕಂತುಗಳಲ್ಲಿ ಮುದ್ರಣವಾಗಿದೆ. ಹಿಂದಿನ ಎರಡು ಭಾಗಗಳಂತೆಯೇ ಮೂರನೇ ಭಾಗವೂ ‘ವಿಕ್ರಮ’ ವಾರಪತ್ರಿಕೆಯಲ್ಲಿ ಸದ್ಯ ಧಾರಾವಾಹಿಯಾಗಿ ಪ್ರಕಟವಾಗುತ್ತಿದೆ.

ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನದ ಸುತ್ತ ನಡೆಯುವ ಕಾದಂಬರಿ. ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು ಸತ್ಯವೇ ಸುಳ್ಳೇ? ಎಂಬ ನಿಗೂಢತೆಯ ಬೆನ್ನು ಹತ್ತುವ ಕಾದಂಬರಿಯು, ಆ ಕಾಲದ ರಾಜಕೀಯ ಷಡ್ಯಂತ್ರ, ಅಂತಾರಾಷ್ಟ್ರೀಯ ಬೆಳವಣಿಗೆಗಳು, ಸ್ವಾತಂತ್ರ್ಯ ಹೋರಾಟದ ನೇತಾರರ ನೈಜ ವ್ಯಕ್ತಿತ್ವ, ನೇತಾಜಿ ಕೈಗೊಂಡ ಹೋರಾಟ ಇತ್ಯಾದಿಗಳನ್ನು ಸಮರ್ಥವಾಗಿ ಚಿತ್ರಿಸುತ್ತದೆ.

ಅನುವಾದ

ಪುನರುಜ್ಜೀವನದತ್ತ ಹಿಂದೂ ಧರ್ಮ

ಮೂಲ ಲೇಖಕರು: ಶ್ರೀ ಅರೋಬಿಂದೊ

ಅನುವಾದ: ಜಿ. ಬಿ. ಹರೀಶ್

ಮುದ್ರಣ: 2002

ಪುಟ 80, ಬೆಲೆ 35

ಪ್ರಕಾಶಕರು: ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ಇನ್ಸಿಟ್ಯೂಟ್ ಆಫ್ ವೇದಿಕ್ ಕಲ್ಟರ್

ಹಿಂದೂ ಧರ್ಮದ ಮುಖ್ಯ ಶಾಸ್ತ್ರ ಗ್ರಂಥಗಳ ಸಂಕ್ಷಿಪ್ತ ವಿಚಾರ, ಅದರ ಸಮನ್ವಯ ಸ್ವಭಾವ, ವೇದಗಳ ಜ್ಞಾನದ ತಿರುಳನ್ನು ಸಂರಕ್ಷಿಸುತ್ತ ಹೊಸ ಜ್ಞಾನವನ್ನು ಹುಟ್ಟುಹಾಕುವ ಹಾಗೂ ಒಪ್ಪಿಕೊಳ್ಳುವ ಅದರ ಸಾಮರ್ಥ್ಯ ಹಾಗೂ ಆಧುನಿಕ ಸಂದರ್ಭಗಳಲ್ಲಿ ಲೌಕಿಕ ಎಂದು ಪರಿಗಣಿಸಲಾಗುವ ವಿವಿಧ ಬಗೆಯ ಜ್ಞಾನಗಳಿಗೆ ಒಂದು ಅಡಿಪಾಯ ನೀಡಬಲ್ಲ ಅದರ ಸಾಮರ್ಥ್ಯ, ಇತರ ಮತಗಳೊಂದಿಗಿನ ಅದರ ಸಂಬಂಧ ಮತ್ತು ಇತರ ವಿಷಯಗಳು ” ಪುನರುಜ್ಜೀವನದತ್ತ ಹಿಂದೂ ಧರ್ಮ” ಗ್ರಂಥದಲ್ಲಿವೆ.

ವೀರ ಸಾವರ್ಕರ್

ಮೂಲ ಲೇಖಕರು: ಧನಂಜಯ ಕೀರ್

ಅನುವಾದ: ಡಾ. ಜಿ. ಬಿ. ಹರೀಶ

ಪ್ರಥಮ ಮುದ್ರಣ- 2022, ಪುಟ: 16+728, ಬೆಲೆ: 400 ರೂ.

ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಮರು ಮುದ್ರಣ- 2024, ಪುಟ: 788, ಬೆಲೆ: 750  ರೂ.

ಪ್ರಕಾಶಕರು: ಸಮೃದ್ಧ ಸಾಹಿತ್ಯ

ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ (28.05.1883- 27.02.1966) ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಪ್ರಸಿದ್ಧರು. ಸಾವರ್ಕರ್ ಅವರ ಜೀವನವೇ ಒಂದು ಮಹಾಕಾವ್ಯದಂತೆ. ಸಾವರ್ಕರ್ ಅವರ ಜೀವನ-ಸಾಧನೆ ಕುರಿತು ಅನೇಕ ಗ್ರಂಥಗಳು ಹೊರಬಂದಿದ್ದು ಅವುಗಳ ಪೈಕಿ ಧನಂಜಯ ಕೀರ್ (1913-1983) ಅವರು ಇಂಗ್ಲಿಷಿನಲ್ಲಿ ರಚಿಸಿರುವ ವೀರ ಸಾವರ್ಕರ್ ಗ್ರಂಥಕ್ಕೆ ಎತ್ತರದ ಸ್ಥಾನವಿದೆ. ಸ್ವತಃ ವೀರ ಸಾವರ್ಕರ್ ಅವರನ್ನು ಅತ್ಯಂತ ಹತ್ತಿರದಿಂದ ಕಂಡು, ಅವರ ಪತ್ರ, ಫೈಲುಗಳನ್ನು ನೋಡುವ ಅವಕಾಶ ಕೀರ್ ಅವರಿಗೆ ಇದ್ದದ್ದು.

ಈ ಗ್ರಂಥದಲ್ಲಿ ಕೆಲವು ಕಡೆಗಳಲ್ಲಿ ನನಗೆ ಸಾವರ್ಕರ್ ಈ ರೀತಿ ಹೇಳಿದರು ಎಂಬುದಾಗಿ ಧನಂಜಯ ಕೀರ್ ದಾಖಲು  ಮಾಡಿದ್ದಾರೆ. ಆದ್ದರಿಂದ ಇದಕ್ಕೆ ಜೀವನ ಚರಿತೆಗೆ ಬೇಕಾದ ದೃಷ್ಟಿಕೋನ ಮತ್ತು ಪ್ರಾಮಾಣಿಕ ಆಕರಗಳು ದೊರೆತಿವೆ. ಈ ದೃಷ್ಟಿಯಿಂದ ಧನಂಜಯ್ ಕೀರ್ ಅವರ ವೀರ ಸಾವರ್ಕರ್ ಕೃತಿಯನ್ನು ಡಾ. ಜಿ. ಬಿ. ಹರೀಶ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಹಿಂದುತ್ವ

ಮೂಲ ಲೇಖಕರು: ಸಾವರ್ಕರ್

ಅನುವಾದ: ಡಾ. ಜಿ. ಬಿ. ಹರೀಶ

ಮುದ್ರಣ- 2018, ಪುಟ: 116, ಬೆಲೆ: 110 ರೂ.

ಪ್ರಕಾಶಕರು: ಸಮೃದ್ಧ ಸಾಹಿತ್ಯ

ವೀರ ಸಾವರ್ಕರ್ ಅವರು “ಆ ಸಿಂಧು ಸಿಂಧು ಪರ್ಯಂತಾಮ್” ಎಂಬ ಶ್ಲೋಕ ರಚಿಸಿದರು.  ಮುಂದಿನ ಪೀಳಿಗೆ ಇದನ್ನು ಯಾವುದೋ ಉಪನಿಷತ್ತು, ಪುರಾಣ, ಧರ್ಮಶಾಸ್ತ್ರದಲ್ಲಿ ಬಂದಿರುವ ವಾಣಿ ಎಂಬಂತೆ ಗೌರವದಿಂದ ಸ್ವೀಕರಿಸಿತು. ಹಿಂದುಗಳು ವೇದಭೂಮಿಯಾದ ಸಿಂಧುಸ್ಥಾನದಿಂದ, ಸಿಂಧು ನದಿಯಿಂದ, ಸಿಂಧು ಸಮುದ್ರಗಳಿಂದ ತಮ್ಮ ಹೆಸರನ್ನು ಪಡೆದಿದ್ದಾರೆ. ಋಗ್ವೇದ ಎಷ್ಟು ಪ್ರಾಚೀನವೋ ಹಿಂದೂ ಹೆಸರು, ಹಿಂದೂ ಜನಾಂಗ, ಹಿಂದೂ ಧರ್ಮ, ಅಷ್ಟೇ ಪ್ರಾಚೀನ ಎಂಬುದನ್ನು ‘ಹಿಂದುತ್ವ’ ಕೃತಿಯಲ್ಲಿ ಸಾವರ್ಕರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಿಂದುತ್ವ ಅತ್ಯಂತ ವಿಶಾಲ ಪರಿಕಲ್ಪನೆ.  ಹಿಂದೂ ಧರ್ಮ, ಸನಾತನ ಧರ್ಮ ಅದರ ಒಂದು ಭಾಗ ಮಾತ್ರ ಎಂಬುದು ಸಾವರ್ಕರ್ ಅವರ ಮುಖ್ಯ ಪ್ರತಿಪಾದನೆ.

ಸಾವಿನ ಸೊಬಗು ಹಾಗೂ ಪುನರ್ಜನ್ಮದ ಮರ್ಮ

ಮೂಲ ಲೇಖಕರು: ಎಂ.ಪಿ. ಪಂಡಿತ್

ಅನುವಾದ: ಡಾ. ಜಿ. ಬಿ. ಹರೀಶ, ಪಾಂಡುರಂಗ ಶಾಸ್ತ್ರಿ

ಮುದ್ರಣ- 2002

ಪುಟ: 80, ಬೆಲೆ: 25 ರೂ.

ಪ್ರಕಾಶಕರು: ಶ್ರೀ ಅರಬಿಂದೊ ಕಪಾಲಿಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್

ಮಹರ್ಷಿ ಅರವಿಂದರು ಈ ನಾಡು ಕಂಡ ಮಹಾಯೋಗಿ, ಅನುಭಾವಿ, ಸಾಧಕ. ಅವರ ಬೋಧನೆ ಮತ್ತು ವ್ಯಾಪಕ ಅಧ್ಯಯನಗಳನ್ನು ಆಧರಿಸಿ, ಮರಣದ ಕುರಿತು ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಎಂ. ಪಿ. ಪಂಡಿತ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಮರಣ ಎಂದರೆ ಕೆಲವರಿಗೆ ಭಯ, ಇನ್ನು ಕೆಲವರಿಗೆ ನಿರೀಕ್ಷೆ. ಪುನರ್ಜನ್ಮ ಎಂಬುದು ಪ್ರಶ್ನಾರ್ಥಕ ಚಿಹ್ನೆಯೊಳಗಿದೆ. ಈ ವಿಚಾರಗಳ ಕುರಿತು ಅತ್ಯಂತ ಶಕ್ತಿಶಾಲಿಯಾಗಿ ವಿಚಾರ ಮಂಡಿಸುವ ಪ್ರಯತ್ನ ಈ ಕೃತಿಯಲ್ಲಾಗಿದೆ. ಮೂಲತಃ ಇಂಗ್ಲಿಷ್ ನಲ್ಲಿದ್ದ ಕೃತಿಯನ್ನು ಡಾ. ಜಿ. ಬಿ. ಹರೀಶ್ ಹಾಗೂ ಪಾಂಡುರಂಗ ಶಾಸ್ತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಧುನಿಕರಿಗಾಗಿ ತಂತ್ರ ದೀಪಿಕಾ

ಮೂಲ ಲೇಖಕರು: ಆರ್. ಎಲ್. ಕಶ್ಯಪ್

ಅನುವಾದ: ಡಾ. ಜಿ. ಬಿ. ಹರೀಶ

ಮುದ್ರಣ : 2002

ಪುಟ: 84, ಬೆಲೆ: 15 ರೂ.

ಪ್ರಕಾಶಕರು: ಶ್ರೀ ಅರಬಿಂದೋ ಕಪಾಲಿಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್

ಇಂದಿನ ಆಧುನಿಕ ಬದುಕಿನಲ್ಲಿ ತಂತ್ರದ ಬಗ್ಗೆ ಮೂಲಗ್ರಂಥಗಳನ್ನು ಓದುವುದು ಕಷ್ಟ. ಆ ಗ್ರಂಥಗಳು ದೊರಕುವುದೂ ಕಷ್ಟ. ಆದರೆ ತಂತ್ರವನ್ನು ಅಳವಡಿಸಿಕೊಂಡವರು ಇದ್ದಾರೆ. ಅವರ ಬದುಕಿನ ಸಾರವನ್ನು ಓದುಗರ ಮುಂದಿಡುವ ಪ್ರಯತ್ನವೇ ‘ಆಧುನಿಕರಿಗಾಗಿ ತಂತ್ರ ದೀಪಿಕಾ‘. ತಂತ್ರಗಳ ಹಿನ್ನೆಲೆ, ಸಾಧನೆಯ ನಾಲ್ಕು ಹಾದಿಗಳು, ತಂತ್ರ-ತಾಂತ್ರಿಕರು ಮತ್ತು ಭಾರತೀಯ ಸಮಾಜ ಇವುಗಳ ನಡುವಿನ ಬಾಂಧವ್ಯ, ಭಾರತೀಯ ಸಮಾಜದ ರಚನೆಯಲ್ಲಿ ಸಮಾಜದ ಪಾತ್ರ, ವಾಮಾಚಾರದ ನಿಜಸ್ವರೂಪ ಇವು ಈ ಪುಸ್ತಕದಲ್ಲಿ ಚರ್ಚಿತವಾಗಿರುವ ವಿಷಯಗಳು. ಮೂಲ ಇಂಗ್ಲೀಷ್ ನಲ್ಲಿರುವ ಈ ಕೃತಿಯನ್ನು ಡಾ. ಜಿ. ಬಿ. ಹರೀಶ ಅವರು ಕನ್ನಡಕ್ಕೆ ತಂದಿದ್ದಾರೆ.

ಅಂತರ್ಯಜ್ಞ

ಮೂಲ ಲೇಖಕರು: ಸಾ. ಕೃ. ರಾಮಚಂದ್ರರಾವ್

ಅನುವಾದ: ಡಾ. ಜಿ. ಬಿ. ಹರೀಶ

ಮೊದಲ ಮುದ್ರಣ: 2002, ಮರು ಮುದ್ರಣ – 2003

ಪುಟ: 48, ಬೆಲೆ: 12 ರೂ.

ಪ್ರಕಾಶಕರು: ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ

ಇದು ವೇದಗಳ ಕುರಿತಾದ ಕೃತಿ. ಈ ಹೊತ್ತಿಗೆಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗ ಋಗ್ವೇದ ಮಂತ್ರ ಸಂಹಿತೆಯನ್ನು ಕುರಿತದ್ದು. ಎರಡನೆಯದು ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದೆ.  ಇದರಲ್ಲಿ ಪ್ರೊ. ಸಾ. ಕೃ. ರಾಮಚಂದ್ರರಾಯರು ಯಾಸ್ಕರಿಂದ ಮೊದಲ್ಗೊಂಡು ನಮ್ಮ ಕಾಲದ ಶ್ರೀ ಅರವಿಂದರು ಮತ್ತು ಶ್ರೀ ಕಪಾಲಿಶಾಸ್ತ್ರಿಗಳ ವರೆಗಿನ ವೇದ ಭಾಷ್ಯಕಾರರ ದೊಡ್ಡ ಪಟ್ಟಿಯನ್ನೇ ಉಲ್ಲೇಖಿಸಿದ್ದಾರೆ. ವೇದದ ಆಧ್ಯಾತ್ಮಿಕ ಆಯಾಮದ ಮೇಲೆ ಬೆಳಕು ಚೆಲ್ಲಿದ್ದಾರೆ. ಯಜುರ್ವೇದವನ್ನು ಕುರಿತ ಎರಡನೇ ಭಾಗದಲ್ಲಿ ಕಠಿಣವಾದ ವೇದವಿಷಯಗಳನ್ನು ನಾಜೂಕಾಗಿ ಬಿಡಿಸಲಾಗಿದೆ. ಋಗ್ ಮತ್ತು ಯಜುರ್ವೇದಗಳನ್ನು ಅರ್ಥೈಸಿಕೊಳ್ಳಲು ಈ ಕೃತಿ ಉಪಯುಕ್ತ.

ಪ್ರೀತಿ ಮತ್ತು ಕರುಣೆ

ಮೂಲ ಲೇಖಕರು: ಧರ್ಮಗುರು ಪೂಜ್ಯ ದಲೈ ಲಾಮಾ

ಅನುವಾದ: ಡಾ. ಜಿ. ಬಿ‌. ಹರೀಶ

ಮುದ್ರಣ: 2017

ಪ್ರಕಾಶಕರು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಭಗವಾನ್ ಬುದ್ಧ ಪ್ರೀತಿ ಮತ್ತು ಕರುಣೆಯನ್ನು ಅಂತಃಕರಣದಲ್ಲಿ ಧಾರಣೆ ಮಾಡುಕೊಂಡು ಬದುಕಿದಾತ. ಭೂಮಿಯ ಮೇಲಿನ ಸಕಲ ಜೀವಿಗಳ ದುಃಖವೂ ತನ್ನದೇ ಎಂದುಕೊಂಡು ಬದುಕಿದ್ದುದು ಆತನ ಬದುಕಿನ ಶ್ರೇಷ್ಠತೆ. ಬುದ್ಧ ಗುರು ತೋರಿದ ದಾರಿಯಲ್ಲಿ ನಡೆಯುತ್ತಿರುವವರು ಪೂಜ್ಯ ದಲೈ ಲಾಮಾ ಅವರು. ಅವರು ಪ್ರೀತಿ ಮತ್ತು ಕರುಣೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಅಮೂಲ್ಯ ಕೃತಿ ‘Love and Compassion’. ಚಿಂತಕ ಡಾ‌.  ಜಿ. ಬಿ‌. ಹರೀಶ ಅವರು ಇದನ್ನು ‘ಪ್ರೀತಿ ಮತ್ತು ಕರುಣೆ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ವಿಷ್ಣುವಿನ 7 ರಹಸ್ಯಗಳು

ಮೂಲ ಲೇಖಕರು: ದೇವದತ್ ಪಟ್ನಾಯಕ್

ಅನುವಾದ: ಡಾ. ಜಿ. ಬಿ. ಹರೀಶ್

ಮುದ್ರಣ- 2015, ಪುಟ: 232, ಬೆಲೆ: 250 ರೂ.

ಪ್ರಕಾಶಕರು: ವಸಂತ ಪ್ರಕಾಶನ

ಆಧುನಿಕ ತಲೆಮಾರಿನ ಮಕ್ಕಳಿಗೆ, ತರುಣ ತರುಣಿಯರಿಗೆ ಹಿಂದೂ ಧರ್ಮ, ಸಂಸ್ಕೃತಿಗಳಲ್ಲಿ ಅಡಗಿರುವ ವಿಷಯಗಳನ್ನು, ಅವುಗಳ ಹಿಂದಿರುವ ಸಂಕೇತಗಳನ್ನು ಸರಳವಾಗಿ ಮತ್ತು ಪರಸ್ಪರ ಸಂಬಂಧಗಳು ಅರ್ಥವಾಗುವಂತೆ ವಿವರಿಸುವುದು ಲೇಖಕ ದೇವದತ್ ಪಟ್ನಾಯಕ್ ಅವರ ವಿಶೇಷತೆ. ಇದೇ ರೀತಿ ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ವಿಚಾರಗಳನ್ನು ಅತ್ಯಂತ ಸರಳವಾದ ರೀತಿಯಲ್ಲಿ ‘7 Secrets of Vishnu’ ಕೃತಿಯಲ್ಲಿ ವಿವರಿಸಿದ್ದಾರೆ. ಇದನ್ನು ಲೇಖಕ ಡಾ. ಜಿ. ಬಿ. ಹರೀಶ್ ‘ವಿಷ್ಣುವಿನ 7 ರಹಸ್ಯಗಳು’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೋಹಿನಿ, ಮತ್ಸ್ಯ, ಕೂರ್ಮ, ತ್ರಿವಿಕ್ರಮ, ರಾಮ, ಕೃಷ್ಣ, ಕಲ್ಕಿಯ ಎಂಬ ವಿಷ್ಣುವಿನ 7 ಅವತಾರಗಳನ್ನು 7 ಅಧ್ಯಾಯಗಳಲ್ಲಿ ವಿವರಿಸಲಾಗಿದೆ.

ಸಂಪಾದನೆ

ರಾಜೀವ್ ಮಲ್ಹೋತ್ರ ವಿಚಾರಧಾರೆ

ಪ್ರಥಮ ಮುದ್ರಣ- 2017

ಪುಟ: 240, ಬೆಲೆ: 170 ರೂ.

ಪ್ರಕಾಶಕರು: ವಸಂತ ಪ್ರಕಾಶನ

ಸಾವಿರಾರು ಪುಟಗಳಲ್ಲಿ ಹರಡಿಹೋಗಿರುವ ಬಹುಮುಖೀ ತೀಕ್ಷ್ಣ ವಿದ್ವತ್ತು ರಾಜೀವ್ ಮಲ್ಲೋತ್ರ ಅವರದ್ದು. ಅವರ ಬೃಹತ್ ಗ್ರಂಥಗಳ ಓದಿಗೆ ಪ್ರವೇಶ ಕಲ್ಪಿಸುವ ದೃಷ್ಟಿಯಿಂದ “ರಾಜೀವ್ ಮಲ್ಹೋತ್ರ ವಿಚಾರಧಾರೆ” ಎಂಬ ಕೃತಿಯನ್ನು ಜಿ.ಬಿ.ಹರೀಶ್ ಅವರು ಸಂಪಾದಿಸಿದ್ದಾರೆ. ಅತ್ಯಾಧುನಿಕ ಪಶ್ಚಿಮದ ಬೌದ್ಧಿಕ ಹುನ್ನಾರಗಳ ಅನಾವರಣಗೊಳಿಸುವ ವಿಚಾರಗಳನ್ನು ರಾಜೀವ್ ಅವರ ನಾಲ್ಕು ಕೃತಿಗಳಿಂದ ಆಯ್ದ ಕೆಲವು ಭಾಗಗಳನ್ನು ಸೂಕ್ತ ಉಪಶೀರ್ಷಿಕೆಗಳ ಜತೆಗೆ ಸಂಯೋಜಿಸಿದ್ದಾರೆ. ಭಾರತದ ನೆಲ, ಜಲ, ಜನತೆ, ಸಂಸ್ಕೃತಿಯ ಮೇಲೆ ನಡೆದ ವೈಚಾರಿಕ ದುರಾಚಾರದ ಪರಿಚಯವನ್ನು ಈ ಕೃತಿ ಮಾಡುತ್ತದೆ.

