
ದುಗ್ಗೇನಹಳ್ಳಿ ಸಿದ್ದೇಶ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶೇಷಾದ್ರಿಪುರಂ ಕಾಲೇಜು, ತುಮಕೂರು
ನಾನು ಕನ್ನಡ ಎಂ.ಎ ಗೆ ಸೇರಿದ್ದೇ ರೋಚಕ. ಪ್ರತೀ ವರ್ಷ ತುಮಕೂರು ವಿಶ್ವವಿದ್ಯಾನಿಲಯ ಒಂದೊಂದು ವಿಷಯಕ್ಕೆ ೪೦ ಸೀಟುಗಳು ಹಂಚಿಕೆ ಮಾಡುತ್ತಿತ್ತು. ನನ್ನ ದುರಂತವೋ ಏನೋ ಆ ವರ್ಷ ಏಕಾ ಏಕಿ ೨೦ ಸೀಟುಗಳನ್ನು ಕಡಿತಗೊಳಿಸಿತು. ನಾನು ಕೌನ್ಸಲಿಂಗ್ ಗೆ ಹೋದೆ. ನನ್ನ ಮೇಲಿನವರೆಗೆ ಸೀಟು ಹಂಚಿಕೆಯಾಗಿ ಅಲ್ಲಿಗೆ ನಿಂತಿತು. ನನ್ನ ಹಾಗೆ ಸೀಟುವಂಚಿತರಾದ ಅನೇಕ ವಿದ್ಯಾರ್ಥಿಗಳೆಲ್ಲಾ ಒಟ್ಟಿಗೆ ಸೇರಿ ಮುಷ್ಕರ ಹೂಡಿದೆವು. ಅದು ಅತಿರೇಕಕ್ಕೆ ಹೋಗಿ ಕೆಲವರು ಪೋಲೀಸಿನವರಿಂದ ಲಾಠಿ ಏಟು ತಿಂದರು. ನನಗೆ ಸೀಟು ಸಿಗಲಿಲ್ಲವಲ್ಲ ಎಂಬ ಬೇಜಾರಿನಿಂದ ಮುಷ್ಕರದಲ್ಲಿ ಭಾಗವಹಿಸದೆ ನಾನು ಆಚೆ ಬಂದೆ. ಈ ಕಾರಣದಿಂದಾಗಿ ಪೋಲೀಸಿನವರಿಂದ ಹೊಡೆತ ತಪ್ಪಿಸಿಕೊಂಡಿದ್ದೆ.
ನನ್ನ ಕನ್ನಡ ಎಂ.ಎ. ಕನಸು ಭಗ್ನವಾಗಿ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದೆ. ಎರಡು ತಿಂಗಳ ನಂತರ ನನ್ನ ಗೆಳೆಯ ರಾಜಶೇಖರ ಪೋನ್ ಮಾಡಿದ. ನಿನಗೆ ಕನ್ನಡ ಎಂ.ಎ. ಸೀಟು ಹಂಚಿಕೆಯಾಗಿ ಬೋರ್ಡಿನಲ್ಲಿ ಹಾಕಿದ್ದಾರೆ. ನಾಳೆ ಅಡ್ಮಿಶನ್ ಆಗಬೇಕಂತೆ ಇಲ್ಲ ಅಂದರೆ ಮತ್ತೆ ಅಡ್ಮಿಶನ್ ಕೊಡಲ್ವಂತೆ. ಇವತ್ತು ನಾನೇ ನಿನ್ನ ಫೀಜ್ ಕಟ್ಟಿದಿನಿ ನಾಳೆ ಬಂದು ಮಾರ್ಕ್ಸ್ ಕಾರ್ಡ್ ಕೊಟ್ಟು ಪರಿಶೀಲನೆ ಮಾಡಿಸಿಕೋ ಎಂದು ಹೇಳಿದ. ದಿಢೀರ್ ಎಂದು ಬಂದ ಈ ಸುದ್ಧಿ ನನಗೆ ಮತ್ತೆ ಓದಲು ಉತ್ಸಾಹ ಮೂಡಿಸಿತು.
