ಬ್ರಾಹ್ಮ ಕ್ಷಾತ್ರಗಳ ಪ್ರತಿನಿಧಿ

ಹರ್ಷ ಸಮೃದ್ಧ, ಲೇಖಕರು ಮತ್ತು ಪ್ರಕಾಶಕರು

ತಮ್ಮ ವ್ಯಾಪಕ ಅಧ್ಯಯನ, ಅಧ್ಯಾಪನ, ಸಂಶೋಧನಾಗಳನ್ನು ನಡೆಸುವಲ್ಲಿಯೂ ಮತ್ತು ಅವುಗಳ ಫಲಿತಾಂಶವನ್ನು ಘಂಟಾಘೋಷವಾಗಿ ಹೇಳುವಲ್ಲಿಯೂ ಡಾ ಜಿ ಬಿ ಹರೀಶ ಅವರ ಧೈರ್ಯ ಸಾಹಸಗಳು ಅಪೂರ್ವವಾದದ್ದು. ಭಾರತದ ಪರಂಪರೆ, ಇತಿಹಾಸ ಕ್ಷೇತ್ರದಲ್ಲಿ ಮಡುಗಟ್ಟಿದ ಹುಸಿ ಸಿದ್ಧಾಂತಗಳ ವಿರುದ್ಧ ಪ್ರಬಲ ವಾದ ಮಂಡಿಸಿ ಸಂಶೋಧನೆಗಳ ಮೂಲಕ ಜಾಗೃತ ಮಾಡುವ ವಿಚಾರದ ಸಾಹಿತಿ. ಅವರು ಭಾರತ ದೇಶದ ಸುವರ್ಣ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿನೂತನ ಬರೆವಣಿಗೆ ಮತ್ತು ಘಟನೆಗಳನ್ನು ಮಂಡಿಸುವ ಅವರ ವಾಕ್ ಚಾತುರ್ಯವನ್ನು ನೋಡಿ ಅನೇಕರು ನಿಬ್ಬೆರಗಾಗಿದ್ದಾರೆ ಮತ್ತು ಅಭಿಮಾನಿಗಳಾಗಿದ್ದಾರೆ.

ಡಾ. ಜಿ. ಬಿ. ಹರೀಶ ಅವರ ಸಾಹಿತ್ಯಗಳ ರಾಶಿಯಲ್ಲಿ ಅಧ್ಯಾತ್ಮ, ಕನ್ನಡ ಸಾಹಿತ್ಯ, ಅನುವಾದ, ರಾಷ್ಟ್ರೀಯ ಸಾಹಿತ್ಯ, ಸಂಶೋಧನೆ ಮತ್ತು ವಿಚಾರ ಸಾಹಿತ್ಯ ಇವುಗಳನ್ನು ಅವಲೋಕಿಸಿ ಅನೇಕ ಕೃತಿಗಳನ್ನು ಅವರದೇ ದಾಟಿಯಲ್ಲಿ ಬರೆದಿರುರುವುದು ಕಾಣುತ್ತದೆ. ಕೆಲವು ವ್ಯಕ್ತಿಗಳನ್ನು ಸಮಾಜ ಮರೆತಿರುವಾಗ, ಆಯಾ ಸಂದರ್ಭದಲ್ಲಿ ಅವರ ಬಗ್ಗೆ ಪುಸ್ತಕ ರೂಪದಲ್ಲಿಯೂ ಅಥವಾ ಲೇಖನ ರೂಪದಲ್ಲಿಯೂ ಬರೆದು ನೆನಪಿಸಿದ್ದಾರೆ.