ನೀರಬೆಳಗು

ಸಂಪಾದಕರು: ಡಾ. ಜಿ. ಬಿ. ಹರೀಶ್

ಮುದ್ರಣ- 2022

ಪುಟ: 180, ಬೆಲೆ: 100 ರೂ.

ಪ್ರಕಾಶಕರು: ಕರ್ನಾಟಕ ಸಾಹಿತ್ಯ ಅಕಾಡೆಮಿ

ವಿದ್ವಾಂಸ ಶಂಕರ ಮೊಕಾಶಿ ಪುಣೇಕರ ಅವರು ಬರೆದ ವೈಚಾರಿಕ ಮತ್ತು ವಿಮರ್ಶಾತ್ಮಕ, ವ್ಯಕ್ತಿ ಚಿತ್ರಣದ ಬಿಡಿ ಲೇಖನಗಳು ಮತ್ತು ಸುಮತೀಂದ್ರ ನಾಡಿಗ, ರಾಜು ಅಡಕಳ್ಳಿ, ಶ್ಯಾಮಸುಂದರ ಬಿದರಕುಂದಿ, ರಹಮತ್ ತರೀಕೆರೆ, ಲಿಂಗರಾಜು, ಮಲ್ಲೇಪುರಂ ಜಿ. ವೆಂಕಟೇಶ ಅವರು ಮಾಡಿರುವ ಸಂದರ್ಶನಗಳನ್ನು ಒಳಗೊಂಡ  “ನೀರಬೆಳಗು” ಕೃತಿಯನ್ನು ಸಾಹಿತಿ ಡಾ. ಜಿ. ಬಿ. ಹರೀಶ್ ಸಂಪಾದಿಸಿದ್ದಾರೆ. ಇದರಲ್ಲಿ ಸಂಸ್ಕೃತಿ ಸಂವಾದ, ಕೃತಿ ಸಂವಾರ, ವ್ಯಕ್ತಿ ಸಂವಾದ ಮತ್ತು ಅನುಬಂಧಗಳು ಎಂಬ ನಾಲ್ಕು ವಿಭಾಗಗಳನ್ನು ಮಾಡಿದ್ದಾರೆ. ಮೊದಲ ಭಾಗದಲ್ಲಿ ಸಾಹಿತ್ಯದ ವಿಚಾರಗಳಿದ್ದರೆ, ಎರಡನೇ ಭಾಗದಲ್ಲಿ ವಿವಿಧ ಸಾಹಿತಿಗಳು ರಚಿಸಿರುವ ಕೃತಿಗಳ ವಿಮರ್ಶಾತ್ಮಕ ಮತ್ತು ಪರಿಚಯಾತ್ಮಕ ಬರಹಗಳು, ಮೂರನೇ ಭಾಗದಲ್ಲಿ ಹಿರಿಯ ವಿದ್ವಾಂಸರ ಒಡನಾಟ ಪ್ರತಿಬಿಂಬಿಸುವ ಲೇಖನಗಳಿವೆ.  ಅನುಬಂಧದಲ್ಲಿ ಸಂದರ್ಶನಗಳು, ಕೃತಿಗಳ ವಿವರಣಾತ್ಮಕ ಸೂಚಿಯನ್ನು ಓದಬಹುದಾಗಿದೆ.

ಕನ್ನಡ ಸಾಹಿತ್ಯ ಸಂಗಾತಿ

ಪ್ರಕಾಶಕರು: ವಸಂತ ಪ್ರಕಾಶನ

ಕನ್ನಡ ಸಾಹಿತ್ಯ ಸಂಗಾತಿ”ಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಸಾಹಿತ್ಯವನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ, ಕನ್ನಡ ಪರಂಪರೆಯನ್ನು ಕುರಿತಂತೆ ಅಧಿಕೃತವಾದ ಖಚಿತವಾದ ವಸ್ತು ವಿವರಗಳ ಉಪಯುಕ್ತ ಕೃತಿಯಾಗಿದ್ದು, ಜಿ.ಬಿ. ಹರೀಶ ಅವರು ಸಂಪಾದಿಸಿದ್ದಾರೆ. ಸಾಮಾನ್ಯ ಕನ್ನಡಿಗರಿಗೂ ಕನ್ನಡ ಸಾಹಿತ್ಯವನ್ನು ಕುರಿತಂತೆ ಎಲ್ಲಾ ಮುಖ್ಯ ಸಂಗತಿಗಳನ್ನು ಒದಗಿಸಿಕೊಡುತ್ತಲೇ ಕನ್ನಡ ಸಾಹಿತ್ಯದ ಓದಿಗೆ ತೊಡಗಿಸಿಕೊಳ್ಳುವ ಪ್ರೇರೇಪಣೆಯನ್ನೂ ನೀಡುವುದು ಇದರ ವಿಶೇಷ. ಕನ್ನಡ ಸಾಹಿತ್ಯವನ್ನು ಪ್ರಕಾರ, ಮೀಮಾಂಸೆ, ಸಂಶೋಧನೆ, ಭಾಷೆ ಮತ್ತು ಛಂದಸ್ಸು ಹಾಗೂ ಪ್ರಮುಖ ಲೇಖಕರ ಮೂಲಕ ವಸ್ತುನಿಷ್ಠವಾಗಿ ಪರಿಚಯಿಸಿದ್ದಾರೆ.

ವಿಚಾರ ಸಾಹಿತ್ಯ

ಸಂಪಾದಕರು: ಡಾ. ಜಿ. ಬಿ. ಹರೀಶ್

ಮುದ್ರಣ- 2022

ಪುಟ: 180, ಬೆಲೆ: 100 ರೂ.

ಪ್ರಕಾಶಕರು: ಕರ್ನಾಟಕ ಸಾಹಿತ್ಯ ಅಕಾಡೆಮಿ

ವಿಚಾರ ಎಂಬುದು ನಿಂತ ನೀರಲ್ಲ, ಅದು ನಿರಂತರವಾಗಿ ಹರಿಯತ್ತಿರುವ ತೊರೆ. ಬದುಕು ಬೆಳೆದಂತೆ ಕಾಲ ಮಾಸಿದಂತೆ ಬುದ್ದಿ ಭಾವಗಳು ಬೆಳಗಿದಂತೆ ವಿಚಾರಗಳು ಬೆಳಗುತ್ತವೆ. ವಿಚಾರ ಎಂಬುದು ಒಂದಲ್ಲ ಹಲವು. ಅನುಭವಗಳ ಸೀಮೆ ಅನಂತ, ನಡೆಯುವ ದಾರಿಗಳೂ ಅನಂತ. ಮಾತು ಮತ್ತು ಕ್ರಿಯೆಗಳ ನಡುವಿನ ಸಂಬಂಧ ವಿಚಾರದ ಸಾಚಾತನವನ್ನು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ವಿಚಾರವಾದಕ್ಕಿಂತ ವಿಚಾರವಂತಿಕೆ ಮುಖ್ಯ. ಭಾರತ ಹಾಗೂ ಗ್ರೀಕ್ ದೇಶಗಳು ಪೌರಾತ್ಯ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿನ ವಿಚಾರಗಳನ್ನು ಡಾ.ಜಿ.ಬಿ. ಹರೀಶ್ ಅವರು ಸಂಪಾದಿಸಿದ್ದಾರೆ. ಸ್ವಾಮಿ ವೀರೇಶಾನಂದ ಸರಸ್ವತೀ, ಎಸ್‌. ಆರ್. ರಾಮಸ್ವಾಮಿ, ಪ್ರೇಮಶೇಖರ, ಡಾ. ಮನಮೋಹನ ವೈದ್ಯ, ಡಾ. ನಟರಾಜ್ ಬೂದಾಳ್,  ಡಾ. ನಿತ್ಯಾನಂದ ಬಿ ಶೆಟ್ಟಿ, ಮಂಜುನಾಥ ಅಜ್ಜಂಪುರ, ಚಕ್ರವರ್ತಿ ಸೂಲಿಬೆಲೆ, ಮಂಜುನಾಥ ಕೊಳ್ಳೇಗಾಲ, ಡಾ ರೋಹಿಣಾಕ್ಷ ಶಿರ್ಲಾಲು, ಡಾ.ಅಪ್ಪಗೆರೆ ಸೋಮಶೇಖರ, ರೋಹಿತ ಚಕ್ರತೀರ್ಥ, ವಿಶ್ವೇಶ್ವರ ಭಟ್ ಇವರು ಲೇಖನಗಳಲ್ಲಿ ವೈವಿದ್ಯಮಯ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.

ಸಂಚಯ

ಜುಲೈ – ಆಗಸ್ಟ್ – 2009

ಅತಿಥಿ ಸಂಪಾದಕ: ಜಿ.ಬಿ.ಹರೀಶ್‌

“ಸಂಚಯ” ಪತ್ರಿಕೆಯು ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ಗಮನ ಹರಿಸಿದ ಒಂದು ವಿಶಿಷ್ಟ ಪತ್ರಿಕೆಯಾಗಿದೆ. ಇದು ಕೇವಲ ಒಂದು ಪತ್ರಿಕೆಯಲ್ಲ, ಬದಲಿಗೆ ಕನ್ನಡ ಭಾಷಾ ತಂತ್ರಜ್ಞಾನ ಮತ್ತು ಸಾಹಿತ್ಯಿಕ ಸಂಶೋಧನೆಗಳನ್ನು ಬೆಸೆಯುವ ಒಂದು ವೇದಿಕೆಯಾಗಿದ್ದು, ವೈಚಾರಿಕ ವಿಚಾರಗಳನ್ನು ಪ್ರತಿಬಿಂಬಿಸುತ್ತಿತ್ತು. ಗಾಂಧೀಜಿ ರಚಿಸಿದ್ದ ‘ಹಿಂದ್ ಸ್ವರಾಜ್’ ಪುಸ್ತಕಕ್ಕೆ ಶತಮಾನದ ಸಂದರ್ಭದಲ್ಲಿ  “ಸಂಚಯ” ಪತ್ರಿಕೆಯ ವಿಶೇಷ ಸಂಚಿಕೆಯ ಅತಿಥಿ ಸಂಪಾದಕರಾಗಿದ್ದ ಜಿ.ಬಿ.ಹರೀಶ ಅವರು ಸ್ವದೇಶಿ, ಸ್ವರಾಜ್ಯ, ಸ್ವಾವಲಂಬನೆ, ಮಿತವಾಗಿ ವಸ್ತುವಿನ ಬಳಕೆ, ಸ್ವಯಂ ನಿಯಂತ್ರಣದ ತತ್ವಗಳ ಮೇಲೆ ಗಾಂಧೀಜಿ ‘ಹಿಂದ್ ಸ್ವರಾಜ್ಯ’ ಕಟ್ಟಿಕೊಟ್ಟಿದ್ದು, ‘ಹಿಂದ್ ಸ್ವರಾಜ್ಯ’ ಕೃತಿಯ ವಿವಿಧ ದೃಷ್ಟಿಯ ಚಿಂತನೆಗಳನ್ನು ಲೇಖಕರ ಮೂಲಕ ಬಿತ್ತಿದ್ದಾರೆ.

ಪಂ. ದೀನ್‌ದಯಾಳ್‌ ಉಪಾಧ್ಯಾಯ ಅವರ ಸಮಗ್ರ ಬರೆಹಗಳು

6 ರಿಂದ 8 ಸಂಪುಟಗಳ ಮುದ್ರಣ – 2015

1 ರಿಂದ 5 ಸಂಪುಟಗಳ ಮುದ್ರಣ- 2012

ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪಂ. ದೀನ್‌ದಯಾಳ್‌ ಉಪಾಧ್ಯಾಯ ಅವರು ಅಪ್ರತಿಮ ದೇಶಭಕ್ತ, ಆದರ್ಶ ಚಿಂತಕ, ಪ್ರಬುದ್ಧ ತತ್ವಜ್ಞಾನಿ, ಮೌಲ್ಯನಿಷ್ಠ ಪತ್ರಕರ್ತ, ಉತ್ತಮ ಸಾಹಿತಿಯಾಗಿದ್ದ ಮಹಾನ್‌ ವ್ಯಕ್ತಿ. ನಾಡಿನ ಹಿತಚಿಂತನೆಯೇ ಸದಾ ಅವರ ಧ್ಯೇಯವಾಗಿತ್ತು. ಸದೃಢ ಭಾರತವನ್ನು ರೂಪಿಸಬೇಕೆಂಬ ಹಂಬಲದಿಂದ ಅವರು ಹಿಂದಿ, ಆಂಗ್ಲ ಭಾಷೆಗಳಲ್ಲಿ ರಚಿಸಿದ ಗ್ರಂಥಗಳು, ಪತ್ರಿಕೆಗಳಲ್ಲಿನ ಅವರ ಲೇಖನಗಳಲ್ಲಿ ಮೈದಳೆದಿದೆ. ಜನಸಂಘದಂಥ ರಾಷ್ಟ್ರೀಯ ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರೂ, ಅವರ ಚಿಂತನ – ಮಂಥನಗಳು ಪಕ್ಷಾತೀತವಾಗಿ, ಕಾಲಾತೀತವಾಗಿ ಇದ್ದವು ಎಂಬುದಕ್ಕೆ ಅವರ ಬರೆಹಗಳೇ ಸಾಕ್ಷಿಯಾಗಿವೆ.