ನಾನು ನನ್ನ ಗೆಳೆಯ ಹೇಳಿದಂತೆ ಆಫೀಸಿಗೆ ಮಾರ್ಕ್ಸ್ ಕಾರ್ಡ್ ಗಳನ್ನು ಕೊಟ್ಟು ತರಗತಿಗೆ ಹೋದೆ. ನನ್ನಂತೆ ಐದಾರು ಜನ ಹೊಸದಾಗಿ ಬಂದಿದ್ದರು. ಅರ್ಧ ಸಿಲಬಸ್ ಮುಗಿದಿತ್ತು. ತರಗತಿಗೆ ಬಂದ ಅಧ್ಯಾಪಕರು ಹಿಂದಿನದನ್ನು ನೀವೆ ಓದಿಕೊಳ್ಳಿ, ಅನುಮಾನವಿದ್ದರೆ ನಮ್ಮನ್ನು ಕೇಳಿ ಎಂದರು. ನಾವು ಆಗಲಿ ಸರ್ ಎಂದು ಹೇಳಿ ದಿನ ನಿತ್ಯ ಕಾಲೇಜಿಗೆ ತಪ್ಪಿಸಿಕೊಳ್ಳದೆ ಹೋದೆವು. ನಾನು ತುಂಬಾ ದಿನದ ನಂತರ ತರಗತಿಗಳಿಗೆ ಹೋದ ಕಾರಣವೋ ಅಥವಾ ನನ್ನ ಸೋಮಾರಿ ತನದಿಂದಾಗಿಯೋ ಮೊದಲ ತರಗತಿಗಳು ಅಷ್ಟು ರುಚಿಸಲಿಲ್ಲ. ನಂತರ ಚರ್ಚೆ ಓದು ಇವುಗಳಲ್ಲಿ ನಿಧಾನವಾಗಿ ತೆರೆದುಕೊಂಡೆ. ನನ್ನಲ್ಲಿ ಅಡಗಿದ್ದ ಕಾವ್ಯದ ಬೀಜ ಮತ್ತೆ ಮೊಳಕೆ ಹೊಡೆದು ಕುಡಿ ಇಟ್ಟಿತ್ತು. ಹೀಗೆ ನನ್ನ ಓದು ನಡೆಯುತ್ತಿತ್ತು.
ನಮಗೆ ತರಗತಿ ತೆಗೆದುಕೊಳ್ಳುವ ಅಧ್ಯಾಪಕರಲ್ಲಿ ಡಾ.ಜಿ.ಬಿ.ಹರೀಶ್ ರವರು ಒಬ್ಬರಾಗಿದ್ದರು. ಅವರು ನನ್ನ ಹಾಗೆ ಸಣಕಲು ದೇಹದ ಮೇಷ್ಟ್ರು. ಅವರ ತರಗತಿ ನಮಗೆ ಪುಲ್ ಮೀಲ್ಸ್ ಆಗಿರುತ್ತಿತ್ತು. ನಾನು ಅವರ ಪಾಠದ ಚರ್ಚೆಗಳಲ್ಲಿ ಭಾಗವಹಿಸಿ ಡಾ.ಜಿ.ಬಿ.ಹರೀಶ್ ಮೇಷ್ಟ್ರು ಜೊತೆ ಒಳ್ಳೆಯ ಆತ್ಮೀಯತೆ ಬೆಳೆಸಿಕೊಂಡಿದೆ. ಅವರ ತರಗತಿ ನನಗೆ ಮುಂಗಾರು ಇದ್ದಂತೆ. ಅವರ ವಿಸ್ತಾರವಾದ ಓದು ಆಳವಾದ ಜ್ಞಾನ ಮತ್ತಷ್ಟು ಆಪ್ತ ಎನಿಸಿದವು. ಅವರ ಜೊತೆ ಒಡನಾಟ, ಓದು, ಚರ್ಚೆ, ಬೋಧನೆ ನನ್ನಲ್ಲಿ ಹೊಸ ಹೊಳಹುಗಳನ್ನು ಹುಟ್ಟಿ ಹಾಕಿತು. ಪ್ರತೀದಿನ ಹೆಚ್ಚು ಹೆಚ್ಚು ಓದು, ಚರ್ಚೆಗಳು ನನ್ನನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿತು. ಸೆಮಿನಾರಿನಲ್ಲಿ ಪ್ರಶ್ನೆ ಮಾಡುತ್ತಿದ್ದ ನನಗೆ ಅನೇಕರ ಪರಿಚಯವಾಯಿತು.