ವೈಚಾರಿಕತೆಗೆ ಬೇಕಾದ ಪ್ರಬಲ ವಾದ ಮಂಡನೆ ಮತ್ತು ನಿಲುವುಗಳನ್ನು ಹರೀಶ ಅವರ ಕೃತಿಗಳಲ್ಲಿ ನೋಡಬಹುದು. ಸಮಾಜ ಯೋಗ ಪುಸ್ತಕವು ಹೊ.ವೆ. ಶೇಷಾದ್ರಿ ಅವರ ಮೇರುಕೃತಿಗಳಲ್ಲೊಂದು. ಜ್ಞಾನ, ಕರ್ಮ, ಭಕ್ತಿ ಮತ್ತು ರಾಜಯೋಗ ಮಾರ್ಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆ ಕುರಿತು ಬಹು ಸುಂದರವಾಗಿ ಈ ಕೃತಿಯಲ್ಲಿ ನಾವು ಕಾಣಬಹುದು. ಈ ಕೃತಿಯ ಅನುವಾದವನ್ನು ಹರೀಶ ಅವರು ಮಾಡಿದ್ದಾರೆ. ಭಾರತೀಯ ಶಿಲ್ಪಕಲೆ, ಚಿತ್ರಕಲೆ, ಸಂಗೀತ ಮತ್ತು ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಆನಂದ ಕುಮಾರಸ್ವಾಮಿಯವರ ಜೀವನ ಮತ್ತು ಕಾರ್ಯಗಳ ಕುರಿತಾದ ‘ಕಲಾಯೋಗಿ ಆನಂದ ಕುಮಾರಸ್ವಾಮಿ’ ಪುಸ್ತಕವನ್ನು ಬರೆದಿದ್ದಾರೆ. ಮೊದಲು ಈ ಪುಸ್ತಕವನ್ನು ಅಂಕಿತ ಪುಸ್ತಕ ಪ್ರಕಟಿಸಿದ್ದ ಈ ಕೃತಿಗೆ 2017ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ, ‘ಜೀವನ ಚರಿತ್ರೆ’ ವಿಭಾಗದ ಅತ್ಯುತ್ತಮ ಪುಸ್ತಕ ಬಹುಮಾನ ಪ್ರಶಸ್ತಿ ಲಭಿಸಿದೆ. ಮರು ಮುದ್ರಣವನ್ನು ವಂದೇ ಮಾತರಂ ಪ್ರಕಾಶನದ ವತಿಯಿಂದ ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಕುರಿತಾದ ಕೃತಿ ಹಿಂದೂ ಸನ್ಯಾಸಿ ಸ್ವಾಮಿ ವಿವೇಕಾನಂದ. ಈ ಕೃತಿಯಲ್ಲಿ ವಿವೇಕಾನಂದರ ವಿಚಾರಗಳು ಮತ್ತು ಸ್ವಾತಂತ್ರ ಹೋರಾಟದಲ್ಲಿ ಅವರ ಕೊಡುಗೆ ಮತ್ತು ಅವರ ಪ್ರಭಾವವನ್ನು ಬೀರುವ ವಿಚಾರಗಳನ್ನು ತಿಳಿಸಿದ್ದಾರೆ. ಇದರಂತೆಯೇ ಶ್ರೀಮಾತೆಯವರ ಕುರಿತ ಕೃತಿ, ದಯಾನಂದ ಸರಸ್ವತಿಯವರ ಕೃತಿ, ಸಾವಿನ ಸೊಬಗು ಮತ್ತು ಪುನರ್ಜನ್ಮದ ಮರ್ಮ ಈ ಕೃತಿಗಳನ್ನು ಗಮನಿಸಿದರೆ ಹರೀಶರ ವೈಚಾರಿಕತೆಯ ಆಳ ಗೋಚರವಾಗುತ್ತದೆ.

