ನನ್ನೊಳಗೊಬ್ಬ ಸಂಶೋಧನಾ ವಿದ್ಯಾರ್ಥಿಯನ್ನು ಹುಟ್ಟುಹಾಕಿದ ಹರೀಶರು

ಡಾ. ಸುಧಾಕರ ಹೊಸಳ್ಳಿ

ಡಾ. ಜಿ.ಬಿ. ಹರೀಶ ಅವರಿಗೆ ಅಭಿನಂದನೆ ಎನ್ನುವುದೇ ಒಂದು ಇಂಪಾದ ಶಬ್ದದಂತೆ ಕೇಳುತ್ತಿದೆ. ಅವರನ್ನು ಅಭಿನಂದಿಸುವುದು ಎಂದರೆ ಹೊಸ ತಲೆಮಾರಿನ ಬರಹಗಾರರಿಗೆ, ಯುವ ಬರಹಗಾರರಿಗೆ, ಅದೊಂದು ಪ್ರೇರಣೆಯ ಕಾರ್ಯಾಗಾರವಿದ್ದಂತೆ. ಸಂಶೋಧಕರಿಗಂತೂ, ತಮ್ಮ ಚೌಕಟ್ಟು ಪರಾಮರ್ಶೆಗೆ, ಹಳಿ ತಪ್ಪಿದ ಆಯಾಮಗಳ ಹೊಂದಾಣಿಕೆಗೆ ಅದೊಂದು ಮಾರ್ಗಸೂಚಿ ಎಕ್ಸಿಬಿಷನ್. ನಮ್ಮದೊಂದು ಬರೆವಣಿಗೆ, ನಮ್ಮದೊಂದು ಸಾಹಿತ್ಯ, ನಮ್ಮದೊಂದು ಸಂಶೋಧನೆ ಮಾರ್ಗ ಕಟ್ಟಿಕೊಳ್ಳಲು, ಸನ್ಮಾರ್ಗ ಹಿಡಿಯಲು, ಹರೀಶರ ಸಾಹಿತ್ಯ ಸಂಶೋಧನಾ ದರ್ಶನ ಮಗನೊಬ್ಬನಿಗೆ, ಮಗಳೊಬ್ಬಳಿಗೆ, ಕೈತುತ್ತಿನೊಟ್ಟಿಗೆ ಅವ್ವ ಕಟ್ಟಿ ಕೊಡುವ ಬದುಕಿನ ಮೌಲ್ಯದ ಪಾಠ. ಹರೀಶರ ಅಭಿನಂದನಾ ಕಾರ್ಯಕ್ರಮದ ಸಭಾಂಗಣದಲ್ಲಿ ಧ್ಯಾನಸ್ಥವಾಗಿ ಕಿವಿ ಆದರೆ ಸಾಕು- ಹೊರ ಬರುವಾಗ ಕವಿಯೇ ಆಗಿಬಿಡಬಹುದು. ಹೂವಿನ ಜೊತೆ ನಾರು ಸ್ವರ್ಗ ಸೇರುವ ಒಂದು ಮಾತು ಇದೆ. ಅವರ ಜೊತೆಗೆ ನಾವು ನಾರಾಗದೆ ಹೂವಾಗಿಯೇ ಅರಳಲು ಬೇಕಾದ ಸರಕು ದೊರಕುತ್ತದೆ. ಈ ಮಾತಿನಲ್ಲಿ ಯಾವ ಸಂಶಯವೂ ಇಲ್ಲ, ಹೀಗೆ ದಾಖಲಿಸಲು ಸಂಕೋಚವೂ ಇಲ್ಲ. ಕೇಳಿರಿಮೆ ಸುಳಿಯಲು ಹರೀಶರ ಸಂಶೋಧನಾ ಪರ್ವ ಅವಕಾಶ ಮಾಡಿಕೊಡುವುದಿಲ್ಲ.