ಡಾ.ಜಿ.ಬಿ.ಹರೀಶ್ ರವರನ್ನು ನಾವೆಲ್ಲರೂ ಹರಿ ಸರ್ ಎಂದೇ ಕರೆಯುತ್ತಿದ್ದೆವು. ಮೇಷ್ಟ್ರು ತಮ್ಮ ವಿಚಾರಗಳಿಂದಾಗಿ ತುಮಕೂರಿನಲ್ಲಿ ಬಹುಬೇಗ ಜನಪ್ರಿಯರಾದರು. ನಾವು ಅವರ ತರಗತಿಗೆ ಕಾಯುತ್ತಿದ್ದೆವು. ಅವರೆಷ್ಟು ಜನಪ್ರಿಯರಾಗಿದ್ದರು ಎಂದರೆ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು ನಾವು ಅವರ ಪಾಠ ಕೇಳಬೇಕು ಎನ್ನುತ್ತಿದ್ದರು. ನನಗೆ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು ಪರಿಚಯವಿದ್ದುದರಿಂದ ಅನೇಕರು ನನ್ನ ಬಳಿ ಬಂದು ನಾವು ಅವರ ತರಗತಿಯಲ್ಲಿ ಕೂತು ಪಾಠ ಕೇಳಬಹುದಾ ಎಂದು ಕೇಳಿದರು. ಈತರ ತರಗತಿಗಳು ಕುವೆಂಪು, ಜಿ.ಎಸ್.ಎಸ್ ತರಗತಿಗಳು ಇದ್ದವು ಎಂಬುದನ್ನು ಕೇಳಿದ್ದೆವು. ನಾನು ಬನ್ನಿ ಎಂದೆ. ನನ್ನ ಗೆಳೆಯ ದಿಲೀಪ ಹಿಂದಿನ ದಿನ ನಡೆದ ಘಟನೆಯನ್ನು ನೆನಪಿಸಿದ. ಆ ಘಟನೆ ಹೀಗಿತ್ತು. ನಮ್ಮ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಬಂದು ಕೂತಿದ್ದ. ಅವನು ಬೆಂಗಳೂರು ವಿವಿಯ ವಿದ್ಯಾರ್ಥಿ. ಅದು ನಮ್ಮ ಎಚ್ಒಡಿ ಯವರ ತರಗತಿ. ಅವರು ಅವನನ್ನು ಎದ್ದೇಳಿಸಿ ಬೈದು ನನ್ನ ಅನುಮತಿ ಇಲ್ಲದೇ ಯಾವುದೇ ತರಗತಿಗೆ ಕೂರುವ ಹಾಗಿಲ್ಲ. ನಾನೆ ಇಲ್ಲಿ ಹೆಡ್ ಎಂದು ಹೇಳಿ ಆಚೆ ಕಳಿಸಿದರು. ನಮಗೆ ಅವರ ಅದ್ಭುತ ಪಾಠ ಕೇಳಿದ್ದರಿಂದ ಒಳಗೊಳಗೆ ನಗು ಬಂದು ಎಲ್ಲರೂ ಸುಮ್ಮನಾದೆವು. ಇದನ್ನು ತಿಳಿದ ವಿದ್ಯಾರ್ಥಿಗಳು ಅವರನ್ನು ಕೇಳುವುದಿಲ್ಲ ಎಂದು ಹೊರಟು ಹೋದರು. ಹೀಗೆ ಆಗಾಗ ಅನೇಕ ಗೆಳೆಯ ಗೆಳತಿಯರು ಆಗಾಗ ತರಗತಿಗೆ ಬರಲು ವಿಚಾರಿಸುತ್ತಿದ್ದರು. ನಾವು ಎಚ್ಒಡಿಯನ್ನು ಕೇಳಬೇಕು ಎಂದೊಡನೆ ಕಾಲುಕೀಳುತ್ತಿದ್ದರು.
ಮೇಷ್ಟ್ರು ಪಾಠ ಎಂದರೆ ಅದು ನಮಗೆ ಮುಂಗಾರು ಇದ್ದಂತೆ ಎಂದು ಮೊದಲೇ ಹೇಳಿದ್ದೆ. ಕಾವ್ಯ ಮೀಮಾಂಸೆ, ಕಾವ್ಯ, ಕತೆ, ನಾಟಕ, ಕಾದಂಬರಿ, ವಿಮರ್ಶೆ, ತೌಲನಿಕ ಸಾಹಿತ್ಯ ಪ್ರಕಾರಗಳ ಬೋಧನೆ ನಮಗೆ ರಸಪಾಕ. ಅವುಗಳನ್ನು ನೋಡುವ ಅರ್ಥೈಸುವ ದೃಷ್ಟಿಕೋನ ಭಿನ್ನವಾಗಿದ್ದವು. ಅವರ ಪಾಠ ನಮಗೆ ಬರವಣಿಗೆ ಮಾಡಲು ಸ್ಪೂರ್ತಿಯಾದವು. ಸದಾ ಹೊಸ ಹೊಸದನ್ನು ಹುಟ್ಟು ಹಾಕುವ ಅವರ ಸೃಜನಶೀಲತೆ ನಮ್ಮನ್ನು ದಂಗು ಬಡಿಸುತ್ತಿದ್ದವು. ಬಹುಶಃ ಅವರ ತರಗತಿಗಳಿಗೆ ತಪ್ಪಿಸಿ ಕೊಂಡಿರುವುದು ನೆನಪಿಲ್ಲ. ಅವರು ಭಾರತೀಯ ಪಾಶ್ಚಾತ್ಯ ಕಾವ್ಯಮೀಮಾಂಸೆ ಕುರಿತು ಹೇಳುತ್ತಿದ್ದ ವಿಚಾರಗಳು ಇಂದಿಗೂ ನೆನಪಿವೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದ ಅವರಿಗೆ ತರಗತಿಗಳು ನಿರರ್ಗಳವಾಗಿರುತ್ತಿದ್ದವು. ಅವರಂತೆ ಕಾವ್ಯಮೀಮಾಂಸೆ ಪಾಠ ಮಾಡಿದವರನ್ನು ನಾನು ಕಾಣಲಿಲ್ಲ. ನಾನು ಒಬ್ಬ ಮೇಷ್ಟ್ರಾಗಿ ಹೇಳುತ್ತಿದ್ದೇನೆ ಅವರೆತ್ತರ ನಾವು ಏರಲು ಸಾಧ್ಯವಿಲ್ಲ. ನಮಗೆ ಆಗ ನಿರ್ದಿಷ್ಟ ಸಮಯವಿಲ್ಲದ ತರಗತಿಗಳು. ಅವರು ತೆಗೆದುಕೊಂಡು ಬಿಟ್ಟಾಗಲೆ ನಮಗೆ ಟೀ ಬ್ರೇಕ್. ಅದು ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ಇರುತ್ತಿತ್ತು. ಮೊದಲ ವರ್ಷ ನಮಗೆ ಇದ್ದದ್ದು ಮೂವರು ಮೇಷ್ಟ್ರು. ಎರಡನೆಯ ವರ್ಷಕ್ಕೆ ಮೇಷ್ಟ್ರು ಗಳ ಸಂಖ್ಯೆ ಹೆಚ್ಚಾಯಿತು.
ನಮಗೆ ಅವರ ತರಗತಿಗಳು ಹೇಗಾದವು ಎಂದರೆ ನಾವು ಮೇಷ್ಟ್ರು ಆಗಬೇಕು ಎಂಬ ಹೆಬ್ಬಯಕೆಗಳು ಶುರುವಾದವು. ಅವರು ದಿನಾ ಬೆಂಗಳೂರಿಂದ ತುಮಕೂರಿಗೆ ಓಡಾಟ. ಅವರಿಗೆ ಹೆಚ್ಚು ಆಯಾಸ ಉಂಟು ಮಾಡಿತು. ನಾವು ಇಲ್ಲೇ ಇದ್ದುಬಿಡಿ ಸರ್ ಎಂದು ಹೇಳಿದ್ದು ಉಂಟು. ಅವರು ಆಗಲ್ಲ ಎಂದು ಓಡಾಟ ಮುಂದುವರಿಸಿದರು. ತುಮಕೂರು ಇತ್ತ ನಗರವೂ ಅಲ್ಲ ಹಳ್ಳಿಯೂ ಅಲ್ಲ ಎಂಬಂತೆ ಇತ್ತು. ಆದರೆ ಶಿಕ್ಷಣಕ್ಕೆ ತುಂಬಾ ಚೆನ್ನಾಗಿತ್ತು. ಕುವೆಂಪು,ಬೇಂದ್ರೆ, ಅಡಿಗ, ಅಲ್ಲಮ,ಅಭಿನವ ಗುಪ್ತ, ಆನಂದ ಕುಮಾರಸ್ವಾಮಿ, ಮುಂತಾದವರ ಬಗ್ಗೆ ಅದ್ಭುತವಾಗಿ ಅವರ ವಿಚಾರಗಳನ್ನು ಮಂಡಿಸುತ್ತಿದ್ದರು. ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಅರ್ಥೈಸುವ ರೀತಿ ಅದ್ಭುತ. ಯೂಟ್ಯೂಬ್ ಲ್ಲಿ ಹುಡುಕಿದರೆ ಅವರ ಉಪನ್ಯಾಸ ಮಾಲಿಕೆಗಳು ಸಿಗುತ್ತವೆ. ನಾನು ಪೂರ ಶ್ರೀರಾಮಾಯಣ ದರ್ಶನಂ ಕಾವ್ಯ ಅವರು ಅರ್ಥೈಸಿರುವುದನ್ನು ಕೇಳಿದ್ದೇನೆ. ಭಾರತೀಯ ಸಂಸ್ಕೃತಿಯನ್ನು ಕುರಿತು ಅವರು ಮಾಡಿರುವ ಚಿಂತನೆಗಳು ಸರ್ವಕಾಲಿಕ.
ನನಗೆ ತಿಳಿದ ಮಟ್ಟಿಗೆ ಅವರು ಸೆಮಿನಾರ್ ಗಳಲ್ಲಿ ಮಾತಾಡಲು ನಿಂತರೆ ಅವರ ಮೇಲೆ ಪ್ರಶ್ನೆ ಮಾಡಲು ಮುಗಿ ಬೀಳುವುದನ್ನು ನಾನು ನೋಡಿದ್ದೇನೆ. ಅವರಿಗೆಲ್ಲ ಬೆನ್ನು ಹಾಕದೆ ಅವರು ಉತ್ತರಿಸುವುದನ್ನು ನೋಡಿದ್ದೇನೆ. ಮೇಷ್ಟ್ರು ತುಮಕೂರಿನಲ್ಲಿದ್ದಾಗ ಸಿದ್ಧಪರಂಪರೆ ಕುರಿತು ಒಂದು ಸೆಮಿನಾರ್ ಮಾಡಿದ್ದರು. ಆಗ ತುಮಕೂರಿನ ಚಿಂತಕರು ಅವರ ಹಿಂದೆ ಮುಂದೆ ಓಡಾಡುತ್ತಿದ್ದರು. ಅದೇ ಚಿಂತಕರು ಇವರ ಬಗ್ಗೆ ಟೀಕೆ ಮಾಡುವುದನ್ನು ನೋಡಿದರೆ ನನಗೆ ನಗು ಬರುತ್ತದೆ. ಕೆಲಸ ಆಗಬೇಕಾದರೆ ಎಲ್ಲದಕ್ಕೂ ಜೈ ಎನ್ನುವಂತ ಚಿಂತಕರು. ಇದಕ್ಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಬರವಣಿಗೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನನ್ನ ಮಟ್ಟಿಗೆ ಹೇಳುವುದಾದರೆ ವಿಮರ್ಶೆಯಲ್ಲಿ ಡಿ.ಆರ್. ನಾಗರಾಜ್ ನಂತರ ಗುರ್ತಿಸಬಹುದಾದ ವಿಮರ್ಶಕ ಡಾ.ಜಿ.ಬಿ.ಹರೀಶ್ ಅವರು. ಡಿ.ಎಲ್. ನರಸಿಂಹಾಚಾರ್ ಅವರಂತಹ ವಿದ್ವಾಂಸರು ನಮ್ಮ ಮೇಷ್ಟ್ರು ಡಾ.ಜಿ.ಬಿ.ಹರೀಶ್ ರವರು.
(2025ರಲ್ಲಿ ಡಾ. ಜಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನ)