ಬೌದ್ಧ ಧರ್ಮದ ಕುರಿತು ಹರೀಶ ಅವರು ಅನೇಕ ಕೃತಿಗಳನ್ನು ಬರೆದಿದ್ದು, ಪ್ರಮುಖವಾಗಿ ಧಮ್ಮಪದ ಮತ್ತು ಬೌದ್ಧ ಧರ್ಮ ಪರಂಪರೆ ಪುಸ್ತಕಗಳು ಬುದ್ಧನ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತವೆ. ಹರೀಶ ಅವರ ವೈಚಾರಿಕ ಕೃತಿಗಳಲ್ಲಿ ಬಹುದೊಡ್ಡ ಕೊಡುಗೆಯೆಂದರೆ ಸ್ವಾತಂತ್ರ್ಯವೀರ ಸಾವರ್ಕರ್ ಕುರಿತಾದ ಕೃತಿಗಳು ಎನ್ನಬಹುದು. 2018ರಲ್ಲಿ ಪ್ರಥಮ ಬಾರಿಗೆ ಸಾವರ್ಕರ್ ಅವರ ಶ್ರೇಷ್ಠ ಕೃತಿ ‘ಹಿಂದುತ್ವ’ವನ್ನು (ಸಮೃದ್ಧ ಸಾಹಿತ್ಯ) ಕನ್ನಡಕ್ಕೆ ಅನುವಾದ ಮಾಡಿದರು. ಈ ಕೃತಿಯ ಪ್ರಭಾವ ಎಷ್ಟಾಯಿತು ಎಂದರೆ ನಾಡಿನಾದ್ಯಂತ ಸಾವರ್ಕರ್ ಅವರ ಕುರಿತಾದ ಅನೇಕ ವಿಚಾರಗಳು ಬೆಳಕಿಗೆ ಬಂದವು. ಪರ-ವಿರೋಧ ಚರ್ಚೆ, ಸಂವಾದಗಳೂ ಆರಂಭವಾದವು. ಈವರೆಗೆ ಈ ಕೃತಿಯ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದು, ಈಗಲೂ ಬಲು ಜನಪ್ರಿಯವಾಗಿದೆ. ಈ ಕೃತಿಯ ಪರಿಣಾಮ ಸಾವರ್ಕರ್ ಕುರಿತಾದ ಆಳವಾದ ಅಧ್ಯಯನ ನಾಡಿನಲ್ಲಿ ಆರಂಭವಾಯಿತು. ಸಾವರ್ಕರ್ ಕುರಿತಾದ ಅನೇಕ ಕೃತಿಗಳು ಕನ್ನಡಕ್ಕೆ ಬಂದವು. ಪ್ರಮುಖವಾಗಿ ಇತಿಹಾಸಕಾರರಾದ ಧನಂಜಯ ಕೀರ್ ಬರೆದ ವೀರ ಸಾವರ್ಕರ್ ಕೃತಿಯನ್ನೂ ಡಾ. ಜಿ. ಬಿ. ಹರೀಶ ಅವವರೇ ಕನ್ನಡಕ್ಕೆ ಅನುವಾದಿಸಿದರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಥಮವಾಗಿ ಮುದ್ರಣ ಮಾಡಿತು. ಸಾವರ್ಕರ್ ಅವರ ಸಮಗ್ರ ಸಂಪುಟಗಳ ಅನುವಾದ ಕಾರ್ಯವನ್ನು ಕನ್ನಡಕ್ಕೆ ತರುವ ಯೋಜನೆಯು ಜಿ. ಬಿ. ಹರೀಶ ಅವರ ಪ್ರಧಾನ ಸಂಪಾದಕತ್ವದಲ್ಲಿ ನಡೆಯುತ್ತಿದೆ. ಒಟ್ಟು 11 ಸಂಪುಟಗಳು ಬರಬೇಕಿದ್ದು, ಪ್ರಸ್ತುತ ಯೋಜನೆ ಚಾಲ್ತಿಯಲ್ಲಿದೆ. ಇವೆಲ್ಲದರ ಪರಿಣಾಮ ಕರ್ನಾಟಕ ವಲಯದಲ್ಲಿ ಸಾವರ್ಕರ್ ಕುರಿತಾದ ಒಂದು ಬಹುದೊಡ್ಡ ಚರ್ಚೆ ಮತ್ತು ಅಲೆ ಆರಂಭವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಅನೇಕ ಹೊಸ ವಿಚಾರಗಳನ್ನು ನಾಡಿನ ಜನರಿಗೆ ತಿಳಿಸಿದ್ದು ಹರೀಶ ಅವರ ಮತ್ತೊಂದು