ಹೀಗಾಗಿ, ಅವರ ಜೀವನ ಚರಿತ್ರೆ ಮತ್ತು ಸಮಗ್ರ ಕೃತಿಗಳು ಕನ್ನಡಿಗರ ಕೈಗೆ ಸಿಗುವಂತೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ “ಪಂ. ದೀನ್‌ದಯಾಳ್‌ ಉಪಾಧ್ಯಾಯ ಅವರ ಸಮಗ್ರ ಬರೆಹಗಳು” ಎಂಬ ಹೆಸರಿನಲ್ಲಿ ಎಂಟು ಸಂಪುಟಗಳನ್ನು ಪ್ರಕಟಿಸಲಾಗಿದ್ದು, ಈ ಗ್ರಂಥಕ್ಕಾಗಿ ಮಾಹಿತಿ ಸಂಗ್ರಹ, ಅನುವಾದ ಮತ್ತು ಸಂಪಾದನೆ ಕಾರ್ಯಕ್ಕೆ ಅಂದಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಡಾ. ಪ್ರಧಾನ್ ಗುರುದತ್ತ ಪ್ರಧಾನ ಸಂಪಾದಕರಾಗಿದ್ದರು. ಸಂಪಾದಕ ಮಂಡಳಿಯಲ್ಲಿ ಎಸ್.ಆರ್. ರಾಮಸ್ವಾಮಿ, ಡಾ.ಜಿ.ಬಿ.ಹರೀಶ, ಡಾ. ಮಂಗಳಾ ಶ್ರೀಧರ್, ಪಿ.ಎಂ. ರಮೇಶ್ (ರಮೇಶ ದೊಡ್ಡಪುರ) ಇದ್ದರು. ದೀನದಯಾಳರ ಜನ್ಮಸ್ಥಾನ, ಅವರ ಕಾರ್ಯಕ್ಷೇತ್ರಗಳಲ್ಲೆಲ್ಲ ಸಂಚರಿಸಿ ಹಿಂದಿ, ಇಂಗ್ಲಿಷ್‌ನಲ್ಲಿದ್ದ ಲೇಖನಗಳು, ಬಿಡಿ ಬರೆಹಗಳನ್ನು ಕಲೆಹಾಕುವಲ್ಲಿ ಹರೀಶರು ಪ್ರಮುಖ ಪಾತ್ರ ವಹಿಸಿದರು. 1 ರಿಂದ 5 ಸಂಪುಟಗಳು 2012ರಲ್ಲಿ ಪ್ರಕಟವಾದರೆ, 6ರಿಂದ 8 ಸಂಪುಟಗಳು 2015ರಲ್ಲಿ ಮುದ್ರಣವಾಗಿದೆ

ಸಂಪುಟ-೧ ರಲ್ಲಿ ಜಗದ್ಗುರು ಶಂಕರಾಚಾರ್ಯ, ಯವನ ವಿಜೇತ ಚಂದ್ರಗುಪ್ತ, ಭಗವಾನ್ ಶ್ರೀಕೃಷ್ಣ, ಸ್ವಾತಂತ್ರ್ಯದ ಸಾಧನೆ ಮತ್ತು ಸಿದ್ಧಿ ಮತ್ತು  ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರನ್ನು ಕುರಿತ ಡಾ. ಮಹೇಶ ಚಂದ್ರ ಶರ್ಮಾ ಅವರ ಪುಸ್ತಕದ ಅನುವಾದ, ಸಂಪುಟ-೨ ರಲ್ಲಿ ಭಾರತೀಯ ಅರ್ಥನೀತಿ, ರಾಷ್ಟ್ರ ಜೀವನದ ದಿಕ್ಕು, ಸಂಪುಟ-೩ರಲ್ಲಿ ಏಕಾತ್ಮ ಮಾನವದರ್ಶನ ಮತ್ತು ಏಕಾತ್ಮ ಮಾನವದರ್ಶನದ ಬಗೆಗಿನ ಚಿಂತನೆಗಳು, ಸಂಪುಟ-೪ರಲ್ಲಿ ಎರಡು ಯೋಜನೆಗಳು, ಅಪಮೌಲ್ಯೀಕರಣ,  ಸಂಪುಟ-೫ರಲ್ಲಿ ರಾಜಕೀಯ ದಿನಚರಿ, ವಿಚಾರ ರಶ್ಮಿ, 6 ಮತ್ತು  7ನೇ ಸಂಪುಟದಲ್ಲಿ -೪ ರಲ್ಲಿ ಉಪಾಧ್ಯಾಯರ ಭಾಷಣಗಳು, ವರದಿಗಳು,  ಸಂಪುಟ-8ರಲ್ಲಿ ಅವರ ಸಂದರ್ಶನ, ಪತ್ರಿಕಾಗೋಷ್ಠಿ, ವರದಿಗಳು, ಲೇಖನಗಳು, ಭಾಷಣಗಳು ಮತ್ತು ಹೇಳಿಕೆಗಳನ್ನು ಒಳಗೊಂಡಿವೆ.

ಶಂಕರ ಮೊಕಾಶಿ ಪುಣೇಕರ ಸಮಸ್ತ ಸಾಹಿತ್ಯ

ಮುದ್ರಣ: 2012

ಪ್ರಕಾಶಕರು: ಅಭಿನವ

ಶಂಕರ ಮೊಕಾಶಿ ಪುಣೇಕರ ಅವರು ಕನ್ನಡದ ಅತ್ಯಂತ ಸ್ವೋಪಜ್ಞ ಕವಿ, ಕಾದಂಬರಿಕಾರ, ವಿಮರ್ಶಕ. ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸರು ಮತ್ತು ಸಂಶೋಧಕರು.  ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಡಾ. ಮೊಕಾಶಿ ಪುಣೇಕರ ಮೂವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.   ಜಿ.ಬಿ ಹರೀಶ್ ಅವರು ‘ಶಂಕರ ಮೊಕಾಶಿ ಪುಣೇಕರ ಸಮಸ್ತ ಸಾಹಿತ್ಯ’ ಎಂಬ ನಾಲ್ಕು ಸಂಪುಟಗಳನ್ನು 2012ರಲ್ಲಿ ಸಂಪಾದಿಸಿದ್ದಾರೆ. ಮೊದಲ ಸಂಪುಟ ‘ಮಹತಿ’ ಯಲ್ಲಿ  ಮೊಕಾಶಿಯವರು ಪಾಶ್ಚಾತ್ಯ ಸಾಹಿತ್ಯ, ಕಾವ್ಯಚಿಂತನೆ, ಮಹಾಕಾವ್ಯಗಳನ್ನು ಕುರಿತು ಪ್ಲೇಟೊ, ಅರಿಸ್ಟಾಟಲ್, ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್ ಮುಂತಾದ ಚಿಂತಕರು ಮತ್ತು ಕವಿಗಳ ಸ್ವಾರಸ್ಯ, ಶಕ್ತಿ, ಸಾಂಸ್ಕೃತಿಕ ಮಹತ್ವ ಕುರಿತು ಟಿಪ್ಪಣಿ ರೂಪದಲ್ಲಿ ಬರೆದ ಲೇಖನಗಳಿವೆ. ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಓದು ಎಂಬ ಘೋಷದಡಿ ಪ್ರಕಟವಾದ ‘ವಸ್ತುವಿನ್ಯಾಸ’ ಎರಡನೇ ಸಂಪುಟದಲ್ಲಿ  ಸೃಷ್ಟಿಶೀಲ ಸಾಹಿತ್ಯ, ಸಂಶೋಧನೆ, ವಿಮರ್ಶೆಗಳು ಮತ್ತು ಮುನ್ನುಡಿಯನ್ನು ಮೂರೂ ಭಾಗವಾಗಿ  ವಿಷಯವಾರು ವಿಂಗಡಿಸಿದ್ದಾರೆ. ‘ಸುಸಂಧಿ’  ಎಂಬ 3ನೇ ಸಂಪುಟದಲ್ಲಿ ಕವಿತೆ, ಕಥೆ, ನಾಟಕಗಳನ್ನು ಓದಬಹುದಾಗಿದೆ. 4ನೇ ಸಂಪುಟವಾದ ’ಕಾದಂಬರಿ ತ್ರಿವಳಿ’ ಕೃತಿಯು ಶಂಕರ್‍ ಮೊಕಾಶಿ ಪುಣೇಕರ್‍ ಅವರ ನಟನಾರಾಯಣಿ, ಗಂಗವ್ವ ಗಂಗಾಮಾಯಿ, ಅವಧೇಶ್ವರಿ ಕಾದಂಬರಿಗಳ ಅಧ್ಯಯನ ಮಾಡಬಹುದಾಗಿದೆ.

ಸಾವರ್ಕರ್ ಸಮಗ್ರ ಸಾಹಿತ್ಯ

ಭಾರತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ವೀರ ಸಾವರ್ಕರ್ ಪ್ರಸಿದ್ದರು.  ಅಲ್ಲದೆ, ಕವಿ, ಭಾಷಣಕಾರ, ನಾಟಕಕಾರ, ಸಮಾಜ ಸುಧಾರಕರಾಗಿ  ಬಹುಮುಖಿ ಪ್ರತಿಭೆಯಾಗಿದ್ದರು. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯ ಗಳನ್ನು ಸಂಶೋಧನೆ ಮಾಡಿದವರಿದ್ದರು.  ಸಾಹಿತ್ಯ ಸೃಷ್ಟಿಗಳ ಅಪೂರ್ವ ಸಂಗಮವಾಗಿದ್ದವರು. ಸ್ವಾತಂತ್ರ್ಯವೀರ ಸಾವರ್ಕರ್ ಬರೆದ ಕವಿತೆ, ಲಾವಣಿ, ಕಾದಂಬರಿ, ವ್ಯಂಗ್ಯ ಲೇಖನ, ವಿಚಾರ ಸಾಹಿತ್ಯವನ್ನು ಕನ್ನಡಿಗರು ಓದಬೇಕು ಎಂಬ ಉದ್ದೇಶದಿಂದ ಡಾ.ಹರೀಶ್ ಅವರು ಪ್ರಧಾನ ಸಂಪಾದಕರಾಗಿ ಡಾ. ಎಸ್. ಆರ್. ಲೀಲಾ, ರೋಹಿತ್ ಚಕ್ರತೀರ್ಥ, ರಮೇಶ ದೊಡ್ಡಪುರ, ಹರ್ಷ ಸಮೃದ್ಧ ಇವರನ್ನೊಳಗೊಂಡ ಸಂಪಾದಕ ಮಂಡಲಿ ರಚಿಸಿಕೊಂಡು ‘ಸಾವರ್ಕರ್ ಸಮಗ್ರ’ವನ್ನು 10 ಸಂಪುಟಗಳಲ್ಲಿ ಸಾವರ್ಕರ್ ಸಾಹಿತ್ಯ ಸಂಘದ ಮೂಲಕ ಪ್ರಕಟಿಸುತ್ತಿದ್ದಾರೆ. ದಿ ಮಿಥಿಕ್‌ ಸೊಸೈಟಿ ಇದಕ್ಕೆ ಬೆಂಬಲವಾಗಿ ನಿಂತಿದೆ. ಈಗಾಗಲೇ ಸಂಪುಟ-1 ಮತ್ತು  ಸಂಪುಟ-6 ಮುದ್ರಣವಾಗಿದ್ದು,  ಕನ್ನಡ ಭಾಷೆಗೆ ಅನುವಾದವಾದಂತೆ ಹಂತ ಹಂತವಾಗಿ ಓದುಗರ ಕೈ ಸೇರುತ್ತಿದೆ.

ಸಾವರ್ಕರ್ ಸಮಗ್ರ ಸಂಪುಟ-1

ಪ್ರಧಾನ ಸಂಪಾದಕರು: ಡಾ. ಜಿ. ಬಿ. ಹರೀಶ್
ಅನುವಾದ : ನಾಗ . ಎಚ್. ಹುಬ್ಬಿ
ಮುದ್ರಣ- 2024
ಪುಟ: 934, ಬೆಲೆ: 850 ರೂ.

ಸಾವರ್ಕರ್ ಸಮಗ್ರ ಸಂಪುಟ-6

ಅನುವಾದ : ಡಾ. ಎಸ್. ಆರ್. ಲೀಲಾ
ಮುದ್ರಣ- 2023
ಪುಟ: 804, ಬೆಲೆ: 750 ರೂ.
ಪ್ರಕಾಶಕರು: ಸಾವರ್ಕರ್ ಸಾಹಿತ್ಯ ಸಂಘ

ಕನ್ನಡ ಭಾಷಾಭಿವೃದ್ಧಿ ಯೋಜನೆ: ತುಮಕೂರು ವಿಶ್ವವಿದ್ಯಾನಿಲಯ

ಮುದ್ರಣ: 2011

ಪ್ರಕಾಶಕರು: ತುಮಕೂರು ವಿಶ್ವವಿದ್ಯಾಲಯ

2010ರಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಜಿ.ಬಿ.ಹರೀಶ್‌ ಅವರು, ತುಮಕೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಸರ್ಕಾರದ ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿ 19.11.2010ರಿಂದ ಸಂಯೋಜನಾಧಿಕಾರಿಯಾಗಿ ಶಾಸನಗಳು, ಜಾನಪದ ಅಧ್ಯಯನಗಳು, ಸ್ಥಳೀಯ ಇತಿಹಾಸ, ಭಾಷೆ-ಸಾಹಿತ್ಯ, ಪತ್ರಿಕೋದ್ಯಮ ಸೇರಿದಂತೆ ವೈವಿದ್ಯಮಯ ವಿಚಾರಗಳ ಕುರಿತು ಸುಮಾರು 20 ಜನ ವಿದ್ವಾಂಸರಿಂದ 40 ಕೃತಿಗಳನ್ನು ಬರೆಸಿ, ಸಂಪಾದಿಸಿದ್ದಾರೆ. ಅಲ್ಲದೆ, ದೇವಚಂದ್ರನ ಕನ್ನಡ ಭಾಷೆ ಮತ್ತು ಸಂಸ್ಕೃತಿ, 19ನೇ ಶತಮಾನ : ಭಾಷೆ – ಸೌಂಸ್ಕೃತಿ ಸಂವಾದ, ಭಗವಾನ್ ಬುದ್ಧನ ಧಮ್ಮ ಪದ ಎಂಬ ಕೃತಿಗಳನ್ನು ರಚಿಸಿದ್ದಾರೆ. 2011ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಪ್ರಕಾಶನಗೊಂಡ 40 ಕೃತಿಗಳು 2012 ಜನವರಿ 23ರಂದು ಲೋಕಾರ್ಪಣೆಯಾಗಿವೆ.

  1. ದೇವಚಂದ್ರನ ಕನ್ನಡ ಭಾಷೆ ಮತ್ತು ಸಂಸ್ಕೃತಿ / ಲೇ : ಡಾ. ಜಿ. ಬಿ ಹರೀಶ
  2. 19ನೇ ಶತಮಾನ : ಭಾಷೆ – ಸೌಂಸ್ಕೃತಿ ಸಂವಾದ / ಲೇ : ಡಾ. ಜಿ. ಬಿ ಹರೀಶ
  3. ಭಗವಾನ್ ಬುದ್ಧನ ಧಮ್ಮ ಪದ / ಲೇ : ಡಾ. ಜಿ. ಬಿ ಹರೀಶ
  4. ತುಮಕೂರು ಜಿಲ್ಲೆಯ ಪತ್ರಿಕೋದ್ಯಮ / ಲೇ : ಸಿಬಂತಿ ಪದ್ಮನಾಭ
  5. ತುಮಕೂರು ಜಿಲ್ಲೆಯ ಅಸಾದಿಗಳ ಬದುಕು ಮತ್ತು ಸಂಸ್ಕೃತಿ / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  6. ತುಮಕೂರು ಜಿಲ್ಲೆಯ ಚಿತ್ರಕಲೆ / ಲೇ : ಡೇವಿಡ್
  7. ಕನ್ನಡ ತೆಲುಗು ಭಾಷಾ ಸಾಮ್ಯತೆ / ಲೇ : ಕೆಂಕೆರೆ ಹನುಮಂತೇಗೌಡ
  8. ತುಮಕೂರು ಜಿಲ್ಲೆಯಲ್ಲಿ ಕರಪಾಲ ಮೇಳ / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  9. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ತತ್ವಪದಕಾರರು / ಲೇ | ಡಾ. ನಟರಾಜ ಬೂದಾಳ್
  10. ತುಮಕೂರು ಜಿಲ್ಲೆಯ ಜಾನಪದೀಯ ನೆಲೆಗಳು / ಲೇ : ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
  11. ಸಂವಹನಾತ್ಮಕ ಅಧ್ಯಯನದಲ್ಲಿ ಜನಪದ ಕಲೆಗಳು / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  12. ತುಮಕೂರು ಭಾಗದ ಬಿಡಿಸಲಾರದ ಒಗಟುಗಳು / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  13. ತುಮಕೂರು ಜಿಲ್ಲೆಯ ಜಾನಪದ ಕಲೆಗಳು ಮತ್ತು ಕಲಾವಿದರ ಪರಿಚಯ / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  14. ತುಮಕೂರು ಜಿಲ್ಲೆಯ ಶಕ್ತಿ ದೇವತೆಗಳು / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  15. ತುಮಕೂರು ಜಿಲ್ಲೆಯ ಪ್ರದರ್ಶನ ಕಲೆಗಳು / ಲೇ : ಕಂಟಲಗೆರೆ ಸಣ್ಣಹೊನ್ನಯ್ಯ
  16. ತುಮಕೂರು ಜಿಲ್ಲೆಯ ಮಹಿಳಾ ಲೇಖ ಲೋಕ / ಲೇ: ಡಾ. ಗೀತಾ
  17. ಪದಾರ್ಥ ಸಂಪದ / ಲೇ : ಎಸ್. ಕಾರಿಕ್
  18. ಬದುಕು ಬದಲಿಸಿದ ಪರ್ಠ್ಯಾಯ ಕೃಷಿ ಮಾರ್ಗಗಳು / ಲೇ : ಪೂರ್ಣಪ್ರಜ್ಞ ಬೇಳೂರು
  19. ಆಚಾರ ವಿನೋಬಾ ಭಾವೆಯವರ ಆಧ್ಯಾತ್ಮಿಕ ಚಿಂತನೆಗಳು / ಲೇ : ಡಾ. ಕೆ. ರಾಜೀವಲೋಚನ
  20. ಕಬೀರ್ ಸಾಹಿತ್ಯದ ಪ್ರಸ್ತುತತೆ / ಲೇ : ಆರ್. ಪಿ. ಹೆಗಡೆ
  21. ಸಾವಯವ ಕೃಷಿ / ಲೇ : ಬಿ. ಶಿವನಂಜಯ್ಯ ಬಾಳೆಕಾಯಿ’
  22. ತುಮಕೂರು ಜಿಲ್ಲೆಯ ಕೋಟೆಗಳ ಸಾಂಸ್ಕೃತಿಕ ಒಳನೋಟಗಳು / ಲೇ :ಡಾ. ಮುದ್ದುವೀರಪ್ಪ
  23. ನಾಲ್ಕನೆಯ ಹಾದಿ / ಲೇ :ಕಿರಣ್‌.ಎಚ್. ಬ
  24. ಸಾಂಸ್ಕೃತಿಕ ವೀರರು ಮತ್ತು ಮಹಾಸತಿಯರ ಲಾವಣಿಗಳು / ಲೇ : ಕೆಂಕೆರೆ ಹನುಮಂತೇಗೌಡ
  25. ಕಾವ್ಯಾಭ್ಯಾಸ / ಲೇ : ಡಾ. ಸಿದ್ಧಗಂಗಯ್ಯ ಹೊಲತಾಳ್
  26. ಪ್ರಗತಿ ಪಥದಲ್ಲಿ ವಿನಾಶದ ರಥ / ಲೇ : ಪೂರ್ಣಪ್ರಜ್ಞ ಬೇಳೂರು
  27. ಸಹಜ ಆನಂದಕ್ಕೆ ಮಹರ್ಷಿ ರಮಣರ ಮಾರ್ಗ / ಲೇ : ಪ್ರಶಾಂತ್ ಜೆ. ಸಿ.
  28. ಟಿ.ವಿ. ಕಪಾಲಿಶಾಸ್ತ್ರಿಗಳ ಸಿದ್ಧಾಂಜನ / ಲೇ : ಡಾ. ಜಯಂತಿ ಮನೋಹರ
  29. ನನ್ನ ದೃಷ್ಟಿಯಲ್ಲಿ ಜೀವನ / ಲೇ.: ಪ್ರಭು ಗಾಣದಾಳ್
  30. ಶ್ರೀವಿಜಯಪ್ರಭೂತಂ ಕವಿರಾಜಮಾರ್ಗಂ / ಸಂ: ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ
  31. ಕರ್ನಾಟಕ ಸಹ್ಯಾದ್ರಿ ಬೆಟ್ಟಗಳು / ಲೇ : ಡಾ. ಶ್ರೀಪಾದ ಭಟ್
  32. ತುಮಕೂರು ಜಿಲ್ಲೆಯ ಸ್ಥಳನಾಮಗಳು / ಲೇ : ಡಾ. ಶ್ರೀಪಾದ ಭಟ್
  33. ಕಾನೂನು ಜಾರಿ ಬಗೆಗಿನ ಚಿಂತನೆಗಳು / ಲೇ : ಡಾ. ಸಂ. ತ. ರಮೇಶ್
  34. ನವೋತ್ತರ ಮಾರ್ಗ / ಲೇ : ಡಾ. ರಘುರಾಂ
  35. ಔಷಧೀಯ ಸಸ್ಯಗಳ ಆತ್ಮಕಥೆಯ ಸುತ್ತ ಮುತ್ತ / ಲೇ : ಡಾ. ವಿ. ಆರ್. ಪದ್ಮನಾಭರಾವ್
  36. ಕಾಡುಗೊಲ್ಲರು / ಲೇ: ಡಾ. ಪಿ. ಎಂ. ಗಂಗಾಧರಯ್ಯ
  37. ಕಾಡುಗೊಲ್ಲರ ಸಾಂಸ್ಕೃತಿಕ ವೀರರು / ಲೆ : ಡಾ. ಎಸ್. ಶಿವಣ್ಣ
  38. ಶಾಸನ ಮಂಥನ / ಲೇ : ಡಾ. ಪಿ. ವಿ. ಕೃಷ್ಣಮೂರ್ತಿ
  39. ಶಾಸನ, ಇತಿಹಾಸ ಮಂಥನ / ಲೇ: ಡಾ. ಪಿ. ವಿ. ಕೃಷ್ಣಮೂರ್ತಿ 40. ಛಂದೋತ್ಸವ / ಲೇ : ವೆಂಕಟರೆಡ್ಡಿ ರಾಮರೆಡ್ಡಿ