ಇತ್ತೀಚಿಗೆ ಅವರು ಪಟ್ಟಿ ಮಾಡಿದ ತಮ್ಮ ಕೃತಿಗಳ ಅಪೂರ್ಣ ಪಟ್ಟಿಯನ್ನು ನನಗೆ ಕಳಿಸಿಕೊಟ್ಟಿದ್ದರು. “ಕನ್ನಡ ಸಾಹಿತ್ಯದ ಮೊದಲ ಹೆಜ್ಜೆಗಳು ಹಾಸನದ ಕೇಶವ ಅವರು ಪ್ರಕಟಿಸಿದ್ದು 1998 ಎಂದು ಅದರಲ್ಲಿ ದಾಖಲಾಗಿದೆ”. ಅಂದರೆ ದಾಖಲಿತವಾದ ಅವರ ಮೊದಲ ಅಕ್ಷರ ಯಾತ್ರೆ. “ಮಹಾಕಾಲ ಸ್ಥಿತಿ” ಅಯೋಧ್ಯ ಪ್ರಕಾಶನ ಬೆಂಗಳೂರು 2025 ಎಂದು ಬರೆಯಲಾಗಿದೆ. ಅಂಕಿಗಳು ಹುಬ್ಬೆರಿಸುವುದಷ್ಟೇ ಅಲ್ಲ, ಅದರೊಳಗಿನ ಅಂತಃಸತ್ವ, ಓದುಗನೊಬ್ಬನ ಮನ ಮುಟ್ಟದೇ ಇರದು. ಅವರು ಬರೆದಿರುವ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಕೃತಿಯ ಬಿಡುಗಡೆ ಮೈಸೂರಿನಲ್ಲಿದ್ದಾಗ, ಪುಸ್ತಕ ಕುರಿತು ಮಾತನಾಡುವ ಅವಕಾಶ ಒದಗಿ ಬಂದಿತ್ತು. ನಾನಾಗ ‘ಸಂಶೋಧನಾ ರಕ್ಕಸ’ ಎಂದು ಬಳಸಿದ ಪದ, ಸಭೆಯಲ್ಲಿ ನಗೆಗಡಲು ಉಂಟುಮಾಡಿದರೂ, ಅವರ ಸಂಶೋಧನೆಯ ಅಗಾಧತೆಯನ್ನು ತಿಳಿಯಪಡಿಸಲು ಅದು ಅನಿವಾರ್ಯವೂ ಆಗಿತ್ತು.

ಹರೀಶರು ಒಂದು ರೀತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಇದ್ದಹಾಗೆ ಅನ್ನಲು ಹಿಂಜರಿಕೆ ಏನೂ ಇಲ್ಲ. ಅವರು ಅರ್ಥಶಾಸ್ತ್ರಜ್ಞರಾಗಿ, ಕಾನೂನು ತಜ್ಞರಾಗಿ, ಸಮಾಜ ವಿಜ್ಞಾನಿಯಾಗಿ, ತತ್ವಶಾಸ್ತ್ರದ ಪಾಂಡಿತ್ಯ, ಸಂಸ್ಕೃತದ ವಿಶೇಷ ಅಧ್ಯಯನ, ಮನಃಶಾಸ್ತ್ರಜ್ಞನಾಗಿಯೂ ಯೋಚಿಸಿದ ನಡವಳಿಕೆಗಳು ಹೇಗೆ? ಒಬ್ಬನೇ ವ್ಯಕ್ತಿ ಹಲವು ನಮೂನೆಗಳಲ್ಲಿ ಕಾರ್ಯ ಮಾಡುವುದಷ್ಟೇ ಅಲ್ಲ, ತಜ್ಞತೆಯನ್ನು  ಪಡೆಯಬಹುದೆಂಬುದನ್ನು ಅಂಬೇಡ್ಕರರು ಸಾಬೀತು ಮಾಡಿದ್ದರೋ, ಹಾಗೆಯೇ ತಾವು ಓದಿದ ವಿಷಯವಲ್ಲದೆ ಸಮಾಜ ವಿಜ್ಞಾನ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಕನ್ನಡ, ಕಾನೂನು ಅಧ್ಯಯನ, ಪಾಶ್ಚಾತ್ಯ ಸಾಹಿತ್ಯ ಅಧ್ಯಯನ ಹೀಗೆ ವಿವಿಧ ಮಗ್ಗಲುಗಳಲ್ಲಿ ಹರೀಶರು ಪರಿಣಿತಿ ಪಡೆದಿದ್ದಾರೆ. ಅವರ ಸಂಶೋಧನಾ ಮಾದರಿ ಬೆರಗು ಹುಟ್ಟಿಸುತ್ತದೆ. ಭಾಷಾ ಪ್ರೌಢಿಮೆ, ಬಹು ಭಾಷೆಗಳ ಪ್ರಾವೀಣ್ಯ, ಅವರ ಸಂಶೋಧನಾ ಪಥವನ್ನು ಸಿರಿವಂತ ಮಾಡಿವೆ.