ಕೊಡುಗೆ. ಅವರ ಲೇಖನಗಳು ಬಹು ಪ್ರಸಿದ್ಧವಾಗಿ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ (ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ) ಎಂಬ ಪುಸ್ತಕವೂ ಪ್ರಕಟಣೆ ಆಯಿತು. ಅಂಬೇಡ್ಕರ್ ಅವರ ಮತ್ತೊಂದು ಕೃತಿ ‘ಥಾಟ್ಸ್ ಆನ್ ಪಾಕಿಸ್ತಾನ್’ ಅನುವಾದವನ್ನೂ ಕೈಗೆತ್ತಿಕೊಂಡು ಪರ‍್ಣಗೊಳಿಸಿದ್ದಾರೆ, ಸಧ್ಯದಲ್ಲೇ ಪ್ರಕಟವಾಗಲಿದೆ. ನಮ್ಮ ದೇಶದ ಅನೇಕ ಇತಿಹಾಸಕಾರರು, ದಾರ್ಶನಿಕರು, ಆಯಾ ಸಂದರ್ಭದಲ್ಲಿ ತಮ್ಮ ಲೇಖನ ಅಥವಾ ಪುಸ್ತಕದ ಮೂಲಕ ನಿಜವಾದ ಇತಿಹಾಸವನ್ನು ತಿಳಿಸಿದ ಮಹನೀಯರನ್ನು ಒಂದು ಪುಸ್ತಕದಲ್ಲಿ ಸಂಗ್ರಹಿಸಿದ ಪುಸ್ತಕವೇ ‘ಬೌದ್ಧಿಕ ಕ್ಷತ್ರಿಯರು’. ಕೃತಿಯು ಗಾತ್ರದಲ್ಲಿ ಚಿಕ್ಕದಾದರೂ ಬಹುದೊಡ್ಡ ವೈಚಾರಿಕ ಕೊಡುಗೆ ಎನ್ನಬಹುದು.

ಗಮನಿಸಬೇಕಾದ ಮತ್ತೊಂದು ಕೃತಿ ಎಂದರೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಕುರಿತಾದ ‘ಮಹಾಕಾಲ’ ಕಾದಂಬರಿ ಸರಣಿ. ಜನಪ್ರಿಯ ಧಾರಾವಾಹಿಯಾಗಿ ಎರಡು ವರ್ಷಕ್ಕಿಂತ ಹೆಚ್ಚು ಸಮಯದಿಂದ ‘ವಿಕ್ರಮ’ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಕಾದಂಬರಿಯು ಮೂರು ಪುಸ್ತಕಗಳಾಗಿ ಪ್ರಕಟವಾಗಲಿದೆ. ಈಗಾಗಲೆ ‘ಮಹಾಕಾಲ-ಸೃಷ್ಟಿ’, ‘ಮಹಾಕಾಲ-ಸ್ಥಿತಿ’ ಪುಸ್ತಕವಾಗಿ ಅಪಾರ ಜನಪ್ರಿಯತೆಯನ್ನು ಕಂಡಿದೆ. ಮೂರನೇ ಭಾಗವಾದ ‘ಮಹಾಕಾಲ-ಬಯಲು’ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದ್ದು, ಅದನ್ನೂ ಪುಸ್ತಕವಾಗಿ ಹೊರತರುವ ಕಾರ್ಯವನ್ನು ಅಯೋಧ್ಯಾ ಪ್ರಕಾಶನ ಮಾಡುತ್ತಿದೆ. ನೇತಾಜಿ ಸುಭಾಷ್‌ಚಂದ್ರ ಬೋಸರ ಕುರಿತ ಸಂಶೋಧನಾತ್ಮಕ ಕಾದಂಬರಿಯಾಗಿ ಇದು ರೂಪಗೊಂಡಿದೆ. ನೇತಾಜಿ ಅವರ ಕುರಿತಾದ ಅನೇಕ ಹೊಸ ವಿಚಾರಗಳನ್ನು ಮತ್ತು ಅವರ ‘ಮರಣ’ ಮರಣವೇ ಅಥವಾ ಇಲ್ಲವೇ ಎಂಬುವುದರ ಸುತ್ತಲೂ ಕುತೂಹಲಕಾರಿಯಾಗಿ ಸಂಚರಿಸುತ್ತದೆ. ಇದು ಕನ್ನಡದಲ್ಲಿಪ್ರಕಟವಾಗುತ್ತಿರುವ ಮೊದಲ ತ್ರಿವಳಿ ರೂಪದ ಕಾದಂಬರಿ.

ವಿಚಾರ ಸಾಹಿತ್ಯ-2020 ಎಂಬುವ ಕೃತಿಯನ್ನು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಹರೀಶ ಅವರ ಸಂಪಾದಕತ್ವದಲ್ಲಿ ವೈಚಾರಿಕ ಸಾಹಿತ್ಯದ ಕುರಿತು ಅನೇಕ ಮಹನೀಯರ ಲೇಖನಗಳನ್ನು ಈ ಕೃತಿಯಲ್ಲಿ ಕಾಣಬಹುದು. ಹೀಗೆ ಹರೀಶ ಅವರ ವೈಚಾರಿಕ ವಲಯದ ಆಳ ಮತ್ತು ಅಗಲ ವಿಸ್ತಾರವಾಗಿದೆ. ಕನ್ನಡ ನೆಲದಲ್ಲಿ ವೈಚಾರಿಕ ಅಲೆ ಸೃಷ್ಟಿಸಲು ಹರೀಶರ ಕೃತಿಗಳು ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು. ಬೌದ್ಧಿಕ ಕ್ಷತ್ರಿಯರಾಗಿ, ಸರಸ್ವತಿ ಸುಪುತ್ರರಾಗಿ ಹರೀಶ ಅವರು ಸಾಹಿತ್ಯ ವಲಯದಲ್ಲಿ ಒಂದು ಪ್ರಮುಖ ಸ್ಥಾನ ಪಡೆದಿದ್ದಾರೆ. ಹರೀಶ ಅವರ ನೂರಾರು ಕೃತಿಗಳಲ್ಲಿ ವೈಚಾರಿಕ ಸಾಹಿತ್ಯದ ಕೃತಿಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಾಗ್ದೇವಿಯ ಪುತ್ರ

ಹರೀಶರು ಸಾಹಿತ್ಯ ಕರ‍್ಯದ ಜೊತೆಗೆ ಅವರ ವಾಕ್ಚಾತುರ್ಯದ ಮೂಲಕವೂ ಪ್ರಸಿದ್ಧರು. ಭಾಷಣಕ್ಕೆ ಆಯ್ಕೆ ಮಾಡಿಕೊಳ್ಳುವ ವಿಷಯದ ಜೊತೆಗೆ, ಅದನ್ನು ಪ್ರಸಕ್ತ ಸನ್ನಿವೇಶಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ರೀತಿ ಅನೇಕರನ್ನು ಮಂತ್ರಮುಗ್ಧವಾಗಿಸುತ್ತದೆ. ಒಂದು ವಿಷಯದ ಸುತ್ತಲಿನ ಅನೇಕ ಅಂಶಗಳನ್ನು ಸುಂದರವಾಗಿ ಪೋಣಿಸಿ ಅದಕ್ಕೊಂದು ರೂಪ ಕೊಡುವ ಕೌಶಲ ಅವರಿಗೆ ಸಿದ್ಧಿಸಿದೆ. ಅವರ ಅನೇಕ ಉಪನ್ಯಾಸಗಳು ಮತ್ತು ಭಾಷಣಗಳು ಅನೇಕರಿಗೆ ದಾರಿದೀಪವಾಗಿದೆ ಮತ್ತು ಕೆಲವರಿಗೆ ಸ್ಪೂರ್ತಿದಾಯಕವಾಗಿ ಹೊರಹೊಮ್ಮಿರುವುದು ಕಾಣಬಹುದು. ಅಂದಾಜಿನ ಪ್ರಕಾರ ಈವರೆಗೆ 2000ಕ್ಕೂ ಹೆಚ್ಚು ಉಪನ್ಯಾಸ ಮತ್ತು ಭಾಷಣಗಳನ್ನು ನೀಡಿದ್ದಾರೆ. ಹರೀಶರ ಭಾಷಣ ಕೇಳಲೆಂದೇ ಬರುವ ಶ್ರೋತ್ರುವರ್ಗ ಒಂದು ಇದೆ. ಹರೀಶರ ಉಪನ್ಯಾಸ ಮತ್ತು ಭಾಷಣವಿದೆ ಎಂದು ಪತ್ರಿಕೆಗಳಲ್ಲಿ, ಜಾಲತಾಣದಲ್ಲಿ ವಿಷಯ ತಿಳಿದರೆ ಆಗಮಿಸುವ ಅನೇಕ ಸಹೃದಯರಿದ್ದಾರೆ. ವಿಶೇಷವಾಗಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಗಮಕ ವ್ಯಾಖ್ಯಾನ. ಈಗಲೂ ಕುಪ್ಪಳಿಯಲ್ಲಿರುವ ಕುವೆಂಪು ಅವರ ಮನೆಯಲ್ಲಿ ಪ್ರತಿದಿನ ಆರಂಭವಾಗುವ ವ್ಯಾಖ್ಯಾನವನ್ನು ಹರೀಶ ಅವರ ಧ್ವನಿಯಲ್ಲಿ ಕೇಳಬಹುದು. ಈ ಗಮಕ ಮತ್ತು ವ್ಯಾಖ್ಯಾನವನ್ನು ಲಹರಿ ಸಂಸ್ಥೆಯು ಹೊರತಂದಿದ್ದು, ಅನೇಕರು ಹರೀಶ ಅವರನ್ನು ಓರ್ವ ಸಂಗೀತ ವಿದ್ವಾಂಸರೆಂದು ತಿಳಿದಿದ್ದಾರೆ. ಬಹುಶಃ ಈಗಲೂ ಕೆಲವೊಮ್ಮೆ ಜಾಲತಾಣದಲ್ಲಿ ಜಿ.ಬಿ. ಹರೀಶ ಎಂದು ಹುಡುಕಿದರೆ ಸಂಗೀತ ವಿದ್ವಾಂಸರೆಂದು ತೋರಿಸುತ್ತದೆ.

ದ. ರಾ. ಬೇಂದ್ರೆ ಅವರ ಕುರಿತು ಉದಯಭಾನು ಕಲಾಸಂಘದಲ್ಲಿ ನೀಡಿದ ಭಾಷಣ ಬಹಳ ಮೆಚ್ಚಗೆಗೆ ಪಾತ್ರವಾಗಿದೆ. ಬೇಂದ್ರೆಯವರ ನಾಕುತಂತಿ ಕೃತಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಬೆಂಗಳೂರಿನ ಅಖಿಲ ಭಾರತೀಯ ಸಆಹಿತ್ಯ ಪರಿಷದ್ ಘಟಕವು ವರ್ಷಪೂರ್ತಿ ಹಮ್ಮಿಕೊಂಡಿರುವ ‘ನಾಕುತಂತಿ ಷಷ್ಠಿಪೂರ್ತಿ’ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು 4-5 ಕವಿತೆಗಳ ವ್ಯಾಖ್ಯಾನ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮವೂ ಬಹಳ ಪ್ರಸಿದ್ಧವಾಗಿದೆ. ಡಿವಿಜಿ ಅವರ ಕುರಿತಾದ ಶ್ರೀರಾಮ ಪರೀಕ್ಷಣಂ ಉಪನ್ಯಾಸ ಗಮನೀಯವಾದದ್ದು. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕುರಿತು ಪ್ರತಿಷ್ಠಿತ ಗೋಖಲೆ ಸಾರ್ವಜನಿಕ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಡಾ. ಎಸ್.ಎಲ್. ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕೃತಿಯ 50ನೇ ವರ್ಷಾಚಣೆಯ ಸಂದರ್ಭದಲ್ಲಿ ಸಮೃದ್ಧ ಸಾಹಿತ್ಯದಿಂದ ಅಯೋಜಿಸಿದ ಒಂದು ದಿನದ ಕಾರ್ಯಕ್ರದಲ್ಲಿ ಹರೀಶರ ಭಾಷಣವನ್ನು ಸ್ವತಹ ಭೈರಪ್ಪನವರೇ ಮೆಚ್ಚಿದ್ದರು.

ಸಾಹಿತ್ಯ ಉಪಾನ್ಯಾಸದ ಜೊತೆಗೆ ರಾಷ್ಟ್ರೀಯ ಮತ್ತು ಭಾರತೀಯತೆ ಕುರಿತಂತೆ ಉಪನ್ಯಾಸಗಳು ಹರೀಶರ ಅಧ್ಯಯನದ ಅಗಾಧತೆಯನ್ನು ತಿಳಿಸುತ್ತವೆ. ವೀರ ಸಾವರ್ಕರ್ ಕುರಿತಂತೆ ಅನೇಕ ವೇದಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳ ಜಾಲತಾಣದಲ್ಲಿ ಈಗಲೂ ಮಾತನಾಡುತ್ತಿರುತ್ತಾರೆ. ಸಾವರ್ಕರ್ ಕುರಿತಾದಂತಹ ವಿಮರ್ಶೆ ಮತ್ತು ತೌಲನಿಕ ಅಧ್ಯಯನ ವಿಚಾರಗಳು ಕುರಿತ ಯುಟ್ಯೂಬ್‌ನಲ್ಲಿ ಅನೇಕ ಸಿಗುತ್ತವೆ. ಮೂರು ದಿನ ಸತತವಾಗಿ ಲೋಹಿಯಾ, ಅಂಬೇಡ್ಕರ್ ಮತ್ತು ಹೆಡಗೆವಾರ್ ಅವರ ಕುರಿತಾಗಿ ವಿಶೇಷ ಉಪನ್ಯಾಸವನ್ನು ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ನೀಡಿದ್ದಾರೆ. ಪ್ರತಿಷ್ಠಿತ ಸಂಸ್ಥೆಯಾದ ದಿ ಮಿಥಿಕ್ ಸೊಸೈಟಿಯಲ್ಲಿ ಅನೇಕ ಉಪನ್ಯಾಸಗಳಲ್ಲಿ, ನೇತಾಜಿ ಕುರಿತಾ ವಿಚಾರ ಸಂಕಿರಣದಲ್ಲಿ, ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ. ಆರ್ಯ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ದಯಾನಂದ ಸರಸ್ವತಿ, ವೇದ, ತಂತ್ರದ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಅವರ ಬಹು ಮೆಚ್ಚುಗೆಯ ವಿಷಯವಾದ ತಂತ್ರಸ್ತç, ಜೈನ, ಬೌದ್ಧ, ವೈದಿಕಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಆನಂದ ಕುಮಾರಸ್ವಾಮಿ, ಅಭಿನವ ಗುಪ್ತ ವಿಷಯಗಳ ಕುರಿತು ಸ್ಟಡಿ ಸರ್ಕಲ್ ಮಾಡಿ ಒಂದು ವರ್ಷ ಪೂರ್ತಿ ನಡೆಸಿದ್ದಾರೆ.

ಬೆಂಗಳೂರಿನ ಆಚೆಗೂ ಹರೀಶರ ಪ್ರಭಾವವಲಯವಿದೆ. ವೈಚಾರಿಕತೆ, ಸಂಸ್ಕೃತಿ ಮತ್ತು ಧರ್ಮದ ಕುರಿತಂತೆ ನಾಡಿನಾದ್ಯಂತ ಅನೇಕ ಊರುಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ನಾಡಿನ ಅನೇಕ ಸುದ್ದಿ ವಾಹಿನಿಗಳಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ್ದಾರೆ. ಅನೇಕ ಹೊರ ರಾಜ್ಯದಲ್ಲಿಯೂ, ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಆನ್‌ಲೈನ್ ಉಪನ್ಯಾಸವನ್ನು ನೀಡಿದ್ದಾರೆ. ಭಾಷಣ ಕಲೆಯ ಕುರಿತಾಗಿಯೇ ಒಂದು ಕೃತಿಯನ್ನು ಸಹ ಹರೀಶ ಅವರು ರಚಿಸಿದ್ದಾರೆ.

ವಿಷಯಗಳನ್ನು ಭಾಷಣಗಳ ಚೌಕಟ್ಟಿನಿಂದ ಆಚೆಗೂ ಕೊಂಡೊಯ್ದಿರುವ ಹರೀಶ ಅವರು ಅನೇಕ ವಿಚಾರಗಳನ್ನು ಆನ್‌ಲೈನ್ ತರಗತಿಗಳ ಮೂಲಕ ಹಂಚಿಕೊಳ್ಳುತ್ತಾರೆ. ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಾರತೀಯ ಇತಿಹಾಸದ ಅನೇಕ ಮಜಲುಗಳು, ಸಾಹಿತ್ಯ, ತಂತ್ರ… ಇತ್ಯಾದಿ ವಿಚಾರಗಳಲ್ಲಿ ಸೀಮಿತ ಅವಧಿಯ ತರಗತಿಗಳನ್ನು ತಮ್ಮ ‘ವಂದೇ ಮಾತರಂ ಪಾಠಶಾಲಾ’ ಮೂಲಕ ನಡೆಸುತ್ತಿದ್ದಾರೆ. ಸಾಹಿತಿಗಳಾದವರಿಗೆ ಭಾಷಣ ಕಲೆ ಸಿದ್ಧಿಸಿರುವ ವಿರಳ ವ್ಯಕ್ತಿಗಳಲ್ಲಿ ಹರೀಶ ಅವರೂ ಒಬ್ಬರು. ತಮ್ಮ ಮೆಚ್ಚಿನ ಪ್ರಕಾರಗಳೊಂದಾದ ಕವಿತೆ ರಚನೆಯಲ್ಲಿ ಹೆಚ್ಚು ತೊಡಗಲು ಆಗದೇ ಇದ್ದರೂ ಆಗಾಗ ಕವಿತೆಗಳನ್ನು ರಚಿಸಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಣೆಗೆ ಕಳಿಸುತ್ತಿರುತ್ತಾರೆ. ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಸರಸ್ವತಿ ಕುರಿತಾದ ಕವಿತೆಯಲ್ಲಿ ಬೇಂದ್ರೆಯವರ ಛಾಪು ಕಾಣುತ್ತದೆ. ಹೀಗೆ ಹರೀಶರು ಕವಿಯಾಗಿ, ಸಾಹಿತಿಯಾಗಿ, ವಾಗ್ಮಿಯಾಗಿ, ಸಂಶೋಧಕರಾಗಿ, ಇತಿಹಾಸಕಾರರಾಗಿ, ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಸಹೃದಯಿಯಾಗಿ ನಮ್ಮನ್ನೆಲ್ಲಾ ಆವರಿಸಿದ್ದಾರೆ. ಬ್ರಾಹ್ಮ ಕ್ಷಾತ್ರಗಳ ಪ್ರತಿನಿಧಿ ಅಗಿದ್ದಾರೆ. ಅವರಿಗೆ ಐವತ್ತು ತುಂಬಿದೆ, ಅವರ ಸಾಹಿತ್ಯ 100 ತುಂಬಿದೆ. ಹರೀಶರ ವಯಸ್ಸು ಮತ್ತು ಸಾಹಿತ್ಯ ಇನ್ನೂ ಹೆಚ್ಚಾಗಿ ಬೆಳೆಯಲಿ ಎಂದು ಆಶಿಸುವೆ.

(2025ರಲ್ಲಿ ಡಾ. ಜಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನ)