
ವಿಜಯ್ ಭರ್ತೂರು, ಕವಿ, ಲೇಖಕ
ಕನ್ನಡದ ಹಾಗೂ ಸಾಹಿತ್ಯದ ಮೇಲಿನ ಪ್ರೀತಿಯಿಂದ ತೊಡಗಿಕೊಂಡು ತಮ್ಮದೇ ಆದ ಛಾಪು ಮೂಡಿಸಿರುವವರು ಅನೇಕರು. ಸರ್ಜನಶೀಲ ಸಾಹಿತ್ಯವಲ್ಲದೆ ಸಂಶೋಧನೆ, ಇತಿಹಾಸ, ಶಾಸ್ತ್ರ, ವಿಮರ್ಶೆಗಳಂತಹ ಬುದ್ಧಿಗಮ್ಯವೂ ವಿಚಾರಪರವೂ ಆದ ಪ್ರಕಾರಗಳಲ್ಲಿ ತೊಡಗಿಕೊಂಡು ಗಂಭೀರ ಅಧ್ಯಯನವನ್ನು ನಡೆಸಿ ಅದನ್ನು ಪ್ರಖರ ನುಡಿಗಳಲ್ಲಿ ಹಿಡಿದಿಡಬಲ್ಲ ವಾಗ್ಮಿಗಳು ವಿರಳ. ಅಂತಹವರಲ್ಲೊಬ್ಬರು ಡಾ. ಜಿ. ಬಿ. ಹರೀಶ. ದಿ ಮಿಥಿಕ್ ಸೊಸೈಟಿಯಿಂದ ‘ಶತಮಾನದ ಕಿರಿಯ ಸಂಶೋಧಕ’ ಪುರಸ್ಕಾರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಕಿರಿಯ ವಿದ್ವಾಂಸರಿಗೆ ನೀಡುವ ‘ವಾಗ್ದೇವಿ’ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಹಾಗೂ ರಾಷ್ಟ್ರಮಟ್ಟದ ‘ಬಾದರಾಯಣ ವ್ಯಾಸ ಸಮ್ಮಾನ್’ ಪುರಸ್ಕಾರ ಪಡೆದಿರುವುದು ಅವರ ಪಾಂಡಿತ್ಯಕ್ಕೆ ಸಿಕ್ಕ ಪ್ರಭಾವಳಿಗಳು. ಈ ಪ್ರಬುದ್ಧರಿಗೆ ಈಗ (ಡಿಸೆಂಬರ್ 20) ಐವತ್ತು ತುಂಬಿರುವ ಸಂದರ್ಭದಲ್ಲಿ ಅವರೊಂದಿಗೆ ಸಂದರ್ಶನ ನಡೆಸಲಾಗಿದೆ. ಇಂದು ಹರೀಶ ಅವರು ಏನಾಗಿದ್ದಾರೋ ಅದರ ಹಿನ್ನೆಲೆಗಳು ಈ ಸಂದರ್ಶನದಲ್ಲಿ ಅನಾವರಣಗೊಂಡಿವೆ.
50 ತುಂಬಿರುವ ಈ ಸಂರ್ಭದಲ್ಲಿ ನಿಮಗೆ ಶುಭಾಶಯಗಳನ್ನು ಕೋರುತ್ತಾ ಕೆಲವು ಪ್ರಶ್ನೆಗಳೊಂದಿಗೆ ಬಂದಿದ್ದೇನೆ. ನಿಮ್ಮ ಹುಟ್ಟು, ಬಾಲ್ಯ ಹಾಗೂ ಹಿನ್ನೆಲೆಗಳ ಬಗ್ಗೆ ನೀವು ತಿಳಿದ ಹಾಗೂ ನೀವೇ ಕಂಡ ಕೆಲವು ಅಂಶಗಳನ್ನ ಹೇಳಬಹುದೇ?
ಧನ್ಯವಾದ. ನಾನು ಹುಟ್ಟಿದ್ದು ಹಾಸನದಲ್ಲಿ. ನನ್ನ ಹೆಸರಿನ ಜಿ. ಬಿ. ಯಲ್ಲಿರುವ ‘ಜಿ’ ಸೂಚಿಸುವುದು ಗ್ರಾಮ, ಅಂದರೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಅನ್ನುವ ಸ್ಥಳ. ಅದು ನನ್ನ ಅಜ್ಜ ಹಾಗೂ ಹಿಂದಿನವರು ಇದ್ದ ಊರು. ಅಲ್ಲಿನ ಶಿವನ ದೇವಾಲಯದಲ್ಲಿ ಅರ್ಚಕರಾಗಿ ಅವರು ಕೆಲಸ ಮಾಡುತ್ತಿದ್ದರು. ನನ್ನ ತಂದೆ ಬಾಲಸುಬ್ರಹ್ಮಣ್ಯ. ಹಾಸನದ ಅಂಚೆ ಇಲಾಖೆಯಲ್ಲಿ ಕೆಲಸ. ಅಮ್ಮ ಗಿರಿಜಮ್ಮ ಸಕಲೇಶಪುರದ ಕಡೆಯವರು. ಹಾಸನದ ಕೃಷ್ಣರಾಜಪುರದಲ್ಲಿ ದೊಡ್ಡ ಸೈಟಿನ ಸಣ್ಣ ಭಾಗದಲ್ಲಿದ್ದ ಪುಟ್ಟ ಹಳೆ ಮನೆಯಲ್ಲಿ ವಾಸ. ಅಜ್ಜನಿಗೆ ಅಲ್ಲಿಲ್ಲಿ ತಿರುಗಾಟದ ಹವ್ಯಾಸ. ನನ್ನನ್ನು ಹೆಚ್ಚು ಬೆಳಸಿದ್ದೇ ನನ್ನ ಅಜ್ಜಿ ಹಾಗೂ ಅಮ್ಮ. ಬಡತನದಲ್ಲಿದ್ದರೂ ಲೋಕಸಂಪರ್ಕದಲ್ಲಿ ಅವರಿಬ್ಬರೂ ಅನುಭವಿಗಳು. ಅಜ್ಜಿ ಸೀತಾಲಕ್ಷ್ಮಿಯವರ ಜೀವನ ನನ್ನ ಮೇಲೆ ಪ್ರಭಾವ ಬೀರಿದ ಮುಖ್ಯ ಅಂಶಗಳಲ್ಲೊಂದು. ಅಜ್ಜ ಶ್ರೀಕಂಠಯ್ಯ ಮನೆಯಲ್ಲಿದ್ದಾಗ ಶ್ಲೋಕಗಳನ್ನು, ವಿಶೇಷವಾಗಿ ಆದಿತ್ಯ ಹೃದಯವನ್ನು ಹೇಳಿಕೊಟ್ಟಿದ್ದರು. ಪ್ರತಿದಿನ ಮುಂದಿನ ಜಗುಲಿಯಲ್ಲಿ ಕೂತು ಪಠಿಸುತ್ತಿದ್ದುದು ನನಗೆ ನೆನಪಲ್ಲಿದೆ. ನನ್ನ ಆರಂಭಿಕ ಓದಿನ ಆಸಕ್ತಿಯೆಲ್ಲ ಅವರಿವರ ಮನೆಗೆ ಹೋಗಿ ಪತ್ರಿಕೆ, ಪುಸ್ತಕಗಳನ್ನು ಓದುವುದರಿಂದಲೇ ಪುಷ್ಠಿಗೊಂಡದ್ದು. ನಮ್ಮ ಮನೆಯ ರಸ್ತೆಯಲ್ಲೇ ಇದ್ದ ದೊಡ್ಡಪ್ಪನ ಮನೆ, ಗೆಳೆಯರ ಮನೆಗಳಿಗೆ ಭೇಟಿಯಿತ್ತು ದಿನಪತ್ರಿಕೆ, ಚಂದಮಾಮ, ಬಾಲಮಿತ್ರ, ಮಯೂರ ಮಾತ್ರವಲ್ಲದೆ ಕೆಲವು ಪುಸ್ತಕಗಳನ್ನೂ ಕೂತು ಓದುತ್ತಿದ್ದೆ. ಹೆಚ್ಚಾಗಿ ಅವು ಶ್ರೀವೈಷ್ಣವರ ಮನೆಗಳಾಗಿದ್ದು, ತಿನ್ನಲು ಕುರುಕು ತಿಂಡಿ ಮತ್ತು ಕಾಫಿ ಸೇವನೆಗಳೂ ಸಿಗುತ್ತಿದ್ದು ಬೋನಸ್. ಓದಿದ್ದು ರಾಮಕೃಷ್ಣ ವಿದ್ಯಾಲಯದಲ್ಲಿ. ನನ್ನ ಮಾತಾಮಹರಿಂದ ಬಂದ ಚಿತ್ರಕಲೆಯಿಂದಾಗಿ ಶಾಲೆಯಲ್ಲಿ ಚಿತ್ರಗಳನ್ನು ಬಿಡಿಸುವುದರಲ್ಲೂ ಫೇಮಸ್. ಓದಿನಲ್ಲಿ ಅಷ್ಟಕ್ಕಷ್ಟೇ ಇದ್ದರೂ ಕೆಲವು ವಿಷಯಗಳಲ್ಲಿ ಗ್ರಹಿಕೆ ಚೆನ್ನಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಹಾಸನದ ಪ್ರಮುಖರ ಸಂಪರ್ಕ ನನಗಾಗಿತ್ತು. ಹಾಗಾಗಿ ಅದರ ಸಾಹಿತ್ಯವೂ ನನ್ನ ಓದಿನ ತೆಕ್ಕೆಗೆ ಬಂದಿತ್ತು. ಚಿಕ್ಕಪ್ಪಂದಿರ ಆಸಕ್ತಿಯಿಂದಾಗಿ ಕ್ರಿಕೆಟ್ಟಿನಲ್ಲೂ ಒಂದಷ್ಟು ಪರಿಣಿತಿ. ಹೈಸ್ಕೂಲು ಓದಿಗೆ ಸಂತ ಜೋಸೆಫ್ ಶಾಲೆಗೆ ಸೇರಿದ ಮೇಲೆ ಬೇಸ್ ಬಾಲ್ನಂಥ ಅಪರೂಪದ ಆಟದಲ್ಲೂ ಭಾಗವಹಿಸಿದೆ. ಈ ಸಮಯದಲ್ಲೇ ಮನೆಯ ಆರ್ಥಿಕ ಪರಿಸ್ಥಿತಿ ಹಾಗೂ ಸ್ಥಳ ಸಂಕೋಚದಿಂದಾಗಿ ಹತ್ತಿರದಲ್ಲೇ ಸಣ್ಣ ರೂಮೊಂದನ್ನು ಮಾಡಿ ಅಲ್ಲಿ ನನಗಿಂತ ಕೆಳಗಿನ ತರಗತಿಯವರಿಗೆ ಟ್ಯೂಶನ್ ಮಾಡಿ ಸಂಪಾದಿಸುತ್ತಿದ್ದೆ. ಇದು ನನ್ನ ಖರ್ಚುಗಳನ್ನು ಪೂರೈಸುತ್ತಿತ್ತು. ಅದರ ಬಹಳಷ್ಟು ಪಾಲು ಪುಸ್ತಕಗಳ ಖರೀದಿಗೇ ಹೋಗುತ್ತಿತ್ತು. ಈ ಅಭ್ಯಾಸ ನನ್ನ ಸ್ನಾತಕೋತ್ತರ ಕಲಿಕೆಯವರೆಗೂ ಮುಂದುವರಿಯಿತು. ಹೀಗೆ ಒಂದಿಷ್ಟು ಪಠ್ಯೇತರ ಓದು ಹಾಗೂ ಆಟಗಳೇ ನನ್ನ ಬಾಲ್ಯವನ್ನು ತುಂಬಿರುವುದು.
ಪ್ರೌಢ ವಯಸ್ಸಿಗೆ ಬಂದ ನಂತರ ನಿಮ್ಮ ಆಸಕ್ತಿ ಹಾಗೂ ನಡೆದ ದಾರಿ ಇಂದಿನ ಸ್ಥಿತಿಗೆ ಹೇಗೆ ತಂದಿದ್ದು?
ಪ್ರೌಢಶಾಲೆಯ ನಂತರ ನಾನು ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದೆ. ಇಲ್ಲಿನ ಅನೇಕ ಬೋಧಕರು ಹಾಗೂ ಅವರ ಬೋಧನಾಶೈಲಿ ನನ್ನನ್ನು ಪ್ರಭಾವಿಸಿತು. ಪಾಶ್ಚಾತ್ಯ ಸಾಹಿತ್ಯ ಹಾಗೂ ಅಧ್ಯಾತ್ಮದ ವಿಷಯಗಳು ನನ್ನನ್ನು ಸೆಳೆದವು. ಕನ್ನಡದ ಪುಸ್ತಕಗಳನ್ನೇ ಓದುತ್ತಿದ್ದ ನಾನು ಹಿಂಜರಿಕೆ ಬಿಟ್ಟು ಇಂಗ್ಲಿಷ್ ಲೇಖಕರನ್ನು ಓದತೊಡಗಿದೆ. ನನಗರಿವಿಲ್ಲದೆ ಇಂದು ನಾವು ವಿಶ್ವಮಾನ್ಯರೆಂದು ಗುರುತಿಸುವ ಲೇಖಕರ ಪುಸ್ತಕಗಳನ್ನು ಆಯ್ಕೆಮಾಡಿಕೊಂಡು ಓದಿದೆ. ಕಾಲೇಜಿನ ಹೊರಗೂ ಅನೇಕ ಮಾರ್ಗದರ್ಶಕರು ನನಗೆ ಸಿಕ್ಕಿದ್ದು ಸುಯೋಗ. ಅಂಚೆ ಕಚೇರಿಯ ಬಾಲುರವರು, ಪ್ರವಾಸೋದ್ಯಮದ ರಾಮಸ್ವಾಮಿಯವರು ಹಾಗೂ ಆಕಾಶವಾಣಿಯ ರಘು ಅವರು, ಎಂಸಿಎಫ್ ಪ್ರಕಾಶ್ ಇವರುಗಳು ನನಗೆ ಬಹು ಮೌಲಿಕವಾದ ವಿವರ ಹಾಗೂ ಪುಸ್ತಕಗಳ ಪರಿಚಯಕ್ಕೆ ಕಾರಣರಾದರು. ಸಾಹಿತ್ಯದ ವಿಷಯಗಳಿಗೆ ನೀವು (ಈ ಸಂದರ್ಶನದ ಸಂದರ್ಶಕ ವಿಜಯ್ ಭರ್ತೂರು) ಮತ್ತು ಮಂಜುನಾಥ್ ನನಗೆ ನೆರವಾದಿರಿ. ಗ್ರಂಥಾಲಯಗಳಿಂದ ದೊಡ್ಡದೊಡ್ಡ ಆಕರ ಗ್ರಂಥಗಳನ್ನು ಕೊಡಿಸಲು ವೇಣುಗೋಪಾಲ್, ನಾಗೇಶ್ ಮೊದಲಾದವರು ನೆರವಾದರು. ಹೈಸ್ಕೂಲಿನಲ್ಲಿದ್ದ ಸಂಘಟನೆಯ ಆಸಕ್ತಿ ಹಾಗೂ ತೊಡಗುವಿಕೆ ನಿಧಾನವಾಗಿ ಕಡಿಮೆಯಾಯಿತು. ವಿದ್ಯಾರ್ಥಿ ಪರಿಷತ್ತಿನಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ರಾಷ್ಟ್ರಮಟ್ಟದ ಅಧಿವೇಶನಗಳಿಗೆ ಹೋಗುವಂತಿದ್ದ ನಾನು ಆ ದಾರಿಯಿಂದ ತಿರುಗಿ ಸಂಪೂರ್ಣ ಅಧ್ಯಯನದ ಹಾದಿಯನ್ನು ಮುಟ್ಟಿದಾಗ ಡಿಗ್ರಿಯ ಎರಡನೆ ವರ್ಷದಲ್ಲಿದ್ದೆ. ಅಯೋಧ್ಯೆಯ ಘಟನಾವಳಿಗಳ ಅನೇಕ ಹಂತಗಳಲ್ಲಿ (ರಥಯಾತ್ರೆಯೇ ಮೊದಲಾಗಿ) ಸಕ್ರಿಯವಾಗಿದ್ದ ನಾನು ನಂತರ ಹಲವು ಕಾರಣಗಳಿಂದ ಹಿಂದೆ ಸರಿದೆ.
ನನ್ನನ್ನು ಬಹುವಾಗಿ ಸೆಳೆದದ್ದು ಸಮಾಜಶಾಸ್ತ್ರ. ಉಳಿದ ವಿಷಯಗಳಲ್ಲಿ ಸರಾಸರಿಯಲ್ಲಿದ್ದ ನಾನು ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದೆ. ನನ್ನ ಆಕರ್ಷಣೆಯ ಮತ್ತೊಂದು ವಿಷಯ ಅಧ್ಯಾತ್ಮ. ಆ ದಿನಗಳಲ್ಲೂ ನಾನು ಮಾಡುತ್ತಿದ್ದ ಖಾಸಗಿ ಟ್ಯೂಶನ್ ಮುಂದುವರಿದಿದ್ದು ಅದರ ಸಂಪಾದನೆಯಲ್ಲಿ ದೊಡ್ಡ ಹೊತ್ತಗೆಗಳನ್ನು ಕೊಳ್ಳುತ್ತಿದ್ದೆ. ಹಾಸನದಲ್ಲಿ ಅವು ದುರ್ಲಭವಾದುದರಿಂದ ತಿಂಗಳಿಗೊಮ್ಮೆ ಬೆಂಗಳೂರಿನ ಅವೆನ್ಯೂ ರಸ್ತೆಗೆ ಭೇಟಿಯಿತ್ತು ಇಡೀ ದಿನ ಓಡಾಡಿ, ಕೊಂಡು ಹಿಂತಿರುಗುತ್ತಿದ್ದೆ. ಪಿಯುಸಿ ನಂತರ ಅನೇಕರು ಬೇಡವೆಂದರೂ ನಾನು ಕಲಾವಿಭಾಗವನ್ನು ಆರಿಸಿಕೊಂಡೆ. ವ್ಯಾವಹಾರಿಕವಾಗಿ ಇದು ಉತ್ತಮ ಆಯ್ಕೆಯಲ್ಲದಿದ್ದರೂ ನನ್ನ ದಾರಿಯನ್ನು ನಾನು ಸ್ಪಷ್ಟಪಡಿಸಿಕೊಂಡಿದ್ದೆ ಎನ್ನಿಸುತ್ತದೆ. ಇವುಗಳೊಡನೆ ಹಾಸನದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅಷ್ಟಾವಧಾನ, ಗಮಕ, ಉಪನ್ಯಾಸಗಳು, ರಾಮೋತ್ಸವ ಹಾಗೂ ಗಣೇಶೋತ್ಸವಗಳಲ್ಲಿ ಬೆಳೆದೆ. ಅದೇನೋ ನನಗರಿವಿಲ್ಲದೆ ಹಿಂದಿ ಭಾಷೆಯೂ ನನ್ನ ಕೈಹಿಡಿಯಿತು. ಹಿಂದಿಯ ದೊಡ್ಡ ಸಾಹಿತಿಗಳ ಪುಸ್ತಕಗಳನ್ನೂ ಓದುತ್ತಾ ಆಕಾಶವಾಣಿಗೆ ಹಿಂದಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಕೊಡುವ ಮಟ್ಟಿಗೆ ಕುಶಲತೆ ಬೆಳೆಯಿತು. ಮನೆಮನೆ ಕವಿಗೋಷ್ಠಿ, ಮನೆಮನೆ ಗಮಕಗೋಷ್ಠಿಗಳಲ್ಲಿ ಪಾಲ್ಗೊಂಡೆ. ಗಮಕ ವ್ಯಾಖ್ಯಾನವನ್ನೂ ಆರಂಭಿಸಿ ಹತ್ತಿರದ ಅನೇಕ ಊರುಗಳಲ್ಲಿ ಕಾರ್ಯಕ್ರಮವಿತ್ತೆ. ಕನ್ನಡ ಸಾಹಿತ್ಯ ಕುರಿತು ಉಪನ್ಯಾಸಗಳನ್ನು ನೀಡುವುದೂ ಶುರುವಾಯಿತು. ಹೀಗೆ ಹಾಸನದಲ್ಲಿ ಬಿ.ಎ. ಮುಗಿಸಿದೆ.
ಇದಾದ ಮೇಲೆ ನೀವು ಕನ್ನಡದಲ್ಲಿ ಎಂ.ಎ. ಹಾಗೂ ಜೈನಾಲಜಿಯ ವಿಭಾಗದಿಂದ ಪಿಹೆಚ್.ಡಿ ಪಡೆದಿರಿ. ಆಮೇಲೆ ಎಂ.ಬಿ.ಎ. ಕೂಡ ಮಾಡಿದಿರಿ. ಹೇಗೆ ಈ ಕವಲುದಾರಿಗಳು ಬಂದದ್ದು?
ಹೌದು. ಸಮಾಜಶಾಸ್ತ್ರ ನನ್ನ ಇಷ್ಟದ ವಿಷಯವಾದ್ರೂ ಅದರಲ್ಲಿ ಎಂ.ಎ. ಮಾಡೋದಕ್ಕೆ ಮೈಸೂರಿಗೆ ಹೋಗಬೇಕಿತ್ತು. ಅವತ್ತಿನ ಕೆಲ ಕಾರಣಗಳಿಂದ ನನಗೆ ಅದು ಕಷ್ಟಸಾಧ್ಯವಾಗಿತ್ತು. ಅದೇ ಸಮಯದಲ್ಲಿ ಹಾಸನದಲ್ಲಿ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ತೆರೆದಿತ್ತು. ನಮ್ಮ ಮನೆಗೆ ಹತ್ತಿರದಲ್ಲೇ ಕೂಡ ಇತ್ತು. ಇದರ ಸೌಲಭ್ಯ ಬಳಸಿಕೊಂಡು ನಾನು ನನ್ನ ಮತ್ತೊಂದು ಆದ್ಯತೆಯಾದ ಕನ್ನಡ ಎಂ.ಎ.ಗೆ ಸೇರಿಕೊಂಡೆ. ಈಗಾಗಲೇ ಸಾಹಿತ್ಯವನ್ನು ಸಾಕಷ್ಟು ಓದಿ ತಿಳಿದದ್ದನ್ನು ಅಲ್ಲಿನ ಪ್ರಾದ್ಯಾಪಕರು ಗಮನಿಸಿದರು. ಎಷ್ಟರಮಟ್ಟಿಗೆ ಎಂದರೆ ಒಂದು ವರ್ಷ ಬೇಂದ್ರೆಯವರನ್ನು ಕುರಿತು ನನ್ನ ಸಹಪಾಠಿಗಳಿಗೆ ನಾನೇ ಪಾಠ ಮಾಡಲು ಅವಕಾಶ ನೀಡಿದರು. ಈ ನಿರ್ಧಾರದಿಂದ ಹೊಸ ಜಾಗಕ್ಕೆ ಹೊಂದಿಕೊಳ್ಳುವ, ಬದುಕಿನ ಏರ್ಪಾಟು ಮಾಡಿಕೊಳ್ಳುವ ಹಾಗೂ ಓಡಾಟಗಳಲ್ಲಿ ಸಮಯ ವ್ಯರ್ಥವಾಗುವುದು ತಪ್ಪಿ ಸಾಕಷ್ಟು ಓದಿನ ಸಮಯ ದೊರೆಯಿತು. ಆದರೆ ಮೈಸೂರು ನನ್ನನ್ನು ಬಿಡಲಿಲ್ಲ. ನನ್ನ ಮುಂದಿನ ಹಾದಿ ಅಲ್ಲಿಗೇ ಇತ್ತು. ಸ್ನಾತಕೋತ್ತರ ಪದವಿಯ ನಂತರ ಯುಜಿಸಿ ಪರೀಕ್ಷೆಯನ್ನೂ ಬರೆದಿದ್ದರಿಂದ ಅಲ್ಲಿ ನನಗೆ ಸಂಶೋಧನೆಗೆ ಸಹಾಯಧನವೂ ದೊರೆಯಿತು. ಆದರೆ ಆಡಳಿತಾತ್ಮಕ ಕಾರಣಗಳಿಂದ ಕನ್ನಡ ಡಾಕ್ಟರೇಟನ್ನು ಬಿಟ್ಟು ಜೈನಾಲಜಿ ಕಡೆ ಹೊರಳಬೇಕಾಯ್ತು. ಅಲ್ಲಿನ ಒಳ ವ್ಯವಸ್ಥೆಯ ದೋಷಗಳು ನನಗೆ ತಿಳಿದಿದ್ದು ಅದರಿಂದ ಪಾರಾಗಲು ಈ ನಿರ್ಧಾರ ಮಾಡಿದೆ. ನನ್ನ ಓದಿನ ಹಿನ್ನೆಲೆಯಲ್ಲಿ ಜೈನಕವಿ ದೇವಚಂದ್ರನ ‘ರಾಜಾವಳಿ ಕಥಾಸಾರ’ ಕುರಿತು ಸಂಶೋಧನೆಗೆ ಹೊರಟೆ. ಇದಕ್ಕೂ ಕೆಲವು ತಾಂತ್ರಿಕ ತೊಂದರೆಯಿದ್ದರೂ ಮೈಸೂರಿನ ಗಣೇಶಪ್ರಸಾದರ ನೆರವಿನಿಂದ ಸಾಧ್ಯವಾಯಿತು. ಜೈನಾಲಜಿಯ ಶ್ರೀ ಶುಭಚಂದ್ರರವರು ನನ್ನ ಮಾರ್ಗದರ್ಶಕರಾದರು. ನನ್ನ ಥೀಸಿಸ್ ಅನ್ನು ಹಿರಿಯ ವಿದ್ವಾಂಸರಾದ ಟಿ. ವಿ. ವೆಂಕಟಾಚಲಶಾಸ್ತ್ರಿಗಳೂ ನೋಡಿದ್ದರು. ಮೈಸೂರಿನಲ್ಲಿ ವಾಸದ ಹಾಗೂ ಊಟದ ವ್ಯವಸ್ಥೆಗಳೂ ಗಣೇಶಪ್ರಸಾದರ ನೆರವಿಂದಲೇ ದೊರಕಿತು. ಮಾನಸಗಂಗೋತ್ರಿಯ ಬೃಹತ್ ಗ್ರಂಥಾಲಯದಲ್ಲಿ ಪೂರಕ ವಿಷಯದ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿದೆ. ಶುಭಚಂದ್ರರ ಸಂಶೋಧನಾ ವಿಧಾನ ನವೋದಯದ ರೀತಿಯಲ್ಲಿದ್ದುದು ನನಗೆ ವರವೇ ಆಯಿತು. ನೂರಾರು ಬೇರೆಬೇರೆ ಬಣ್ಣಗಳ ಟಿಪ್ಪಣಿ ಕಾರ್ಡುಗಳನ್ನು ಮಾಡಿಕೊಂಡು ಓದುವಾಗಲೇ ಅದರಲ್ಲಿ ಗುರುತು ಹಾಕಿಕೊಂಡು ದಾಖಲಿಸುವ ರೀತಿ ಹಳೆಯ ಸಂಶೋಧಕರೊಡನೆ ಮಾತನಾಡಬಲ್ಲ ಗಟ್ಟಿತನ ತಂದುಕೊಟ್ಟಿತು. ಅನೇಕ ವಿದ್ವಾಂಸರ ಸಂಪರ್ಕ ದೊರೆತಿತು. ಓದುವಾಗಲೇ ನನ್ನ ಸಂಶೋಧನಾ ಲೇಖನವೊಂದು ಪ್ರಕಟವಾಗಿ ನಾನು ಬೆಳಕಿಗೂ ಬಂದೆ. ಗೆಳೆಯ ಹಾಗೂ ವಿಜ್ಞಾನಿ, ಸಂಶೋಧಕ ಎಂ.ಎಸ್. ಚೈತ್ರ ಕೂಡ ಜತೆಗೆ ಸಿಕ್ಕಿ ನನಗೆ ಶಾಸ್ತ್ರ, ಸರ್ಜನಶೀಲತೆಗಳ ಜತೆಗೇ ವಿಜ್ಞಾನಿಗಳ ಅಭ್ಯಾಸ ಕ್ರಮಗಳೂ ಪರಿಚಯವಾಗಿ ಜ್ಞಾನವಿಸ್ತಾರವಾಯಿತು. ಎಂ.ಬಿ.ಎ. ಮಾಡಿದ್ದು ಮುಂದೆ ಉದ್ಯೋಗ ಬಯಸಿದ ಅವಶ್ಯಕತೆಯಿಂದ.
ಅಂದರೆ ಮತ್ತೆ ನಿಮ್ಮ ಉದ್ಯೋಗದ ದಾರಿ ಭಿನ್ನವೇ ಆಗಿತ್ತು, ಅದು ಹೇಗಾದದ್ದು?
ಹಾ… ಅದು ಆಗಿದ್ದು ಹೀಗೆ. ನನ್ನ ಪದವಿ ಮುಗಿದ ಮೇಲೆ ನಾನು ಹಾಸನದ ಶಾಲೆಯೊಂದರಲ್ಲಿ ಕೆಲ ತಿಂಗಳು ಶಿಕ್ಷಕನಾಗಿದ್ದೆ. ಪಿಎಚ್.ಡಿ. ಮುಗಿಸುವ ಹೊತ್ತಿಗೆ ನನ್ನ ಮದುವೆ ಸಹ ಆಗಿತ್ತು. ನಾವು ಬೆಂಗಳೂರಲ್ಲಿ ಮನೆ ಮಾಡಿದ್ದೆವು. ಮಡದಿ ಗಿರಿಜಾ ಇಂಜಿನಿಯರ್. ಮೊದಲು ಇಬ್ಬರೂ ಅರಬಿಂದೋ ಕಪಾಲಿ ಸಂಸ್ಥೆಗೆ ಸೇರಿದೆವು. ಅಲ್ಲಿ ಹಸ್ತಪ್ರತಿ ಹಾಗೂ ಬರವಣಿಗೆಗಳ ತಿದ್ದುಪಡಿ ನೋಡುವುದು, ಕೆಲವು ಅನುವಾದ ಮಾಡುವುದು ಹೀಗೆ ಅನೇಕ ಕೆಲಸಗಳನ್ನು ಮಾಡಿದೆವು. ತತ್ತ್ವಶಾಸ್ತ್ರ ಹಾಗೂ ಅರವಿಂದರ ಮತ್ತು ಕಶ್ಯಪ್ ಅವರ ಬರೆಹಗಳನ್ನು ಓದುವ ಅನುಭವ ಅಲ್ಲಿ ಸಿಕ್ಕಿತು. ಕೆಲವು ತಿಂಗಳ ನಂತರ ಕ್ರೈಸ್ಟ್ ಕಾಲೇಜಿನಲ್ಲಿ ಕೆಲಸ ಸಿಕ್ಕಿತು. ಆ ಹೊತ್ತಿಗೆ ಬೆಂಗಳೂರಿನ ಸಾಹಿತ್ಯ ವಲಯದ ಅನೇಕರ ಪರಿಚಯವಾಗಿತ್ತು. ಚಿ. ಶ್ರೀನಿವಾಸರಾಜುರವರು ಹುಟ್ಟುಹಾಕಿದ್ದ ಕನ್ನಡ ಸಂಘವನ್ನು ಮುನ್ನಡೆಸುವ ಕೆಲಸವೂ ನನ್ನದಾಗಿತ್ತು. ಪಕ್ಕದಲ್ಲೇ ಇದ್ದ ಧರ್ಮಾವರಂ ಕಾಲೇಜಿನಲ್ಲಿ ಅದರ ಗ್ರಂಥಾಲಯವನ್ನು ನಾನು ಅಧ್ಯಯನಕ್ಕೆ ಬಳಸಿಕೊಂಡೆ. ಕ್ರೈಸ್ತ ಹಾಗೂ ಕ್ರೈಸ್ತೇತರ ಸಂಬಂಧಿತ ಪುಸ್ತಕಗಳು ಅಲ್ಲಿ ನನಗೆ ಓದಲು ಸಿಕ್ಕಿದವು. ಅಲ್ಲಿನ ಸೆಮಿನಾರುಗಳು ಇನ್ನಷ್ಟು ಪುಷ್ಟಿಯನ್ನು ನನಗೆ ಕೊಟ್ಟವು. ನನ್ನ ಪತ್ನಿಯ ಮಾತಿನಂತೆ ಹೆಚ್ಚಿನ ಅವಕಾಶಗಳಿಗಾಗಿ ತಾಂತ್ರಿಕ ಬರೆವಣಿಗೆಯನ್ನು ಕಲಿತು ಆ ಮೂಲಕ ಸಿಸ್ಕೋ ಸಂಸ್ಥೆಯಲ್ಲಿ ಮಾನವಿಕ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ. ಎಂ.ಬಿ.ಎ. ಕೂಡ ಆಗಲೇ ಮಾಡಿದ್ದು. ಅಲ್ಲಿನ ಕೆಲಸಗಳ ಜೊತೆಗೆ ಕನ್ನಡ ಸಂಘವನ್ನು ಹುಟ್ಟುಹಾಕಿ ಕಾರ್ಯಕ್ರಮಗಳನ್ನು ಮಾಡಿಸಿದೆ. ಇದನ್ನು ನೋಡಿ ಇನ್ಫೋಸಿಸ್ ಸೇರಿದಂತೆ ಉಳಿದ ಐಟಿ ಸಂಸ್ಥೆಗಳೂ ರಾಜ್ಯೋತ್ಸವವೇ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಕನ್ನಡೇತರ ಉದ್ಯೋಗಿಗಳಿಗೆ ಕನ್ನಡ ಕಲಿಸುವ ತರಗತಿಗಳನ್ನೂ ಮಾಡಿದೆ. ಆ ಸಮಯದಲ್ಲಿ ಸರ್ಕಾರ ಕರ್ನಾಟಕ ಜ್ಞಾನ ಆಯೋಗವನ್ನು ಆರಂಭಿಸಿತು. ಅದರ ಭಾಗವಾದ ‘ಕಣಜ’ ಯೋಜನೆಯಲ್ಲಿ ಸಂಯೋಜನಾಧಿಕಾರಿಯಾಗಿ ನೇಮಕವಾದೆ. ಕೆಲ ತಿಂಗಳಲ್ಲಿ ಹೊಸದಾಗಿ ತುಮಕೂರು ವಿಶ್ವವಿದ್ಯಾಲಯ ಆರಂಭವಾಯಿತು. ಈ ಹಿಂದೆ ನಾನು ಶೇಷಾದ್ರಿಪುರಂ ಹಾಗೂ ಎಂ.ಇ.ಎಸ್. ಕಾಲೇಜುಗಳಲ್ಲಿ ಎಂ.ಎ. ತರಗತಿಗಳಿಗೆ ನಿಯಮಿತವಾಗಿ ಬೋಧನೆ ಮಾಡುತ್ತಿದ್ದರಿಂದ ತುಮಕೂರಿನಲ್ಲೂ ಸ್ನಾತಕೋತ್ತರ ವಿಭಾಗಕ್ಕೆ ಸೇರಿದೆ. ಕೆಲ ತಿಂಗಳಲ್ಲಿ ಅಲ್ಲಿನ ಅನನುಕೂಲ ವಾತಾವರಣ ಹಾಗೂ ಬೆಂಗಳೂರಿನಿಂದ ದಿನಂಪ್ರತಿ ಓಡಾಟದ ತೊಂದರೆಯಿಂದ ಅದನ್ನು ಬಿಡಬೇಕಾಯಿತು. ಕೆಲಕಾಲ ರಾಷ್ಟ್ರೋತ್ಥಾನ ಪರಿಷತ್ತಿನ ‘ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಷನ್’ನಲ್ಲಿದ್ದೆ. ಆಮೇಲೆ ಪ್ರಜಾವಾಣಿಯಲ್ಲಿ ಕೆಲಸ. ಕೆಲ ದಿನದಲ್ಲಿ ಸಹ ಸಂಪಾದಕನಾದೆ. ರಾತ್ರಿಪಾಳಿಗಳು ಹಾಗೂ ನನ್ನ ಸಾಹಿತ್ಯಕರ್ಮ ಕುಂಠಿತವಾದ ತೊಂದರೆಗಳಿಂದ ಅದನ್ನು ಬಿಟ್ಟು ಹರಿಪ್ರಕಾಶ ಕೋಣೆಮನೆಯವರ ಒತ್ತಾಯದಿಂದ ವಿಜಯವಾಣಿಗೆ ಸಂಪಾದಕೀಯ ಸಲಹೆಗಾರನಾಗಿ ಸೇರಿದೆ. ಅದನ್ನೂ ಬಿಟ್ಟ ನಂತರ ದತ್ತಾತ್ರೇಯ ಹೊಸಬಾಳೆಯವರ ಆಹ್ವಾನದಂತೆ ಕೇಂದ್ರಸರ್ಕಾರದ ಐ.ಸಿ.ಸಿ.ಆರ್.ನ ವಿಯೆಟ್ನಾಂನಲ್ಲಿ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ’ ಪ್ರಥಮ ಕಾರ್ಯದರ್ಶಿಯಾಗಿ ನೇಮಕವಾದೆ. ಮೂರು ವರ್ಷಗಳ ಒಪ್ಪಂದವದು. ಸುಮಾರು 198 ವಿವಿಧ ರೀತಿಯ ಕಾರ್ಯಕ್ರಮಗಳನ್ನು ಅಲ್ಲಿ ಮಾಡಿದೆವು. ಭಾರತೀಯತೆ ಹಾಗೂ ನಮ್ಮತನವನ್ನು ಬಿಂಬಿಸುವ ಕಾರ್ಯಕ್ರಮಗಳು. ನೇರ ವಿಯೆಟ್ನಾಂನ ಸರ್ಕಾರದ ಜತೆ ನನ್ನ ಸಂಬಂಧವಿತ್ತು. ವಿಶೇಷವಾಗಿ ನೃತ್ಯ ಮತ್ತು ಯೋಗದ ಕಾರ್ಯಕ್ರಮಗಳು ಮುಖ್ಯವಾಗಿತ್ತು. ಬುದ್ಧಿಸಂ ಬಗ್ಗೆ ವಿಶೇಷವಾಗಿ ಕೆಲಸ ಮಾಡಿದೆ. ನಾನು ಈಗ ಬರೆಯುತ್ತಿರುವ ‘ಮಹಾಕಾಲ’ ಕಾದಂಬರಿಗೆ ವಿವರಗಳು ಹಾಗೂ ಅಧ್ಯಯನಕ್ಕೆ ಅಲ್ಲಿನ ವಾಸ್ತವ್ಯ ನನಗೆ ಪೂರಕವಾಯಿತು. ಬೌದ್ಧರ ಜತೆಗಿನ ನೇರ ಅನುಭವ ನನಗೆ ಅಲ್ಲಿನ ಬೋನಸ್. ಸಾವರ್ಕರರ ಬಗ್ಗೆ ಪುಸ್ತಕ ಬರೆದದ್ದು ಅಲ್ಲೇ. ಕನ್ನಡದ ಹಾಗೇ ಕಾಣುವ ದಕ್ಷಿಣ ಬ್ರಾಹ್ಮಿ ಲಿಪಿಯನ್ನು ಅಲ್ಲಿ ನಾನು ಹಾಗೂ ನನ್ನ ಪತ್ನಿ ಮೊದಲಿಗೆ ಗಮನಿಸಿ ಬರೆದದ್ದು ನೆನಪಿಡುವ ವಿಷಯ. ಇದು ಪತ್ರಿಕೆಯಲ್ಲೂ ಬಂದಿತು.
ಇನ್ನು ಮುಂದೆ ಹೀಗೆ ಮಾಡಬೇಕು ಅಥವಾ ಇದನ್ನು ಬರೆಯಬೇಕು ಎನ್ನುವ ಆಲೋಚನೆಗಳು ಏನಿವೆ?
ವಿಯೆಟ್ನಾಂ ಅನುಭವಗಳನ್ನು ಸಮಗ್ರವಾಗಿ ಬರೆಯಬೇಕೆಂಬ ಚಿಂತನೆಯಿದೆ. ತಂತ್ರಶಾಸ್ತ್ರವನ್ನು ಕುರಿತ ಗಟ್ಟಿ ಕೃತಿಯೊಂದನ್ನು ಬರೆಯಬೇಕೆಂದಿದೆ. ಭಾರತೀಯತೆಯನ್ನು ಕುರಿತು ಸಾಕಷ್ಟು ಬರೆದಿದ್ದೇನೆ, ಮಾತನಾಡಿದ್ದೇನೆ. ಶಂ.ಬಾ. ಜೋಷಿ, ಸೇಡಿಯಾಪು ಕೃಷ್ಣಭಟ್ಟ ಅಥವಾ ಗೋವಿಂದ ಪೈಗಳಂತೆ ಕನ್ನಡ ಹಾಗೂ ಕನ್ನಡತನವನ್ನು ಅನ್ವೇಷಿಸಿ ಬರೆಯಬೇಕು ಎಂದುಕೊಂಡಿರುವೆ.
ತುಂಬ ಸಂತೋಷ. ನಿಮ್ಮ ಹಂಬಲಗಳು ನೆರವೇರಲಿˌ ಅವು ಕನ್ನಡದ ಆಸ್ತಿಯಾಗಲಿ ಅಂತ ಆಶಿಸ್ತೇನೆ. ಮತ್ತೊಮ್ಮೆ ಶುಭಾಶಯಗಳೊಂದಿಗೆ ಧನ್ಯವಾದಗಳು. ಈ ಮಾತುಕತೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದದ್ದು. ಪುಟದ ಮಿತಿಯಿಂದಾಗಿ ಅದರ ಪ್ರಮುಖ ಅಂಶಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ. ಅನೇಕ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಿಲ್ಲ. ನಮ್ಮೆಲ್ಲರ ಜೀವನದಲ್ಲಿ ಬರುವ ಗೆಳೆಯರ, ಮಾರ್ಗದರ್ಶಕರ ನೆರವು ವರ್ತಮಾನಕ್ಕೆ ಎಷ್ಟು ಕಾರಣವಾಗಿರುತ್ತದೆ ಎಂಬುದು ಹರೀಶರ ಜೀವನದಲ್ಲೂ ಹಾಸುಹೊಕ್ಕಾಗಿರುವುದು ತಿಳಿಯುತ್ತದೆ. ಜೊತೆಗೆ ಅವರ ಗ್ರಹಿಕೆಯ ಹಾಗೂ ವಿಮರ್ಶಾ ಶಕ್ತಿಯ ಬಗ್ಗೆ ಅಭಿಮಾನ ಮೂಡುತ್ತದೆ. ಓದುವುದು ಎಷ್ಟು ಮುಖ್ಯ ಎಂದೂ ಅರಿವಾಗುತ್ತದೆ.
ಕುಟುಂಬ
‘ಗಿರಿಜಾ ರೈಕ್ವ’ ಹರೀಶರ ಮಡದಿ.(ರೈಕ್ವ ಎನ್ನುವುದು ವೇದಕಾಲದ ಋಷಿಯ ಹೆಸರು)ˌ ವೃತ್ತಿಯಲ್ಲಿ ಇಂಜಿನಿಯರ್. ಬಹುರಾಷ್ಟ್ರೀಯ ಕಂಪನಿಯ ಕೆಲಸ. ಹೊರತಾಗಿˌ ಸಾಹಿತ್ಯˌ ತತ್ವಶಾಸ್ತ್ರˌ ತಂತ್ರˌ ವಾಸ್ತುಶಿಲ್ಪˌ ಭಾರತೀಯ ಶಿಲ್ಪಕಲೆಗಳಲ್ಲಿ ಆಸಕ್ತಿ. ಅಲೆದಾಟದ ಹುಚ್ಚು. ದೇಶ ವಿದೇಶಗಳ ಸುತ್ತಾಟ ಹವ್ಯಾಸ. ಪತ್ರಿಕೆಗಳಲ್ಲಿ ಅಂಕಣಗಳೂ ಪ್ರಕಟವಾಗಿದೆ. ‘ದೇವ ಸನ್ನಿಧಿ’ ಇವರ ಇತ್ತೀಚಿನ ಪುಸ್ತಕ. ಕಾಲ್ನಡಿಗೆಯಲ್ಲಿ ಬೆಂಗಳೂರಿನ ಬಡಾವಣೆಗಳನ್ನು ಪರಿಚಯಿಸುವ ಕಾಯಕವೂ ಉಂಟು. ‘ವಿಹಾ ರೈಕ್ವ ‘ ಇವರ ಒಬ್ಬಳೇ ಮಗಳು. ಓದಿನೊಂದಿಗೆ ಕಲೆಯ ಅಭ್ಯಾಸವೂ ಇವಳಿಗಿದೆ. ಯೂ ಟ್ಯೂಬಿನಲ್ಲಿ ಕಥೆ ಹೇಳುವ ಸರಣಿ ಮಾಡಿದ್ದಾಳೆ.
ಮೊದಲ ಪುಸ್ತಕ
ಹಾಸನದಲ್ಲಿ ತೊಂಭತ್ತರ ದಶಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಹರೀಶರು ವಿದ್ಯಾರ್ಥಿ. ಗೆಳೆಯ ಕೇಶವನ ಒತ್ತಾಸೆಗೆ ‘ಕನ್ನಡ ಸಾಹಿತ್ಯದ ಮೊದಲ ಹೆಜ್ಜೆಗಳು’ ಎಂಬ 40 ಪುಟಗಳ ಕಿರು ಪುಸ್ತಕದ ರಚನೆ. ಗೆಳೆಯನೇ ಅದನ್ನು ಪ್ರಕಟಿಸಿˌ ಸಮ್ಮೇಳನದಲ್ಲಿ ಭೇಟಿಯಾದ ಸಾ ಶಿ ಮರುಳಯ್ಯನವರ ಕೈಲಿ ಲೋಕಾರ್ಪಣೆ ಮಾಡಿಸಿದರು. ಈಗ ಆ ಪುಸ್ತಕ ಇವರ ಬಳಿಯೂ ಇಲ್ಲ. ಯಾರಾದರೂ ಕಾಪಿಟ್ಟುಕೊಂಡಿದ್ದಲ್ಲಿ ಅಮೂಲ್ಯ ದಾಖಲೆಯಾದೀತು.
ಕವಿಯೂ…
ಈಗ ಹರೀಶರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ˌ ಬೆಂಗಳೂರು ವತಿಯಿಂದ ನಡೆಯುತ್ತಿರುವ ಬೇಂದ್ರೆಯವರ ಜ್ಞಾನಪೀಠ ಕೃತಿ ‘ನಾಕುತಂತಿ’ ಯ ಷಷ್ಟಿಪೂರ್ತಿ ಸರಣಿ ಕಾರ್ಯಕ್ರಮದ ರೂವಾರಿ. ಅದರ 44 ಕವನಗಳನ್ನೂ ವಿಶ್ಲೇಷಿಸಿ ಅರ್ಥೈಸುವ ಪ್ರತಿ ತಿಂಗಳ ಉಪನ್ಯಾಸ ನೀಡುತ್ತಿದ್ದಾರೆ. ಕೃತಿಯೊಂದಕ್ಕೆ ಷಷ್ಟಿಪೂರ್ತಿ ನಡೆಯುತ್ತಿರುವುದು ಒಂದು ದಾಖಲೆ. ಇದರ ಸ್ಪೂರ್ತಿಯಿಂದ ಧಾರವಾಡ ಹಾಗೂ ಚಿಕ್ಕಮಗಳೂರಿನಲ್ಲೂ ಕಾರ್ಯಕ್ರಮಗಳಾಗಿವೆ.
ಲೇಖನˌ ವಿಮರ್ಶೆˌ ಭಾಷಣ ಹಾಗೂ ಕಾದಂಬರಿಯಿಂದ ಹೆಚ್ಚು ಪರಿಚಿತರಾಗಿರುವ ಹರೀಶ ಕವಿಯೂ ಸಹ. ಲಯಬದ್ಧ ಕವನಗಳನ್ನನೇಕ ರಚಿಸಿರುವ ಇವರ ಕವನ ಹಾಸನ ಆಕಾಶವಾಣಿಯಲ್ಲಿ ಗೀತೆಯಾಗಿ ರಾಗಗೊಂಡು ಪ್ರಸಾರವೂ ಆಗಿದೆ. ಬೇಂದ್ರೆ ಪ್ರಭಾವದಿಂದಾಗಿ ಆ ರೀತಿಯ ಸಾದೃಶ ಕವಿತೆಗಳನ್ನೂ ರಚಿಸಿದ್ದಾರೆ.