ಪುಸ್ತಕ ಸಂಗ್ರಹ ಎನ್ನುವಾಗ ಕೈಯೊಡಲು ಸಂಕೋಚವಿಲ್ಲ, ಹುಡುಕಿ ತೆಗೆಯಲು ಹಿಂದೆ ಬೀಳುವುದಿಲ್ಲ. 20 ವರ್ಷಗಳಿಂದ ಸಂವಿಧಾನ,  ಕಾನೂನು, ರಾಜಕೀಯ ವಿಚಾರಗಳ ಕುರಿತು ಸಂಶೋಧನೆ ಮಾಡುತ್ತಿರುವ ನಾನು ಒಮ್ಮೆ ಮಾತಿಗೆ ಇಳಿದಾಗ, ನೀವು ಸಂವಿಧಾನ ರಚನೆಯ ಸಂದರ್ಭ ಡಿವಿಜಿಯವರ ಅಭಿಪ್ರಾಯವನ್ನು ಗಮನಿಸಿದ್ದೀರಾ? ಎಂದು ನನ್ನನ್ನು ಗಮನ ಸೆಳೆದರು. ಇಲ್ಲ, ನಾನು ಈ ಕ್ಷೇತ್ರ ಹೊರತುಪಡಿಸಿ ಬೇರೆ ಕಡೆ ಡೈವರ್ಟ್ ಆಗಿಲ್ಲ ಎಂದೆ. ಮರುಕ್ಷಣವೇ, ನೀವು ಡೈವರ್ಟ್ ಆಗಬೇಕೆಂದು ಹೇಳಲೇ ಇಲ್ಲ. ಅವರು ಸಂವಿಧಾನದ ಕುರಿತು ಬಹಳ ಆಳವಾದ ವಿಚಾರ ಮಂಥನ ಮಾಡಿದ್ದಾರೆ, ಅದನ್ನು ಪರಿಶೀಲಿಸುವುದು ನಿಮಗೆ ಸಹಕಾರಿಯಾಗಬಲ್ಲದು ಎಂದು ಸಹಜವಾಗಿ ಹೇಳಿ ನಿಲ್ಲಿಸಿದರು. ಕುತೂಹಲಕ್ಕಾಗಿ ಹುಬ್ಬಳ್ಳಿಯಿಂದ ಪುಸ್ತಕ ಎರವಲು ಮಾಡಿಕೊಂಡ ಮೇಲೆ, ಹರೀಶರ ಮೇಲಿನ ಗೌರವ ದ್ವಿಗುಣವಾಯಿತು. ಮೂಲವನ್ನು ಶೋಧಿಸುವ ಅವರ ಗುಣ, ಸಂಶೋಧನಾ ಲೋಕದ ಪ್ರೈಮರಿ ಎಲಿಜಿಬಿಲಿಟಿಗಳಲ್ಲಿ ಒಂದು. ಅವರ ಸಂಶೋಧನೆ ಸಾಮಯಿಕವಾಗಿ ವಿಷಯದ ಎಲ್ಲ ವಿಭಾಗಗಳನ್ನು ಪರಿಶೋಧಿಸುತ್ತದೆ. ಅದರ ಅಂತ್ಯಕ್ಕೆ ಪಡೆಯುವ ಫಲಿತಾಂಶವನ್ನೇ, ದಾಖಲಿಸುತ್ತಾ ಬಂದಿದ್ದಾರೆ.

ಇಂತಹ ಸಂಶೋಧನಾ ಮಾದರಿಯು ಅವರನ್ನು ಸಮಾಜ ಒಪ್ಪುವಂತೆ ಮಾಡಿದೆ. ಸರಿ ಇಲ್ಲದ್ದನ್ನು ಎಷ್ಟು ಗಂಟೆ ಚರ್ಚೆ ಮಾಡಿದ ನಂತರವೂ ಸೌಜನ್ಯಕ್ಕೆ ಒಪ್ಪುವ ಗುಣ ಅವರದ್ದಲ್ಲ. ಅವರು ಹೇಳಿದ್ದನ್ನ ತಪ್ಪು ಎಂದು ಆಧಾರ ಬದ್ಧವಾಗಿ ಯಾರಾದರೂ ನಿರೂಪಿಸಿದ ಎಳೆಯನನ್ನು ಒಪ್ಪುವ, ಸದ್ಗುಣಿ. ಯಾವುದೇ ಪುಸ್ತಕ ಬರೆದಾಗ ದೊಡ್ಡವರ ಬಳಿ ಅದಕ್ಕೊಂದು ಮುನ್ನುಡಿ ಬರಸಬೇಕೆಂಬ ಆಸೆ ಸಹಜ. ದೊಡ್ಡವರೆನಿಸಿಕೊಂಡವರು ತಿರಸ್ಕಾರ ಮಾಡಿಬಿಟ್ಟರೆ ಪರವಾಗಿಲ್ಲ, ಪುರಸ್ಕಾರ ಮಾಡಿ ಪುಸ್ತಕ ಪ್ರಕಟ ಮಾಡಬಹುದಾದ ಆಸಕ್ತಿಯೆಲ್ಲ ಕಮರಿಹೋದ ಮೇಲೆ, ನಾಲ್ಕಕ್ಷರ ಅರ್ಥವಾಗದ ರೀತಿ ಬರೆದುಕೊಡುವ ‘ಲಿಟರೇಚರ್ ಪಾಲಿಟಿಕ್ಸ್’ ವರ್ಣಿಸುವುದು ಅಸಾಧ್ಯ. ಆದರೆ ಹರೀಶರು ಈ ವರ್ಗಕ್ಕೆ ಸೇರಿದವರಲ್ಲ. ಓದಲು ಹಂಬಲಿಸುವವರನ್ನು, ಸಂಶೋಧನೆ ಮಾಡಲು ನಿಜ ದಾರಿ ಹುಡುಕುವವರನ್ನು ತನ್ನತ್ತ ಹತ್ತಿರಕ್ಕೆ ಎಳೆದುಕೊಳ್ಳುವ, ತಮ್ಮ ಎತ್ತರದ ರಹಸ್ಯವನ್ನು ಬಿಟ್ಟು ಕೊಡುವ ವ್ಯಕ್ತಿ. ಎರಡು ವರ್ಷಗಳಿಗೂ ಹೆಚ್ಚು ಕಾಲ ಹೆಚ್ಚು ಆಳ ಸಂಶೋಧನೆ ಮಾಡಿದ, ಹಿಂದೂ ಧರ್ಮಕ್ಕೆ, ಸಾತ್ವಿಕ ಸಮಾಜಕ್ಕೆ ಅತಿ ದೊಡ್ಡ ಅಪಾಯ ತಂದೊಡ್ಡಬಲ್ಲ, ‘ಕಾಫಿರ ತತ್ವ’ದ ಕುರಿತಾದ ನನ್ನ ಸಂಶೋಧನಾ ಕೃತಿಗೆ ಮುನ್ನುಡಿ ಕೇಳಿದಾಗ ಬೇಗ ಬರೆದು ಕೊಟ್ಟದಷ್ಟೇ ಅಲ್ಲ, ಅವರು ಬರೆದ ಮುನ್ನುಡಿಯು, ನನ್ನ ಸಂಶೋಧನೆಯನ್ನು ಆರು ತಿಂಗಳು ಮುಂದೂಡಿತು. ಇದು ಅವರ ಬರವಣಿಗೆಯ ಶಕ್ತಿ. ಅಷ್ಟೇ ಅಲ್ಲ, ಇತರರು ಸಮಾಜಕ್ಕೆ ಸಂಶೋಧನೆಯನ್ನು ತೆರೆದಿಡುವಾಗ ಕೊಡಬಹುದಾದ ಗರಿಷ್ಠ ಮೌಲ್ಯವನ್ನು ಸಂಶೋಧಿಸಿ ಕೊಡುವಂತೆ ಪ್ರೇರೇಪಿಸುವ ಗುಣ. ವ್ಯಕ್ತಿ ನಿಷ್ಠೂರ ಇಲ್ಲದಿರಬಹುದು, ಸಂಶೋಧನೆ ಮಾತ್ರ ನೇರ, ದಿಟ್ಟ ನಿರಂತರ. ಅವರು ಬರೆದ ಎಲ್ಲರಿಗೂ ಬೇಕಾದ ಅಂಬೇಡ್ಕರ್ ಕೃತಿಯಲ್ಲಿ ಡಾ. ಅಂಬೇಡ್ಕರ್ ಸಾವಿನ ಹಕೀಕತ್ ಬರೆಯುವಾಗ ತೋರಿಸಿರುವ ಅಕ್ಷರ ನಿಷ್ಠೆ ಮತ್ತು ಎದೆಗಾರಿಕೆ ಅವರ ಸಂಶೋಧನೆಯನ್ನು ದೃಢೀಕರಿಸುವ ಒಂದು ಉದಾಹರಣೆ ಅಷ್ಟೇ.

ಏನೋ ಸಾಧಿಸಿಬಿಟ್ಟಿದ್ದೇನೆ ಎಂಬ ತೋರ್ಪಡಿಕೆ ಇಲ್ಲ, ಸಾಧಿಸುವುದೇ ಅನಂತ ಎಂಬುದನ್ನು ಸಾರಿ ಸಾರಿ ಹೇಳುತ್ತಾರೆ. ವೈಯಕ್ತಿಕವಾಗಿ ಅವರ ಪರಿಚಯ ನನ್ನೊಳಗೊಬ್ಬ ಸಂಶೋಧನಾ ವಿದ್ಯಾರ್ಥಿಯನ್ನು ಹುಟ್ಟು ಹಾಕುವಲ್ಲಿ ಸಹಕಾರಿಯಾಗಿದೆ. ಅವರಿಗೆ ವಯಸ್ಸು 50 ಎಂದ ಮಾತ್ರಕ್ಕೆ 50ರ ಬರಹಗಾರ ಎಂದು ಕರೆದುಬಿಡಲು ಸಾಧ್ಯವಿಲ್ಲ. ಸಮಾಜದ ಎಲ್ಲಾ ಮಾದರಿಯ, ಎಲ್ಲ ಸಿದ್ದಾಂತಗಳ, ಎಲ್ಲ ವೈಚಾರಿಕ ಪ್ರಭೇದಗಳ ಜನಗಳ ಜೊತೆ, ವಿದ್ವಾಂಸರ ಸಂಗಡ ಸಂಬಂಧ ಇರಿಸಿಕೊಂಡಿದ್ದಾರೆ. ಸ್ನೇಹ ಬೆಳೆಸಿಕೊಂಡಿದ್ದಾರೆ, ಅವರವರ ವಿಚಾರಗಳನ್ನು ಕೇಳಿಸಿಕೊಳ್ಳುತ್ತಾರೆ. ಆದರೆ ಹೇಳಬೇಕಾದ್ದನ್ನು ಬಚ್ಚಿಟ್ಟುಕೊಳ್ಳುವ ಪ್ರವೃತ್ತಿಯಿಂದ ಹೊರತೆಯಾದವರು ಹರೀಶರು. ಸ್ನೇಹಿತರೊಬ್ಬರು ಅರುಂಧತಿ ರಾಯ್ ಅವರನ್ನು ಕನ್ನಡಕ್ಕೆ ಎಳೆದು ತರುತ್ತಿರುವಾಗ (ಅನುವಾದದ ಮೂಲಕ), ಅವರ ಹಿನ್ನೆಲೆಯ ಕಾರಣಕ್ಕಾಗಿ ನಿಮ್ಮನ್ನು ತಿರಸ್ಕರಿಸಲು ನಾನು ಹಿಂಜರಿಯುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿ ಬಿಟ್ಟ ಅವರ ನಡವಳಿಕೆ, ಅಸತ್ಯವನ್ನು ಆಪಥ್ಯವನ್ನು  ಒಪ್ಪದಿರುವ ಅವರ ಹೆಗ್ಗುರುತ್ತೇ ಆಗಿದೆ. ಇಷ್ಟರ ನಂತರವೂ ಅವರದ್ದು ವಿಷಯಾಧಾರಿತ ಕೋಪವೇ ಹೊರತು ವ್ಯಕ್ತಿಯ ಮೇಲಲ್ಲ. ಹರೀಶರ ಜೊತೆ ಬೆಸೆದುಕೊಂಡ ರಾಷ್ಟ್ರೀಯತೆ, ಐಕ್ಯತೆ, ಸ್ವಧರ್ಮದ ಚಿಂತನೆ, ನೆಲಧರ್ಮದ ಪರಂಪರೆಯ ದಾಖಲಾತಿಗಳು ಅವರ ಬಗೆಗೆ ಹೆಮ್ಮೆಯ ಭಾವ ಮೂಡಿಸಲು ಸಫಲವಾಗಿವೆ. ರಾಷ್ಟ್ರ ವಿಘಟಿಸುವ, ಭಾಷೆ, ಪ್ರಾದೇಶಿಕತೆಯ ಹೆಸರಲ್ಲಿ ಐಕ್ಯತೆಯನ್ನು ಚೂರು ಮಾಡುವ ಚಿಂತನೆಗಳಿಗೆ ಹರೀಶರ ಹತ್ತಿರ ಜಾಗ ದೊರಕಿಲ್ಲ, ದೊರಕುವುದೂ ಇಲ್ಲ ಎಂಬುದು, ಅಕ್ಕರೆಯ ಪ್ರಜ್ಞೆ.

(2025ರಲ್ಲಿ ಡಾ. ಜಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನ)